ಭಾನುವಾರ, ಏಪ್ರಿಲ್ 2, 2023
24 °C
ಪ್ರವಾಸೋದ್ಯಮದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಕಡಲತೀರಗಳು

ಗೋಕರ್ಣ: ಪ್ರವಾಸಿಗರಿಗೆ ಮೂಲ ಸೌಕರ್ಯ ನಿರ್ಲಕ್ಷ್ಯ

ರವಿ ಸೂರಿ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಇಲ್ಲಿ ಪ್ರಾಕೃತಿಕ ಸೌಂದರ್ಯದಿಂದ ಕೂಡಿದ ಐದು ಪ್ರಸಿದ್ಧ ಕಡಲ ಕಿನಾರೆಗಳಿವೆ. ಜಗತ್ತಿನ ಪ್ರವಾಸೋದ್ಯಮ ನಕಾಶೆಯಲ್ಲೂ ಸ್ಥಾನ ಪಡೆದಿವೆ. ಆದರೆ, ಮೂಲಸೌಕರ್ಯಗಳ ಕೊರತೆ ಮಾತ್ರ ಇಂದಿಗೂ ಕಾಡುತ್ತಿದೆ.

ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ‘ಸ್ವದೇಶಿ ದರ್ಶನ’ ಯೋಜನೆಯಡಿ, 2019– 20ನೇ ಸಾಲಿನಲ್ಲಿ ಓಂ ಬೀಚ್ ಹಾಗೂ ಕುಡ್ಲೆ ಬೀಚ್‌ಗಳಿಗೆ ₹ 3.11 ಕೋಟಿ ಅನುದಾನ ಬಂದಿದೆ. ‘ಕೋಸ್ಟಲ್ ವೃತ್ತ’ ಯೋಜನೆಯಡಿ ಗೋಕರ್ಣ ಮೇನ್ ಬೀಚ್‌ನಲ್ಲಿ ₹ 1.91 ಕೋಟಿ, ಓಂ ಬೀಚ್‌ನಲ್ಲಿ ₹ 2.90 ಕೋಟಿ ಮತ್ತು ಕುಡ್ಲೆ ಬೀಚ್‌ನಲ್ಲಿ ₹ 1.81 ಕೋಟಿ ಮೊತ್ತದ ಕಾಮಗಾರಿಯಾದ ಮಾಹಿತಿಯಿದೆ. ಆದರೆ, ದಾಖಲಿಸಲಾದ ಕಾಮಗಾರಿಗಳು ಯಾವಾಗ ಆಗಿವೆ ಎಂಬುದು ಸ್ಥಳೀಯರಿಗೇ ತಿಳಿದಿಲ್ಲ!.

ಗೋಕರ್ಣದ ಮೇನ್ ಬೀಚ್‌ನಲ್ಲಿ ಬಿಟ್ಟರೆ ಉಳಿದೆಲ್ಲೂ ಶೌಚಾಲಯಗಳಿಲ್ಲ. ಮೇನ್ ಬೀಚ್‌ನಲ್ಲಿ ಪ್ರವಾಸೋದ್ಯಮ ಇಲಾಖೆಯು, ನಿರ್ಮಿತಿ ಕೇಂದ್ರದಿಂದ ನಿರ್ಮಿಸಿದ ಸ್ನಾನ ಗೃಹ ಮತ್ತು ಶೌಚಾಲಯ ಈಗ ಉಪಯೋಗಕ್ಕೆ ಬಾರದಾಗಿದೆ. ಅದನ್ನು ಸರಿಪಡಿಸುವುದರ ಬದಲು ಸ್ಥಳೀಯ ಆಡಳಿತ, ಪಕ್ಕದಲ್ಲಿಯೇ ಮತ್ತೊಂದು ಸ್ನಾನ ಗೃಹ ಮತ್ತು ಶೌಚಾಲಯ ನಿರ್ಮಿಸಲು ಮುಂದಾಗಿದೆ. ಪ್ರವಾಸೋದ್ಯಮ ಇಲಾಖೆಯ ಅನುದಾನದಿಂದ ಕಟ್ಟಿದ ಕಟ್ಟಡಕ್ಕೆ ಗುಂಡಿ ತೋಡಿದೆ.

ಮೇನ್ ಬೀಚ್‌ನಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕವು ಸ್ವಲ್ಪ ದಿನಗಳಲ್ಲೇ ಸ್ಥಗಿತವಾಗಿದೆ. ಅಲ್ಲಿಯೇ ಪ್ರವಾಸಿಗರ ವಾಹನ ನಿಲುಗಡೆ ಸ್ಥಳವಿದ್ದು ಸ್ವಚ್ಛತೆ ದೂರವಾಗಿದೆ. ಗೋಕರ್ಣದಿಂದ ಕುಡ್ಲೆ ಬೀಚ್, ಓಂ ಬೀಚ್‌ಗೆ ಹೋಗುವ ರಸ್ತೆ ಎರಡು ವರ್ಷಗಳಿಂದ ಸಂಪೂರ್ಣ ಅಜೀರ್ಣಾವಸ್ಥೆ ತಲುಪಿದೆ.

ಗೋಕರ್ಣದ ಶೇ 90ರಷ್ಟು ಮಂದಿ ಪ್ರವಾಸೋದ್ಯಮವನ್ನೇ ಅವಲಂಬಿಸಿದ್ದಾರೆ. ವಿದೇಶಿಯರ ಜೊತೆಗೇ ಸ್ವದೇಶಿ ಪ್ರವಾಸಿಗರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದು ಕಾಲದಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧವಾಗಿದ್ದ ಪ್ಯಾರಡೈಸ್ ಬೀಚ್, ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

‘ಅಭಿವೃದ್ಧಿಯ ಹೆಸರಿನಲ್ಲಿ ಸಂಸ್ಕೃತಿ ಜೀವನ ಶೈಲಿ ಬದಲಾವಣೆ ಆಗಬಾರದು, ಕೆಲವು ವರ್ಷಗಳಿಂದ ಓಂ ಬೀಚ್, ಕುಡ್ಲೆ ಬೀಚ್‌ಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಇಲ್ಲಿಯ ಪ್ರಾಕೃತಿಕ ಸೌಂದರ್ಯ ನಾಶವಾಗುತ್ತಿದೆ’ ಎಂದು ಹಲವು ವರ್ಷಗಳಿಂದ ಬರುತ್ತಿರುವ ವಿದೇಶಿ ಪ್ರವಾಸಿಗರು ಅಭಿಪ್ರಾಯ ಪಟ್ಟಿದ್ದಾರೆ.

‘ಆದಾಯವಿದ್ದರೂ ಅಭಿವೃದ್ಧಿಯಿಲ್ಲ’:

ಪ್ರವಾಸಿಗರ ಉಪಯೋಗಕ್ಕೆಂದು ಸಮುದ್ರ ತೀರಗಳಲ್ಲಿ ಪ್ರತಿ ವರ್ಷ ತಾತ್ಕಾಲಿಕ ಶೆಕ್ಸ್, ವಸತಿ ಗೃಹಗಳನ್ನು ಸ್ಥಳೀಯರು ಹಲವು ವರ್ಷಗಳಿಂದ ನಿರ್ಮಿಸುತ್ತಿದ್ದಾರೆ. ಅದಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ನಿರ್ದಿಷ್ಟ ಶುಲ್ಕವನ್ನು ಪಡೆಯುತ್ತದೆ.

ಗೋಕರ್ಣದಾದ್ಯಂತ 500ಕ್ಕೂ ಹೆಚ್ಚು ಅಂಗಡಿಗಳಿವೆ. ಇದರಿಂದಲೂ ಗ್ರಾಮ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ಆದಾಯವಿದೆ. ಆದರೆ, ಅವರಿಗೆ ನಿರ್ದಿಷ್ಟ ಸೌಲಭ್ಯಗಳಿಲ್ಲದೇ ಅಭದ್ರತೆಯ ಭಾವನೆ ಮೂಡಿದೆ. ಸಿ.ಆರ್.ಝೆಡ್ ನಿಯಮಗಳನ್ನು ಮುಂದಿಟ್ಟು ಅಧಿಕಾರಿಗಳು, ಅಂಗಡಿಕಾರರಿಗೆ ಅನುಮತಿ ನೀಡುತ್ತಿಲ್ಲ ಎಂಬ ಆರೋಪಗಳೂ ಬಲವಾಗಿದೆ.

-----

* ಕೆಲವೊಮ್ಮೆ ಉಪ್ಪು ನೀರಿನಲ್ಲೇ ಸ್ನಾನ ಮಾಡಬೇಕಾಗುತ್ತದೆ. ಶೌಚಾಲಯದಲ್ಲಿ ಹಣ ವಸೂಲಿ ಮಾಡುತ್ತಾರೆಯೇ ಹೊರತು ಒಳ್ಳೆಯ ನೀರನ್ನೂ ಕೊಡುವುದಿಲ್ಲ.

- ಎಸ್.ಗಿರೀಶ್, ದಾವಣಗೆರೆಯ ಪ್ರವಾಸಿಗ

* ಗೋಕರ್ಣದಲ್ಲಿ ಒಳ್ಳೆಯ ಪರಿಸರವಿದೆ. ಸುಂದರ ಕಡಲ ತೀರವಿದೆ. ಆದರೆ, ಪ್ರವಾಸಿಗರಿಗೆ ಅಗತ್ಯವಿರುವ ಮೂಲ ಸೌಲಭ್ಯಗಳು ಮಾತ್ರ ಲಭ್ಯವಿಲ್ಲ.

- ಎಚ್.ರಮೇಶ, ಬೆಂಗಳೂರಿನ ಪ್ರವಾಸಿಗ

* ಗೋಕರ್ಣ ಧಾರ್ಮಿಕ ಕ್ಷೇತ್ರದೊಂದಿಗೆ ಪ್ರವಾಸೋದ್ಯಮದಲ್ಲೂ ಹೆಸರು ಪಡೆದಿದೆ. ಆದರೆ, ಪ್ರವಾಸಗರಿಗೆ ಬೇಕಾದ ಸೌಕರ್ಯಗಳ ಅಭಿವೃದ್ಧಿಯಾಗಬೇಕು.

- ಅರವಿಂದ ಪಾಟೀಲ್, ಪುಣೆಯ ಪ್ರವಾಸಿಗ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು