ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ನಿರ್ಬಂಧ ಲೆಕ್ಕಿಸದ ಪ್ರವಾಸಿಗರು; ಪ್ರಕ್ಷುಬ್ಧವಾದ ಸಮುದ್ರಕ್ಕೆ ಇಳಿದು ಆಟ

ಪ್ರಕ್ಷುಬ್ಧಗೊಂಡ ಸಮುದ್ರಕ್ಕೆ ಇಳಿದು ಆಟ, ಅಪಾಯಕ್ಕೆ ಆಹ್ವಾನ
Published 26 ಮೇ 2024, 4:24 IST
Last Updated 26 ಮೇ 2024, 4:24 IST
ಅಕ್ಷರ ಗಾತ್ರ

ಕಾರವಾರ: ಕೆಲ ದಿನಗಳಿಂದ ವಾತಾವರಣದಲ್ಲಿ ಉಂಟಾದ ಬದಲಾವಣೆಯಿಂದ ಸಮುದ್ರ ಪ್ರಕ್ಷುಬ್ಧಗೊಂಡ ಪರಿಣಾಮ ನೀರಿಗೆ ಇಳಿಯದಂತೆ ಎಚ್ಚರಿಸಲಾಗಿದೆ. ಆದರೆ, ಅಪಾಯ ಲೆಕ್ಕಿಸದ ಪ್ರವಾಸಿಗರು ಸಮುದ್ರಕ್ಕೆ ಇಳಿಯುವ ಸಾಹಸ ಮಾಡುತ್ತಿದ್ದರೂ ತಡೆಯುವವರೇ ಇಲ್ಲದಂತಾಗಿದೆ.

ಜಿಲ್ಲೆಯ ಕಡಲತೀರಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಎಚ್ಚರಿಕೆ ಸಲುವಾಗಿ ಕೆಂಪು ಬಾವುಟ ಅಳವಡಿಸಲಾಗಿದೆ. ಜೀವ ರಕ್ಷಕ ಸಿಬ್ಬಂದಿ ನೀರಿಗೆ ಇಳಿಯದಂತೆ ಜನರಿಗೆ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಮಾತು ಲೆಕ್ಕಿಸದೆ ನೀರಿಗಿಳಿದು ಅಪಾಯಕ್ಕೆ ಸಿಲುಕುತ್ತಿರುವ ಪ್ರವಾಸಿಗರು ತೊಂದರೆ ಎದುರಿಸುವಂತಾಗುತ್ತಿದೆ.

ಕಾರವಾರ, ಮುರ್ಡೇಶ್ವರ, ಗೋಕರ್ಣ ಕಡಲತೀರಗಳಲ್ಲಿ ಕಳೆದ ನಾಲ್ಕು ತಿಂಗಳಿನಲ್ಲಿ 24ಕ್ಕಿಂತ ಹೆಚ್ಚು ಪ್ರವಾಸಿಗರನ್ನು ರಕ್ಷಣೆ ಮಾಡುವ ಕೆಲಸ ನಡೆದಿತ್ತು. ಈಗಂತೂ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಅರಬ್ಬಿ ಸಮುದ್ರದಲ್ಲಿ ರಭಸದ ಗಾಳಿ ಬೀಸುವ ಜತೆಗೆ ಅಲೆಗಳ ಅಬ್ಬರ ಹೆಚ್ಚಿದೆ. ಪ್ರವಾಸಿ ಸೀಸನ್ ಮುಗಿಯುವ ಹಂತದಲ್ಲಿದ್ದು ದೂರದ ಊರುಗಳಿಂದ ಬಂದ ಪ್ರವಾಸಿಗರು ಎಚ್ಚರಿಕೆ ಗಮನಿಸದೆ ನೀರಿಗಿಳಿಯುವ ದುಸ್ಸಾಹಸಕ್ಕೆ ಮುಂದಾಗುತ್ತಿದ್ದಾರೆ. ಟ್ಯಾಗೋರ್ ಕಡಲತೀರದಲ್ಲಿ ಅಳವಡಿಸಲಾಗಿದ್ದ ಕೆಂಪು ಬಾವುಟದ ಸಮೀಪದವರೆಗೂ ಸಮುದ್ರದ ಅಲೆಗಳು ಅಪ್ಪಳಿಸುತ್ತಿದ್ದರೂ ಅವುಗಳೊಂದಿಗೆ ಪ್ರವಾಸಿಗರು ಆಟದಲ್ಲಿ ನಿರತರಾಗಿದ್ದರು.

‘ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಸುರಕ್ಷತೆ ಕ್ರಮವಾಗಿ ಕಡಲತೀರಗಳಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ. ಆದರೂ ದೂರದ ಊರುಗಳಿಂದ, ಮಹಾನಗರಗಳಿಂದ ಬಂದ ಪ್ರವಾಸಿಗರು ಎಚ್ಚರಿಕೆಯನ್ನೂ ಲೆಕ್ಕಿಸುತ್ತಿಲ್ಲ. ಅವರ ಮೇಲೆ ನಿಗಾ ಇಡುವಂತೆ ಕಟ್ಟನಿಟ್ಟಾಗಿ ಜೀವ ರಕ್ಷಕ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಎಚ್.ವಿ.ಜಯಂತ್ ತಿಳಿಸಿದರು.

‘ಕಡಲತೀರಗಳಲ್ಲಿ ಈ ಹಿಂದೆ ಖಾಕಿ ಸಮವಸ್ತ್ರ ಧರಿಸುತ್ತಿದ್ದ ಪ್ರವಾಸಿ ಮಿತ್ರರನ್ನು ಸುರಕ್ಷತೆ ನಿಗಾ ಇಡಲು ನಿಯೋಜಿಸಲಾಗಿತ್ತು. ಕೆಲ ದಿನಗಳಿಂದ ಪ್ರವಾಸಿ ಮಿತ್ರರನ್ನು ಕರ್ತವ್ಯದಿಂದ ಹಿಂಪಡೆಯಲಾಗಿದೆ. ಕೇವಲ ಜೀವರಕ್ಷಕ ಸಿಬ್ಬಂದಿ ಮಾತ್ರ ಸುರಕ್ಷತೆ ನಿಗಾ ಇಡುತ್ತಿದ್ದಾರೆ. ಪ್ರವಾಸಿಗರಿಗೆ ಎಚ್ಚರಿಕೆ ನೀಡಲು ಹೋದ ಜೀವರಕ್ಷಕರ ಮೇಲೆ ಹಲ್ಲೆ ನಡೆಸುತ್ತಿರುವ ಘಟನೆ ಸಾಕಷ್ಟು ನಡೆದಿದೆ. ಪ್ರವಾಸಿಗರ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿಯನ್ನೇ ಕಡಲತೀರಗಳಿಗೆ ನಿಯೋಜಿಸುವುದು ಸೂಕ್ತ’ ಎನ್ನುತ್ತಾರೆ ಸೂರಜ ಗಂಗಾವಳಿಕರ. 

ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಜಲಸಾಹಸ ಚಟುವಟಿಕೆಗೆ ಬಳಕೆಯಾಗುವ ಬೋಟ್‍ನ್ನು ದಡಕ್ಕೆ ತಂದು ಮಳೆ–ಗಾಳಿಯಿಂದ ರಕ್ಷಿಸಲು ತಾಡಪತ್ರಿ ಕಟ್ಟುವಲ್ಲಿ ಸಿಬ್ಬಂದಿ ನಿರತರಾಗಿದ್ದರು.
ಕಾರವಾರದ ಟ್ಯಾಗೋರ್ ಕಡಲತೀರದಲ್ಲಿ ಜಲಸಾಹಸ ಚಟುವಟಿಕೆಗೆ ಬಳಕೆಯಾಗುವ ಬೋಟ್‍ನ್ನು ದಡಕ್ಕೆ ತಂದು ಮಳೆ–ಗಾಳಿಯಿಂದ ರಕ್ಷಿಸಲು ತಾಡಪತ್ರಿ ಕಟ್ಟುವಲ್ಲಿ ಸಿಬ್ಬಂದಿ ನಿರತರಾಗಿದ್ದರು.

Quote - ಕಡಲತೀರದಲ್ಲಿ ನಿರ್ಬಂಧ ಇನ್ನಷ್ಟು ಕಠಿಣಗೊಳಿಸಲಾಗುವುದು. ಅಗತ್ಯ ಬಿದ್ದರೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ಯೋಜಿಸಲಾಗುವುದು ಎಚ್.ವಿ.ಜಯಂತ್ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ

Cut-off box - ದಡ ಸೇರಿದ ಪ್ರವಾಸಿ ಬೋಟ್‍ಗಳು ಹವಾಮಾನ ವೈಪರಿತ್ಯದ ಪರಿಣಾಮ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಪ್ರವಾಸಿ ಸೀಸನ್ ಮುಗಿಯುವ ವಾರದ ಮೊದಲೇ ಜಲಸಾಹಸ ಚಟುವಟಿಕೆ ಬೋಟ್‍ಗಳು ದಡ ಸೇರಿವೆ. ಇಲ್ಲಿನ ಟ್ಯಾಗೋರ್ ಕಡಲತೀರ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ ಬಹುಪಾಲು ಜಲಸಾಹಸ ಚಟುವಟಿಕೆಯ ಬೋಟ್‍ಗಳನ್ನು ದಡಕ್ಕೆ ಸೇರಿಸಿ ಮಳೆ–ಗಾಳಿಯಿಂದ ರಕ್ಷಿಸಲು ತಾಡಪತ್ರಿ ಪ್ಲಾಸ್ಟಿಕ್ ಮುಚ್ಚುವ ಕೆಲಸ ನಡೆಯುತ್ತಿದೆ. ‘ಮೇ ಅಂತ್ಯದವರೆಗೂ ಪ್ರವಾಸಿಗರು ಭಟಿ ನೀಡುತ್ತಿದ್ದರು. ಈ ಬಾರಿ ಅವಧಿಗೆ ಮೊದಲೇ ಬೋಟ್‍ಗಳನ್ನು ಸುರಕ್ಷಿತವಾಗಿಡುವ ಕೆಲಸ ಮಾಡಲಾಗುತ್ತಿದೆ. ಹವಾಮಾನ ವೈಪರಿತ್ಯ ಉದ್ಯಮಕ್ಕೆ ಏಟು ಕೊಟ್ಟಿದೆ’ ಎಂದು ಜಲಸಾಹಸ ಚಟುವಟಿಕೆಯ ಉದ್ಯಮಿ ಅವಿನಾಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT