ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ: ನಗರೋತ್ಥಾನ ಕಾಮಗಾರಿಗೆ ಗ್ರಹಣ

Published 8 ಮಾರ್ಚ್ 2024, 5:46 IST
Last Updated 8 ಮಾರ್ಚ್ 2024, 5:46 IST
ಅಕ್ಷರ ಗಾತ್ರ

ಭಟ್ಕಳ: ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಗರೋತ್ಥಾನ ಯೋಜನೆ ಕೆಲಸಗಳು ಅರ್ಧಕ್ಕೆ ಸ್ಥಗಿತಗೊಂಡಿದ್ದು, ಕಾಮಗಾರಿ ಕೈಗೊಂಡಿದ್ದ ಗುತ್ತಿಗೆದಾರರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪ ವ್ಯಕ್ತವಾಗಿದೆ.

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಅಮೃತ ನಗರ ಯೋಜನಯಡಿ ₹5 ಕೋಟಿ ಮೊತ್ತದಲ್ಲಿ ರಸ್ತೆ, ಚರಂಡಿ, ಒಳಚರಂಡಿ ಚೇಂಬರ್ ಬದಲಾವಣೆ, ಇಂಟರ್‌ಲಾಕ್ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.

ಕುಂದಾಪುರ ಮೂಲದ ಗುತ್ತಿಗೆದಾರರೊಬ್ಬರು 2022ರ ನವೆಂಬರ್‌ನಲ್ಲಿ ಟೆಂಡರ್ ಮೂಲಕ ಕಾಮಗಾರಿಗಳ ಗುತ್ತಿಗೆ ಪಡೆದಿದ್ದರು. ಆರಂಭದಲ್ಲಿಯೇ ನಿಧಾನಗತಿಯಲ್ಲಿ ಕಾಮಗಾರಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರು ಕೇಳಿಬಂದಿತ್ತು. ಸದ್ಯ ಕಾಮಗಾರಿ ನಡೆಸಿದ ಗುತ್ತಿಗೆದಾರ ಪಟ್ಟಣ ವ್ಯಾಪ್ತಿಯ ಕಾಂಕ್ರೀಟ್ ರಸ್ತೆ ಕೆಲಸವನ್ನು ಮಾತ್ರ ಮುಗಿಸಿ ಉಳಿದ ಕೆಲಸವನ್ನು ಬಿಟ್ಟು ಪರಾರಿಯಾಗಿದ್ದಾರೆ ಎನ್ನುವುದು ಪುರಸಭೆ ಸದಸ್ಯರ ಆರೋಪ.

‘ಟೆಂಡರ್ ಅವಧಿ ಮುಗಿದರೂ ಅರ್ಧದಷ್ಟು ಕಾಮಗಾರಿಯನ್ನೂ ಮುಗಿಸಿಲ್ಲ. ಗುತ್ತಿಗೆದಾರರ ಬಳಿ ಟೆಂಡರ್ ಅರ್ಹತೆಗೆ ತಕ್ಕಂತೆ ಯಂತ್ರೋಪಕರಣಗಳು, ತಜ್ಞರ ತಂಡ ಇಲ್ಲ. ಈಗಿರುವ ಅವರ ಸಾಮರ್ಥ್ಯಕ್ಕೆ ಪುರಸಭೆ ವ್ಯಾಪ್ತಿಯ ಅಷ್ಟು ಕೆಲಸ ಮಾಡಿ ಮುಗಿಸಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಮೊದಲು ಟೆಂಡರ್ ಪಡೆದ ಕೆಲವು ಕಡೆ ಅವರನ್ನು ಕಪ್ಪು ಪಟ್ಟಿಗೆ ಸೇರಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಮಾಹಿತಿ ಗೊತ್ತಿದ್ದರೂ ಜಿಲ್ಲಾ ನರಾಭಿವೃದ್ದಿ ಕೋಶ ಅವರಿಗೆ ಟೆಂಡರ್ ನೀಡಿದ್ದು ಸರಿಯಲ್ಲ’ ಎಂದು ಪುರಸಭೆ ಸದಸ್ಯರಾದ ರಾಘವೇಂದ್ರ ಶೇಟ್, ಕೃಷ್ಣಾನಂದ ಪೈ, ಕೈಸರ್ ಮೊಹತಿಶ್ಯಾಂ, ಇಂಸಾದ್ ಹೇಳುತ್ತಾರೆ.

‘ಅರೆಬರೆ ಕಾಮಗಾರಿಯಿಂದ ಪಟ್ಟಣದಲ್ಲಿ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ತುರ್ತಾಗಿ ಆಗಬೇಕಿದ್ದ ಚರಂಡಿ, ಒಳಚರಂಡಿ ಚೇಂಬರ್ ಬದಲಾವಣೆಯಂತಹ ಕೆಲಸಗಳು ನನೆಗುದಿಗೆ ಬಿದ್ದಿವೆ. ಇವುಗಳನ್ನು ಕೂಡ;ಏ ಮಾಡಿಸಬೇಕು. ಇಲ್ಲವಾದರೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು’ ಎಂದೂ ಒತ್ತಾಯಿಸಿದರು.

Quote - ಕಾಮಗಾರಿ ಮಾಡದಿರುವ ಬಗ್ಗೆ ಗುತ್ತಿಗೆದಾರರಿಗೆ ಪುರಸಭೆಯಿಂದ ಮೂರು ನೋಟಿಸ್ ನೀಡಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡದಿದ್ದಾಗ ಜಿಲ್ಲಾ ನಗರಾಭಿವೃದ್ದಿ ಕೋಶದಿಂದ 15 ದಿನಗಳ ಹಿಂದೆ ಗುತ್ತಿಗೆದಾರರಿಗೆ ನೋಟಿಸ್ ಜಾರಿಯಾಗಿದೆ ಎನ್.ಎಂ.ಮೇಸ್ತ ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT