ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | 'ನೌಕಾನೆಲೆ ಯೋಜನೆ ಸಂತ್ರಸ್ತರಿಗೆ ಪರಿಹಾರಕ್ಕೆ ಪ್ರಯತ್ನ'

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ ಕುಮಾರ ಸಿಂಗ್ ಅಸಮಾಧಾನ
Published 27 ಜೂನ್ 2024, 14:12 IST
Last Updated 27 ಜೂನ್ 2024, 14:12 IST
ಅಕ್ಷರ ಗಾತ್ರ

ಕಾರವಾರ: ‘ನೌಕಾನೆಲೆ ಯೋಜನೆ ಉದ್ದೇಶಕ್ಕಾಗಿ ಅಂಕೋಲಾ ತಾಲ್ಲೂಕಿನ ನೆಲ್ಲೂರು, ಕಂಚಿನಬೈಲು ಗ್ರಾಮದಲ್ಲಿ ಭೂ ಸ್ವಾಧೀನ ಪಡಿಸಿಕೊಂಡಿರುವ 58.11 ಎಕರೆಗೆ ಸಂಬಂಧಿಸಿದಂತೆ, ಸಂತ್ರಸ್ತರಿಗೆ ಇದುವರೆಗೆ ಪರಿಹಾರ ನೀಡದ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿತೇಶ ಕುಮಾರ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ, ಸೀಬರ್ಡ್ ಯೋಜನೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ದೊರಕಿಸಲು ಖುದ್ದಾಗಿ ದೆಹಲಿಯ ರಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ರೈತರಿಗೆ ಪರಿಹಾರವನ್ನೂ ನೀಡಿಲ್ಲ. ಅಲ್ಲದೇ ಈ ಭೂಮಿಯಲ್ಲಿ ಯಾವುದೇ ಕೃಷಿ ಚಟುವಟಿಕೆ ಮಾಡಲು ಸಹ ಅನುಮತಿ ನೀಡುತ್ತಿಲ್ಲ. ಈ ಭೂಮಿಗೆ ಈಗಾಗಲೇ ₹18.91 ಕೋಟಿ ಪರಿಹಾರದ ಮೊತ್ತವನ್ನು ಬಿಡುಗಡೆಗೊಳಿಸುವಂತೆ ಬೆಂಗಳೂರಿನ ಡಿಫೆನ್ಸ್ ಎಸ್ಟೆಟ್ ಅಧಿಕಾರಿಗಳೊಂದಿಗೆ ಹಲವು ಪತ್ರ ಬರೆದರೂ ಸಹ ಯಾವುದೇ ಪ್ರಗತಿಯಾಗಿಲ್ಲ ಎಂದು ಹೇಳಿದರು.

ನೌಕಾನೆಲೆಯ ಕಾರಣದಿಂದ ಭೂಮಿ ಕಳೆದುಕೊಂಡಿರುವ 158 ಕುಟುಂಬಗಳಲ್ಲಿ ವಿವಿಧ ಕಾರಣಗಳಿಂದ ಇದುವರೆಗೆ ಪರಿಹಾರ ದೊರೆಯದ ಕುಟುಂಬಗಳಿಗೆ ಸಂಬಂಧಿಸಿದಂತೆ ಒಂದು ತಿಂಗಳ ಒಳಗೆ ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ಮುಕ್ತಾಯಗೊಳಿಸಿ, ಪರಿಹಾರ ದೊರೆಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಮುದಗಾದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿರುವ ಅಣೆಕಟ್ಟಿನಿಂದಾಗಿ ಮಳೆಗಾಲದಲ್ಲಿ ನೌಕಾನೆಲೆಯೊಳಗೆ ನೀರು ನುಗ್ಗುತ್ತಿರುವ ಬಗ್ಗೆ ರಕ್ಷಣಾ ಇಲಾಖೆಯಿಂದ ಬರುತ್ತಿರುವ ದೂರುಗಳ ಬಗ್ಗೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುತಿಸಲಾದ ಬ್ಲಾಕ್ ಸ್ಟಾಟ್‌ಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಅಪಘಾತಗಳನ್ನು ನಿಯಂತ್ರಿಸುವಂತೆ ಮತ್ತು ಹೆದ್ದಾರಿಯಲ್ಲಿ ಬೀದಿ ದೀಪಗಳನ್ನು ಅಳವಡಿಸುವಂತೆ ಐ.ಆರ್.ಬಿ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರ ಕಾಂದೂ, ಉಪ ವಿಭಾಗಾಧಿಕಾರಿಗಳಾದ ಕನಿಷ್ಕ, ಕಲ್ಯಾಣಿ ಕಾಂಬ್ಳೆ, ನೌಕಾದಳ ಮತ್ತು ತಟರಕ್ಷಕ ದಳದ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT