ಗುರುವಾರ , ಡಿಸೆಂಬರ್ 8, 2022
18 °C

ವರ್ಷವೂ 20 ಸಾವಿರ ಜನರಿಗೆ ರೇಬೀಸ್: ಅವರಲ್ಲಿ ಶೇ 40ರಷ್ಟು ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ರೇಬೀಸ್‌ ವೈರಸ್ ನಿಯಂತ್ರಣಕ್ಕೆ 130 ವರ್ಷಗಳಿಂದ ಲಸಿಕೆಯಿದೆ. ಆದರೂ ಸೋಂಕನ್ನು ನಾವು ನಿರ್ಮೂಲನೆ ಮಾಡಲು ಸಾಧ್ಯವಾಗದಿರುವುದು ನಾಚಿಕೆಯ ಸಂಗತಿಯಾಗಿದೆ. ನಾಯಿಗಳಿಗೆ ನಿರಂತರವಾಗಿ ಲಸಿಕೆ ನೀಡುವುದರಿಂದ ರೇಬೀಸ್ ಪ್ರಕರಣಗಳನ್ನು ಶೂನ್ಯವಾಗಿಸಲು ಸಾಧ್ಯವಿದೆ’ ಎಂದು ‘ಮಿಷನ್ ರೇಬೀಸ್’ ಮುಖ್ಯಸ್ಥ ಡಾ.ಮುರುಗನ್.ಎ ಹೇಳಿದರು.

ನಗರದಲ್ಲಿ ಬುಧವಾರ ‘ಬೆಟರ್ ಕಾರವಾರ’ ಸಂಘಟನೆಯು ಹಮ್ಮಿಕೊಂಡ, ಬೀದಿನಾಯಿಗಳು, ಬೆಕ್ಕುಗಳು ಹಾಗೂ ಜಾನುವಾರು ಹಿತರಕ್ಷಣೆ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಿರಂತರ ಲಸಿಕಾಕರಣದಿಂದ ಗೋವಾದಲ್ಲಿ ನಾಲ್ಕು ವರ್ಷಗಳಿಂದ ಒಂದೂ ರೇಬೀಸ್ ಪ್ರಕರಣವಿಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಅತಿ ಹೆಚ್ಚು ಪ್ರಕರಣಗಳಿವೆ. ‌ರೇಬೀಸ್ ಮನುಷ್ಯನಿಗೆ ಅತ್ಯಂತ ದಯನೀಯವಾದ ಸಾವು ಉಂಟು ಮಾಡಬಲ್ಲದು. ದೇಶದಲ್ಲಿ ಪ್ರತಿ ವರ್ಷ ಸುಮಾರು 20 ಸಾವಿರ ಜನ ಇದಕ್ಕೆ ತುತ್ತಾಗುತ್ತಿದ್ದಾರೆ. ಅವರಲ್ಲಿ ಶೇ 40ರಷ್ಟು ಮಕ್ಕಳೇ ಇರುವುದು ಕಳವಳಕಾರಿ’ ಎಂದರು.

‘ನಾಯಿಗಳಿಗೆ ರೇಬೀಸ್ ನಿರೋಧಕ ಲಸಿಕೆ ನೀಡುವುದು ಕಡಿಮೆ ವೆಚ್ಚದಾಯಕ. ಇದನ್ನು ಕರ್ನಾಟಕದಲ್ಲಿ ಏಪ್ರಿಲ್‌ನಿಂದ ನಮ್ಮ ಸಂಘಟನೆಯ ಮೂಲಕ ಮಾಡುತ್ತಿದ್ದೇವೆ. ಇದರಲ್ಲಿ ತೊಡಗಿಸಿಕೊಂಡಿರುವವರು ನಾಯಿಗಳ ಚಲನವಲನಗಳನ್ನು ದಾಖಲಿಸುತ್ತಾರೆ. ಯಾವ ರಾಜ್ಯದಿಂದ ವೈರಸ್ ಹರಡುತ್ತಿದೆ ಎಂಬುದನ್ನು ಗುರುತಿಸುತ್ತಿದ್ದಾರೆ’ ಎಂದು ತಿಳಿಸಿದರು.

ಮಿಷನ್ ರೇಬೀಸ್ ಜಿಲ್ಲಾ ಮಾಹಿತಿ ಅಧಿಕಾರಿ ಆಕಾಶ ನಾಯ್ಕ ಮಾತನಾಡಿ, ‘ನಾಯಿಗಳಿಗೆ ಸಂಪೂರ್ಣವಾಗಿ ಲಸಿಕೆ ನೀಡಿರುವ ಭಾಗದಲ್ಲಿ ರೇಬೀಸ್ ಮುಕ್ತ ಪ್ರದೇಶವೆಂದು ಘೋಷಿಸಲಾಗುತ್ತದೆ. ಕಾರವಾರಕ್ಕೂ ಆ ಹೆಗ್ಗಳಿಕೆ ಬರಲಿ’ ಎಂದು ಆಶಿಸಿದರು.

‘ಕ್ರಮೇಣ ನಿಯಂತ್ರಣ’:

ನಗರಸಭೆ ಆಯುಕ್ತ ಆರ್.ಪಿ.ನಾಯ್ಕ ಮಾತನಾಡಿ, ‘ಕಾರವಾರದಲ್ಲಿ 11 ಸಾವಿರ ನಾಯಿಗಳಿವೆ.  ಅವುಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮತ್ತು ಲಸಿಕೆ ನೀಡಲು ಪ್ರತಿ ನಾಯಿಗೆ ₹ 1,100ರಂತೆ ದರ ನಿಗದಿ ಮಾಡಲಾಗಿದೆ. ಮುಂಬೈನ ಸಂಸ್ಥೆಯು ಗುತ್ತಿಗೆ ಪಡೆದುಕೊಂಡಿದೆ. ಕಳೆದ ಬಾರಿ 1,582 ಹಾಗೂ ಈ ವರ್ಷ 270 ನಾಯಿಗಳನ್ನು ಈ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಈ ನಿಯಂತ್ರಣ ಕ್ರಮವು ನಿಧಾನವಾಗಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ನೆರವಾಗುತ್ತದೆ’ ಎಂದರು.

ಪ್ರಾಣಿಪ್ರಿಯರಾದ ಅನ್ಮೋಲ್ ರೇವಣಕರ್, ನಿರ್ಮಲಾ ಅಲ್ಫಾನ್ಸೊ, ಜೇನೀ, ಅರಣ್ಯ ಇಲಾಖೆ ಸಿಬ್ಬಂದಿ ಗೋಪಾಲ ಭಾಗವಹಿಸಿದ್ದರು. ಬೆಟರ್ ಕಾರವಾರ ಸಂಘಟನೆಯ ಅಮನ್ ಕಾರ್ಯಕ್ರಮ ನಿರ್ವಹಿಸಿದರು.

* ನಾಯಿಯ ಎಂಜಲಿನ ಮೂಲಕ ನಮ್ಮ ಶರೀರ ಪ್ರವೇಶಿಸುವ ವೈರಸ್, ಮಿದುಳನ್ನು ತಲುಪುವ ತನಕ ನಾವು ಸುರಕ್ಷಿತ. ಇದನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿದೆ.

– ಡಾ.ಮುರುಗನ್.ಎ, ‘ಮಿಷನ್ ರೇಬೀಸ್’ ಮುಖ್ಯಸ್ಥ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು