ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಹೊಂಡ | ಮಿಶ್ರ ಕೃಷಿಗೆ ಆಸರೆಯಾದ ನೀರು

ಮೂರು ಎಕರೆ ತೋಟಕ್ಕೆ 55 ಲಕ್ಷ ಲೀಟರ್‌ ಸಂಗ್ರಹಣಾ ಸಾಮರ್ಥ್ಯದ ಘಟಕ
Last Updated 23 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಕುಮಟಾ: ತಾಲ್ಲೂಕಿನ ಮಾಸ್ತಿಹಳ್ಳದ ಕಾಡಿನ ಅಂಚಿನ ತಮ್ಮ ಮೂರು ಎಕರೆ ತೋಟದಲ್ಲಿ ವರ್ಷದುದ್ದಕ್ಕೂ ಕೃಷಿ ಮಾಡಲು ಅನುಕೂಲವಾಗುವಂತೆ ಕೃಷಿಕ ಎಂ.ಬಿ.ನಾಯ್ಕ ನಿರ್ಮಿಸಿಕೊಂಡಿರುವ ಕೃಷಿ ಹೊಂಡ ಗಮನಸೆಳೆಯುತ್ತಿದೆ.

ಅಡಿಕೆ, ಗೇರು, ಮಾವು, ಮೀನು ಸಾಕಾಣಿಕೆ ಉದ್ದೇಶಕ್ಕೆ ನೀರು ಸಂಗ್ರಹಣೆಗಾಗಿ ತಮ್ಮ 16 ಗುಂಟೆ ಜಾಗದಲ್ಲಿ 1600 ಚದರ ಅಡಿ ವಿಸ್ತೀರ್ಣದ ಹೊಂಡ ನಿರ್ಮಿಸಿದ್ದಾರೆ. ಸುಮಾರು 55 ಲಕ್ಷ ಲೀಟರ್ ನೀರು ಸಂಗ್ರಹಣಾ ಸಾಮರ್ಥ್ಯದ ಪ್ಲಾಸ್ಟಿಕ್ ಹಾಸಿನ ನೀರು ಸಂಗ್ರಹಣ ಘಟಕ ಇದಾಗಿದೆ.

ಇಲ್ಲಿ ಸಂಗ್ರಹಿಸುವ ನೀರನ್ನು ಬಳಸಿಕೊಂಡು ಹೈಬ್ರೀಡ್ ತಳಿಯ ಅಡಿಕೆ, ಗೇರು, ಮಾವು ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ನೂರಾರು ಗಿಡಗಳಿಗೆ ಬಿರು ಬೇಸಿಗೆಯಲ್ಲೂ ಕೃಷಿ ಹೊಂಡ ತಂಪೆರೆಯುತ್ತಿದೆ.

ಇಷ್ಟು ದೊಡ್ಡ ನೀರು ಸಂಗ್ರಹಣ ಘಟಕ ಮೇಲ್ನೋಟಕ್ಕೆ ದೊಡ್ಡ ಕರೆಯಂತೆ ಕಾಣುತ್ತಿದ್ದು, ಅಲ್ಲಿ ಒಂದು ಸಾವಿರ ಕಾಗಳಸಿ ಮೀನು ಮರಿಗಳನ್ನು ಬಿಟ್ಟು ಬೆಳೆಸುತ್ತಿದ್ದಾರೆ.

‘ನೀರಿನ ಸ್ವಾವಲಂಬನೆ ಇದ್ದರೆ ಯಾವುದೇ ಮಿಶ್ರ ಕೃಷಿಯ ಬಗ್ಗೆ ಮುಂಚಿತವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬಹುದು. ನೀರಿನ ಅಗತ್ಯಕ್ಕಾಗಿ ರೈತರು ದೊಡ್ಡ ತ್ಯಾಗ ಮಾಡಬೇಕಾಗಿ ಬರುತ್ತದೆ’ ಎನ್ನುತ್ತಾರೆ ಕೃಷಿಕ ಎಂ.ಬಿ.ನಾಯ್ಕ.

‘ಕೊಂಚ ಎತ್ತರ ಪ್ರದೇಶದಲ್ಲಿರುವ ನೀರು ಸಂಗ್ರಹ ಘಟಕ ಮಳೆಗಾಲದಲ್ಲಿ ತುಂಬಿ ತುಳುಕುತ್ತದೆ. ಬೇಸಿಗೆಯಲ್ಲಿ ಇಲ್ಲಿಯ ನೀರನ್ನು ಪಂಪ್ ಮೂಲಕ ಕೆಳ ಪ್ರದೇಶದಲ್ಲಿರುವ ತೋಟಕ್ಕೆ ಬಳಸಿಕೊಳ್ಳಲಾಗುತ್ತಿದ್ದೇನೆ. ಮಳೆಗಾಲದಲ್ಲಿ ಸಂಗ್ರಹವಾದ ನೀರು ಮೇ ಕೊನೆಯ ತನಕ ಕೃಷಿ ಬಳಕೆಗೆ ಸಿಗುತ್ತದೆ’ ಎಂದರು.

‘ದೊಡ್ಡ ಸಂಗ್ರಹಗಾರದಲ್ಲಿ ಒಂದು ಸಾವಿರ ಕಾಗಳಸಿ ಮೀನು ಬಿಡಲಾಗಿದೆ. ಅದಕ್ಕೆ ಕಾಡಿನಲ್ಲಿ ಸಿಗುವ ಅತ್ತಿ ಹಣ್ಣು ಹಾಗೂ ಕೃತಕ ಆಹಾರ ನೀಡಲಾಗುತ್ತಿದ್ದು, ಮೇ ತಿಂಗಳಲ್ಲಿ ಬಲೆ ಹಾಕಿ ಹಿಡಿಯುತ್ತೇವೆ. ತೋಟದಲ್ಲಿ ಎರಡು ವರ್ಷಗಳ ಹಿಂದೆ ಬೇರೆ ಬೇರೆ ತಳಿಯ ಮಾವು, ಹಲಸು, ಗೇರು ಬೆಳೆಸಲಾಗಿದ್ದು ಈ ವರ್ಷದಿಂದ ಫಲ ನೀಡಲಾರಂಭಿಸಿದೆ. ತೋಟದ ಪಕ್ಕದ ಕಾಲುವೆಯಲ್ಲಿ ಮಳೆಗಾದಲ್ಲಿ ಹರಿಯುವ ನೀರಿಗೆ ಅಲ್ಲಲ್ಲಿ ಕಟ್ಟು ಹಾಕಿ ಚೆಕ್ ಡ್ಯಾಂ ನಿರ್ಮಿಸಿದರೆ ತೋಟದ ಸುತ್ತ ನೀರು ಇಂಗಲು ಸಹಕಾರಿಯಾಗುತ್ತದೆ’ ಎಂದರು.

‘ಎಂ.ಬಿ.ನಾಯ್ಕ ಅವರು ಸುಮಾರು ₹ 7 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಬೃಹತ್ ನೀರು ಸಂಗ್ರಹಣಾ ಘಟಕಕ್ಕೆ ತೋಟಗಾರಿಕೆ ಇಲಾಖೆಯಿಂದ ಅಗತ್ಯ ಸಹಾಯಧನ ನೀಡಲಾಗಿದೆ’ ಎಂದು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಚೇತನ ನಾಯ್ಕ ತಿಳಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT