ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಜೇನು ಕುಟುಂಬಕ್ಕೆ ಶುಭ ‘ಸಂದೇಶ’, ಯುವ ಪೀಳಿಗೆಗೆ ಪ್ರೇರಣೆ

ನೂರಾರು ಪೆಟ್ಟಿಗೆ ಮೂಲಕ ಕೃಷಿ
Published 15 ಮಾರ್ಚ್ 2024, 4:48 IST
Last Updated 15 ಮಾರ್ಚ್ 2024, 4:48 IST
ಅಕ್ಷರ ಗಾತ್ರ

ಕಾರವಾರ: ‘ಪುಟ್ಟ ಪುಟ್ಟ ಪೆಟ್ಟಿಗೆಗಳಲ್ಲಿ ಜೇನು ಸಾಕಣೆ ಮಾಡುತ್ತಿದ್ದ ದಿನಗಳಲ್ಲಿ ನಮ್ಮ ಪಕ್ಕದ ಮನೆಯವರಿಗೂ ನಾನು ಜೇನುಕೃಷಿ ಮಾಡುತ್ತಿರುವ ಪರಿಚಯ ಇರಲಿಲ್ಲ. ಆದರೆ, ಈಗ ನನ್ನನ್ನು ಹುಡುಕಿಕೊಂಡು ದೂರದ ಊರುಗಳಿಂದಲೂ ಸಂಶೋಧನಾ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಜೇನುತುಪ್ಪ ಎಷ್ಟು ಸಿಹಿಯೊ, ಜೇನುಕೃಷಿಯೂ ಬದುಕನ್ನು ಅಷ್ಟೇ ಸಿಹಿ ಮಾಡಬಲ್ಲದು’

ಹೀಗೆ ಮಾತಿಗಿಳಿದವರು ಅಂಕೋಲಾ ತಾಲ್ಲೂಕು ಹಿಲ್ಲೂರು ಸಮೀಪದ ತಿಂಗಳಬೈಲ್ ಗ್ರಾಮದ ಸಂದೇಶ ಬಾಂದೇಕರ್. ಅಡಿಕೆ ತೋಟದಲ್ಲಿ ಸಾಲು ಸಾಲಾಗಿ ಇಟ್ಟ ಜೇನು ಪೆಟ್ಟಿಗೆಗಳನ್ನು ಒಂದೊಂದಾಗಿ ಪರಿಶೀಲಿಸುತ್ತಲೇ ಅವರು ಜೇನು ಕೃಷಿಯ ಕುರಿತು ಮಾಹಿತಿ ನೀಡುತ್ತಿದ್ದರು. ಮಾತನಾಡುತ್ತಿದ್ದರೂ ಅವರು ಏಕಾಗ್ರಚಿತ್ತರಾಗಿ ಜೇನುಹುಳಗಳ ಚಟುವಟಿಕೆ ಗಮನಿಸುತ್ತಿರುವುದು ಜೇನುಕೃಷಿಯಲ್ಲಿ ಅವರಿಗಿರುವ ಆಸಕ್ತಿ ವಿವರಿಸುತ್ತಿತ್ತು.

ಐಟಿಐ ಓದಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಪಡೆದುಕೊಂಡಿದ್ದ ಅವರನ್ನು ಮತ್ತೆ ಊರಿನತ್ತ ಸೆಳೆದಿದ್ದು ಜೇನುಕೃಷಿ. ಕುಟುಂಬದ ಒಂದೂವರೆ ಎಕರೆ ಜಮೀನಿನಲ್ಲಿ ಅಡಿಕೆ, ತೆಂಗು, ಬಾಳೆ ಬೆಳೆಗಳ ಜತೆಗೆ ಉಪ ಆದಾಯಕ್ಕೆ ತಂದೆ ಮಾಡುತ್ತಿದ್ದ ಜೇನುಕೃಷಿಯನ್ನು ವಿಸ್ತರಿಸಲು ಸಂದೇಶ ದಶಕಗಳ ಹಿಂದೆ ನಿಶ್ಚಯಿಸಿದ್ದರು. ಈಗ ಅದನ್ನು ಕಾರ್ಯಗತ ಮಾಡಿದ್ದಾರೆ.

‘ಬಾಲ್ಯದಿಂದಲೂ ಜೇನುಕೃಷಿಯ ಬಗ್ಗೆ ಒಲವಿತ್ತು. ತಂದೆ ಮನೆಯ ತೋಟದಲ್ಲಿ ಇಟ್ಟಿದ್ದ ಒಂದೆರಡು ಪೆಟ್ಟಿಗೆಗಳನ್ನು ಯಾವಾಗಲೂ ಕುತೂಹಲದಿಂದ ನೋಡುತ್ತಿದ್ದೆ. ಜೇನುಹುಳಗಳನ್ನೂ ಸ್ನೇಹಿತರೆಂದು ಭಾವಿಸಿಕೊಂಡಿದ್ದೆ. ಈಗ 500ಕ್ಕೂ ಹೆಚ್ಚು ಪೆಟ್ಟಿಗೆಗಳನ್ನು ಇಟ್ಟಿದ್ದೇನೆ. ಅವುಗಳಲ್ಲಿರುವ ಲಕ್ಷಾಂತರ ಜೇನುಹುಳಗಳು ನನ್ನ ಪಾಲಿನ ಸ್ನೇಹಿತರೂ ಹೌದು. ಅವರಿಂದ ಜೀವನಕ್ಕೆ ದಾರಿ ಮಾಡಿಕೊಂಡಿದ್ದೇನೆ’ ಎಂದು ಜೇನುಕೃಷಿಯ ಬಗ್ಗೆ ಭಾವನಾತ್ಮಕವಾಗಿ ವಿವರಿಸುತ್ತಾರೆ ಸಂದೇಶ ಬಾಂದೇಕರ್.

‘ತಿಂಗಳೆಬೈಲ್ ಗ್ರಾಮದಲ್ಲಷ್ಟೆ ಅಲ್ಲದೆ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ, ಕಾಡುಗಳಲ್ಲಿಯೂ ಜೇನುಪೆಟ್ಟಿಗೆ ಇಟ್ಟಿದ್ದೇನೆ. ಅಂಕೋಲಾದಿಂದ ಹೊನ್ನಾವರದವರೆಗೆ, ಮತ್ತೊಂದೆಡೆ ಕಾರವಾದವರೆಗೆ ನಿರ್ದಿಷ್ಟ ಜಾಗ ಹುಡುಕಿ ಪೆಟ್ಟಿಗೆ ಇರಿಸಿದ್ದೇನೆ. ವರ್ಷಕ್ಕೆ ಸರಾಸರಿ 15 ಕ್ವಿಂಟಲ್‍ಗೂ ಹೆಚ್ಚು ಜೇನುತುಪ್ಪ ಸಂಗ್ರಹವಾಗುತ್ತಿದೆ. ನಾಲ್ಕೂವರೆ ಲಕ್ಷಕ್ಕಿಂತ ಹೆಚ್ಚು ಆದಾಯ ಬರುತ್ತಿದೆ’ ಎಂದು ವಿವರಿಸಿದರು.

ಜೇನುಪೆಟ್ಟಿಗೆಯಲ್ಲಿರುವ ಜೇನು ಕಾಲೊನಿಯೊಂದನ್ನು ತೆಗೆದು ವೀಕ್ಷಿಸುತ್ತಿರುವ ಸಂದೇಶ ಬಾಂದೇಕರ.
ಜೇನುಪೆಟ್ಟಿಗೆಯಲ್ಲಿರುವ ಜೇನು ಕಾಲೊನಿಯೊಂದನ್ನು ತೆಗೆದು ವೀಕ್ಷಿಸುತ್ತಿರುವ ಸಂದೇಶ ಬಾಂದೇಕರ.

ಯುವ ಪೀಳಿಗೆಗೆ ಕೃಷಿ ಪಾಠ

‘ಜೇನುಕೃಷಿಯ ಬಗ್ಗೆ ಅಧ್ಯಯನ ಮಾಡಲು ಕೃಷಿ ವಿಶ್ವವಿದ್ಯಾಲಯ ಸೇರಿದಂತೆ ವಿವಿಧೆಡೆಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಪಿ.ಎಚ್.ಡಿ ಅಧ್ಯಯನಕಾರರು ಸಂಶೋಧಕರು ಹುಡುಕಿಕೊಂಡು ಬರುತ್ತಾರೆ. ಅವರಿಗೆ ನಾನು ಮಾಡುತ್ತಿರುವ ಜೇನುಕೃಷಿಯ ಬಗ್ಗೆ ವಿವರಿಸುತ್ತೇನೆ’ ಎಂದು ಸಂದೇಶ ಬಾಂದೇಕರ ಹೇಳುತ್ತಾರೆ. ಹಲವು ಶಾಲೆ ಕಾಲೇಜುಗಳ ವಿದ್ಯಾರ್ಥಿಗಳು ಜೇನುಕೃಷಿಯ ಕುರಿತು ಅರಿಯಲು ಬರುತ್ತಾರೆ. ಅವರಿಗೆ ಆಸಕ್ತಿದಾಯಕವಾಗಿ ಕೃಷಿಯ ಬಗ್ಗೆ ವಿವರಿಸುತ್ತೇನೆ. ಆಸಕ್ತಿ ಇದ್ದವರಿಗೆ ಜೇನು ಪೆಟ್ಟಿಗೆಯನ್ನೂ ನೀಡುತ್ತೇನೆ. ಈಗಾಗಲೆ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜೇನುಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಶಿರಸಿ ಕೃಷಿ ವಿಜ್ಞಾನ ಕೇಂದ್ರ ತೋಟಗಾರಿಕೆ ಇಲಾಖೆಯವರು ಸಹಕಾರ ನೀಡುವ ಜತೆಗೆ ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡಲು ವಸ್ತುಪ್ರದರ್ಶನದ ವೇಳೆ ಜೇನು ತುಪ್ಪ ಮಾರಾಟಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ’ ಎನ್ನುತ್ತಾರೆ ಅವರು.

ಸಾವಯವ ಔಷಧ

‘ಜೇನು ಹುಳುಗಳಿಗೆ ಸಾಮಾನ್ಯವಾಗಿ ರೋಗಬಾಧೆಯೂ ಹೆಚ್ಚು. ಅಂತಹ ಸಂದರ್ಭದಲ್ಲಿ ರಾಸಾಯನಿಕ ಔಷಧವನ್ನು ನೀಡದೆ 20ಕ್ಕೂ ಹೆಚ್ಚು ಗಿಡಮೂಲಿಕೆಗಳಿಂದ ಸಿದ್ಧಪಡಿಸಿದ ಸಾವಯವ ಕಷಾಯವನ್ನು ಸಕ್ಕರೆ ಪಾಕದೊಂದಿಗೆ ನೀಡಲಾಗುತ್ತದೆ. ಹೀಗೆ ಮಾಡುವುದರಿಂದ ರೋಗ ನಿಯಂತ್ರಣಕ್ಕೆ ಬರುತ್ತದೆ’ ಎಂದು ಸಂದೇಶ ಹೇಳುತ್ತಾರೆ. ‘ಅಂಟವಾಳ ಮರಗಳಿದ್ದಲ್ಲಿ ಪೆಟ್ಟಿಗೆಗಳನ್ನಿರಿಸಿ ಅಂಟವಾಳ ಜೇನುತುಪ್ಪ ಸಂಗ್ರಹಿಸಲು ಆದ್ಯತೆ ನೀಡುತ್ತೇನೆ. ಶುದ್ಧ ಅಂಟವಾಳ ತುಪ್ಪಕ್ಕೆ ಉತ್ತಮ ಬೆಲೆಯೂ ಇದೆ. 70 ಕೆ.ಜಿಗೂ ಹೆಚ್ಚು ಅಂಟವಾಳ ತುಪ್ಪ ಕಳೆದ ವರ್ಷ ಸಂಗ್ರಹವಾಗಿತ್ತು. ಈ ಬಾರಿ ಕಾಂಡ್ಲಾವನಗಳ ಬಳಿ ಪೆಟ್ಟಿಗೆ ಇಟ್ಟು ಕಾಂಡ್ಲಾ ಜೇನುತುಪ್ಪ ಸಂಗ್ರಹಿಸುವ ಪ್ರಯೋಗ ನಡೆಸಲಾಗುತ್ತಿದೆ’ ಎಂದೂ ಹೇಳಿದರು.

ಜೇನು ಸಾಕಲು ಅನುಕೂಲವಾಗವ ಪೆಟ್ಟಿಗೆಗಳನ್ನು ಸ್ವತಃ ಸಿದ್ಧಪಡಿಸಿಕೊಳ್ಳುತ್ತೇನೆ. ಆಸಕ್ತಿ ಇದ್ದವರಿಗೆ ಪೆಟ್ಟಿಗೆ ನೀಡುವ ಜತೆಗೆ ಕೃಷಿ ಹೇಗೆ ಮಾಡಬೇಕೆಂಬುದನ್ನು ತಿಳಿಸಿಕೊಡುತ್ತಿದ್ದೇನೆ.
-ಸಂದೇಶ ಬಾಂದೇಕರ, ಜೇನು ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT