ಶನಿವಾರ, ಮಾರ್ಚ್ 6, 2021
18 °C
17ರಂದು ಹೋರಾಟಗಾರರಿಂದ ಭೂಮಿ ಪೂಜೆ

ಮೇಕೆದಾಟು ಯೋಜನೆ ಜಾರಿಗೆ ಒತ್ತಾಯ: ಕಪ್ಪು ಬಾವುಟ ಪ್ರದರ್ಶಿಸಿದ ವಾಟಾಳ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಹೋರಾಟಗಾರರು ಕಪ್ಪು ಬಾವುಟ ಪ್ರದರ್ಶಿಸಿ ಭಾನುವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಐಜೂರು ವೃತ್ತದಲ್ಲಿ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟಿಸಿದ ಹೋರಾಟಗಾರರು, ತಮಿಳುನಾಡು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ಯೋಜನೆಗೆ ಕೇಂದ್ರದ ಜಲಸಂಪನ್ಮೂಲ ಇಲಾಖೆಯೂ ಒಪ್ಪಿಗೆ ನೀಡಿದೆ. ಕೇಂದ್ರದ ಅನುಮತಿಯೂ ಬೇಕಾಗಿಲ್ಲ. ಮೇಕೆದಾಟು ಯೋಜನೆ ಕುಡಿಯುವ ನೀರಿಗಾಗಿ ರೂಪಿಸುವ ಯೋಜನೆ. ಕುಡಿಯುವ ನೀರಿನ ಯೋಜನೆಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಿಲ್ಲ. ಜಲಸಂಪನ್ಮೂಲ ಇಲಾಖೆ ತನ್ನ ಒಪ್ಪಿಗೆ ಸೂಚಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಯೋಜನೆ ನಿರ್ಮಾಣಕ್ಕೆ ಯಾವ ತೊಂದರೆ ಇಲ್ಲದೆ ಮುಂದುವರೆಯಬಹುದು. ಆದರೆ, ರಾಜ್ಯ ಸರ್ಕಾರ ತೀರ ಮಂದಗತಿಯಲ್ಲಿ ಹೆಜ್ಜೆ ಹಾಕುತ್ತಿದೆ ಎಂದು ವಾಟಾಳ್ ನಾಗರಾಜ್ ಟೀಕಿಸಿದರು.

ರಾಜ್ಯ ಸರ್ಕಾರ ಶೀಘ್ರದಲ್ಲೇ ಮೇಕೆದಾಟು ಯೋಜನೆ ಆರಂಭಿಸಬೇಕು. ಇಲ್ಲದಿದ್ದರೇ ಕನ್ನಡಪರ ಹೋರಾಟಗಾರರಿಂದಲೇ ಇದೇ 17ರಂದು ಯೋಜನೆಗೆ ಭೂಮಿ ಪೂಜೆ ನೆರವೇರಿಸಲಾಗುತ್ತದೆ ಎಂದು ತಿಳಿಸಿದರು.

ಒಂದು ಕಡೆ ತಮಿಳುನಾಡು ಸರ್ಕಾರ ನಿರಂತರವಾಗಿ ಮೇಕೆದಾಟು ಯೋಜನೆ ಜಾರಿಗೆ ತಡೆ ಒಡ್ಡುತ್ತಿದೆ. ಈ ನಡುವೆ ಕರ್ನಾಟಕ ಸರ್ಕಾರ ನಿಧಾನ ಧೋರಣೆ ಅನುಸರಿಸುವುದು ಯೋಜನೆ ಪೂರ್ಣಗೊಳ್ಳುವುದೇ ಅನುಮಾನವನ್ನು ಹುಟ್ಟು ಹಾಕಿದೆ ಎಂದರು.

ಮೇಕೆದಾಟು ಯೋಜನೆ ನನೆಗುದಿಗೆ ಬಿದ್ದಿದೆ. ರಾಜ್ಯ ಸರ್ಕಾರದ ನಡೆ ಅತ್ಯಂತ ಮಂದಗತಿಯಲ್ಲಿ ಸಾಗಿದ್ದು, ಯೋಜನೆ ಪೂರ್ಣಗೊಳಿಸಬೇಕೆಂಬ ಚಿಂತನೆ ಇಲ್ಲ. ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಜನೆ ಜಾರಿಗೆ ಸುಪ್ರೀಂ ಕೋರ್ಟ್‌ನಿಂದ ಹಾಗೂ ಕೇಂದ್ರ ಸರ್ಕಾರದಿಂದಲೂ ಯಾವುದೇ ತಡೆಯಾಜ್ಞೆ ಇಲ್ಲ. ಆದರೂ, ರಾಜ್ಯ ಸರ್ಕಾರ ಯೋಜನೆ ಆರಂಭಿಸಲು ಹಿಂದೇಟು ಹಾಕುತ್ತಿದೆ ಎಂದು ತಿಳಿಸಿದರು.

ಕರುನಾಡ ಸೇನೆಯ ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಜಗದೀಶ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು