ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ | 4.5 ಸಾವಿರ ಅನಧಿಕೃತ ಸಂಪರ್ಕ: ನೀರು ಸರಬರಾಜು ವ್ಯವಸ್ಥೆಯ ವೈಫಲ್ಯ

ನಗರದಲ್ಲಿ ಮೂರು ಇಲಾಖೆಗಳಿಂದ ನೀರಿನ ಪೈಪ್‌ ಅಳವಡಿಕೆ, ತಪ್ಪಿದ ಸಂಪರ್ಕ ಕೊಂಡಿ
Published 2 ಜೂನ್ 2024, 5:23 IST
Last Updated 2 ಜೂನ್ 2024, 5:23 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದ ಸೆರಗಲ್ಲೇ ಇರುವ ಹೊಸಪೇಟೆ ನಗರಕ್ಕೆ ಭೀಕರ ಬರಗಾಲದಲ್ಲೂ ನೀರಿನ ಕೊರತೆ ಇರಲೇಬಾರದು, ಹಾಗಿದ್ದರೂ ದಿನಕ್ಕೆ 30ರಿಂದ 35 ಟ್ರಿಪ್‌ನಲ್ಲಿ ಟ್ಯಾಂಕರ್‌ಗಳು ಕೆಲವೊಂದು ವಾರ್ಡ್‌ಗಳಿಗೆ ನೀರು ಪೂರೈಸುತ್ತಿವೆ. ಇದು ನೀರು ಸರಬರಾಜು ವ್ಯವಸ್ಥೆಯಲ್ಲಿನ ವೈಫಲ್ಯಕ್ಕೆ ಕಾಣಿಸುವ ಸಾಕ್ಷಿ.

ನಗರಸಭೆಯಿಂದ ಟೆಂಡರ್‌ ಪಡೆದ ನೀರಿನ ಟ್ಯಾಂಕರ್‌ಗಳ ಜತೆಗೆ ಕೆಲವು ಖಾಸಗಿ ಟ್ಯಾಂಕರ್‌ಗಳೂ ನಗರಸಭೆಯ ನೀರನ್ನು ಪಡೆದು ಸರಬರಾಜು ಮಾಡುತ್ತಿದ್ದುದು ವರ್ಷಗಳಿಂದ ನಡೆದು ಬಂದಿತ್ತು. ವಾರದ ಹಿಂದೆ ಈ ವ್ಯವಸ್ಥೆಗೆ ತಡೆ ಒಡ್ಡಿದಾಗ ‘ಹೈಡ್ರಾಮಾ’ ನಡೆದುಬಿಟ್ಟಿತು. ಬಳಿಕ ನಗರಸಭೆಯ ವಿಶೇಷ ಸಭೆ ನಡೆಸಿ ಖಾಸಗಿ ಟ್ಯಾಂಕರ್‌ಗಳಿಗೂ  ನೀರು  ಒದಗಿಸಬಹುದು ಎಂಬ ನಿರ್ಣಯ ಅಂಗೀಕಾರವಾಯಿತು. ಅದಕ್ಕೆ ಇನ್ನೂ ಜಿಲ್ಲಾಧಿಕಾರಿ ಅವರಿಂದ ಒಪ್ಪಿಗೆ ದೊರೆತಿಲ್ಲ. ಇಷ್ಟೆಲ್ಲ ಇರುವಾಗ ನಗರದ ನೀರು ಸರಬರಾಜಿನಲ್ಲಿನ ಮುಖ್ಯ ಲೋಪ ಎಲ್ಲಿದೆ ಎಂಬ ಕುತೂಹಲ ಸಹಜ.

ನಗರದದಲ್ಲಿ ಕೆಯುಐಡಿಎಫ್‌ಸಿ, ಕೆಯುಡಬ್ಲ್ಯುಎಸ್‌ಎಸ್‌ಬಿ  ಮತ್ತು ನಗರಸಭೆಗಳು ನೀರು ಸರಬರಾಜು ಪೈಪ್ ಅಳವಡಿಸಿವೆ. ಕೆಲವೊಂದು ಕಡೆಗಳಲ್ಲಿ ಒಂದಕ್ಕೊಂದು ಸಂಪರ್ಕ ಸಾಧಿಸುವುದು ಸಾಧ್ಯವಾಗದೆ ಕೆಲವು ವಾರ್ಡ್‌ಗಳ ಕೆಲವು ಪ್ರದೇಶಗಳಿಗೆ ಪೈಪ್‌ ನೀರು ಪೂರೈಸುವುದು ಅಸಾಧ್ಯವಾಗಿದೆ. ಅಂತಲ್ಲಿಗೆ ಟ್ಯಾಂಕರ್‌ ನೀರು ಒದಗಿಸಲಾಗುತ್ತಿದೆ. ಇಲಾಖೆಗಳ ನಡುವಿನ ‘ಮಿಸ್ಸಿಂಗ್ ಲಿಂಕ್‌’ ನಾಗರಿಕರನ್ನು ಜಲಕಂಠಕ ರೂಪದಲ್ಲಿ ಕಾಡುತ್ತಿದೆ.

‘ಮೂರ್ನಾಲ್ಕು ವಾರ್ಡ್‌ಗಳ ಕೆಲವು ಕಡೆಗಳಲ್ಲಿ ಮಾತ್ರ ಇಂತಹ ಸಮಸ್ಯೆ ಇದೆ. ಇದನ್ನು ಪತ್ತೆಹಚ್ಚಿ ಸರಿಪಡಿಸುವ  ಕೆಲಸ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇಡೀ ನಗರಕ್ಕೆ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ನೀರಿನ ಪೂರೈಕೆ ಆಗದ ಕಡೆಗಳಲ್ಲಿ ಕೊಳವೆ ಬಾವಿಗಳಿಂದಲೂ ನೀರು ಪೂರೈಸಲಾಗುತ್ತಿದೆ, ನಗರದಲ್ಲಿ ಇಂತಹ 276 ಕೊಳವೆ ಬಾವಿಗಳು ಸಕ್ರಿಯವಾಗಿವೆ’ ಎಂದು ಪೌರಾಯುಕ್ತ ಚಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರಕ್ಕೆ ಪ್ರತಿದಿನ 30.30 ಕೋಟಿ ಲೀಟರ್‌ ಶುದ್ಧೀಕರಿಸಿದ ನೀರು ಪೂರೈಸಲಾಗುತ್ತಿದೆ. ಸುಮಾರು 3 ಲಕ್ಷ ಜನಸಂಖ್ಯೆಯ ನಗರಕ್ಕೆ ನೀರಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪೈಪ್‌ಗಳ ಮಿಸ್ಸಿಂಗ್ ಲಿಂಕ್‌ಗಳನ್ನು ಸರಿಪಡಿಸದಿದ್ದರೆ, ತುಂಗಭದ್ರಾ ಜಲಾಶಯದ ಪಕ್ಕದಲ್ಲಿದ್ದೂ 24x 7 ನೀರು ನೀಡಲು ಸಾಧ್ಯವಾಗದೆ ಹೋದರೆ ಖಾಸಗಿಯವರ ನೀರಿನ ರಾಜಕೀಯ ಮತ್ತು ಅಧಿಕಾರಶಾಹಿಗಳ ಮತ್ತು ಜನಪ್ರತಿನಿಧಿಗಳ ಘೋರ ವೈಫಲ್ಯ ಇತಿಹಾಸದ ಕರಾಳ ಪುಟವಾಗಿಯೇ ಉಳದೀತು ಎಂದು ನಗರವಾಸಿಗಳು ಹೇಳುತ್ತಿದ್ದಾರೆ.

4500 ಅನಧಿಕೃತ ಸಂಪರ್ಕ

ನಗರದಲ್ಲಿ 42 ಸಾವಿರದಷ್ಟು ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಸುಮಾರು 4500 ಅನಧಿಕೃತ ಸಂಪರ್ಕವೂ ಇದೆ. ಇವುಗಳನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆ. ಇಲ್ಲಿ  ಮುಖ್ಯ ನೀರಿನ ಪೈಪ್‌ಗೆ ಸರಿಯಾಗಿ ವಾಶರ್‌ನೊಂದಿಗೆ ಪೈಪ್ ಕೂರಿಸಿ ಇರುವುದಿಲ್ಲ. ಇದರಿಂಧ ನೀರು ಸೋರಿಕೆಯಾಗುವುದು ಕಲುಷಿತ ನೀರು ಮಿಶ್ರಣವಾಗುವಂತಹ ಸಮಸ್ಯೆಗಳು ಎದುರಾಗುತ್ತವೆ. ಹೀಗಿದ್ದಾಗಲೂ ನಗರಸಭೆಯೇ  ಟೀಕೆ ಎದುರಿಸಬೇಕಾಗುತ್ತದೆ. ಅಧಿಕೃತ ಸಂಪರ್ಕ ಹೊಂದಿರುವ  ಪೈಪ್‌ಲೈನ್‌ಗಳಲ್ಲಿ ಇಂತಹ ಯಾವ ಸಮಸ್ಯೆಗಳಿಗೂ ಆಸ್ಪದ ಇಲ್ಲದ ರೀತಿಯಲ್ಲಿ ಜೋಡಣೆ ಆಗಿರುತ್ತದೆ ಎಂದು ಹೇಳುತ್ತಾರೆ ನಗರಸಭೆ ಅಧಿಕಾರಿಗಳು.

ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯೇ ಇಲ್ಲದ ರೀತಿಯಲ್ಲಿ ಶಾಶ್ವತ ಯೋಜನೆ ರೂಪುಗೊಳ್ಳುತ್ತಿದೆ ಕಲವೇ ತಿಂಗಳಲ್ಲಿ ಅನುಷ್ಠಾನಕ್ಕೂ ಬರಲಿದೆ.
-ಎಚ್‌.ಆರ್‌.ಗವಿಯಪ್ಪ, ಶಾಸಕ
ನಗರದಲ್ಲಿ ಪೂರೈಕೆಯಾಗುವ ನೀರಿನ ಗುಣಮಟ್ಟದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಕ್ಲೋರಿನ್‌ಯುಕ್ತ ಶುದ್ಧ ನೀರು ಪೂರೈಸುವುದು ಜಿಲ್ಲಾಡಳಿತದ ಬದ್ಧತೆ.
-ಎಂ.ಎಸ್‌.ದಿವಾಕರ್, ಜಿಲ್ಲಾಧಿಕಾರಿ
ನಗರಸಭೆಯ ನೀರು ಪಡೆದ ಖಾಸಗಿ ವ್ಯಕ್ತಿಗಳು ನಗರದೊಳಗೆ ನೀರು ಪೂರೈಸಿದ್ದರ ಬಗ್ಗೆ ನಮ್ಮ ವಾಲ್‌ಮನ್‌ಗಳ ಬಳಿ ಮಾಹಿತಿ ಇಲ್ಲ ಎಲ್ಲಿಗೆ ಸಾಗಿಸಿದ್ದಾರೆ ಎಂಬುದೇ ಪ್ರಶ್ನೆ.
-ಚಂದ್ರಪ್ಪ, ನಗರಸಭೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT