ಹೊಸಪೇಟೆ (ವಿಜಯನಗರ): ತುಂಗಭದ್ರಾ ನದಿ ತುಂಬಿ ಹರಿಯುತ್ತಿದೆ, ಆದರೆ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ ಸರಾಸರಿ ಮಳೆ ಕೊರತೆ ಪ್ರಮಾಣ ಶೇ 12.6ರಷ್ಟಿದೆ. ಹೀಗಿದ್ದರೂ ಬಿತ್ತನೆ ಕಾರ್ಯ ಚುರುಕಿನಿಂದಲೇ ನಡೆದಿದ್ದು, ಉದ್ದೇಶಿತ 2.94 ಲಕ್ಷ ಹೆಕ್ಟೇರ್ ಕೃಷಿ ಭೂಮಿಯ ಪೈಕಿ 2.83 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.
ರಾಜ್ಯದ 87 ತಾಲ್ಲೂಕುಗಳಲ್ಲಿ ಮಳೆ ಕೊರತೆ ಆಗಿರುವ ಬಗ್ಗೆ ಈಗಾಗಲೇ ಮಾಹಿತಿ ಇದ್ದು, ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಜುಲೈ ತಿಂಗಳಲ್ಲಿ ಶೇ 14ರಿಂದ ಶೇ 35ರವರೆಗೆ ಮಳೆ ಕೊರತೆ ಇದೆ. ಹೀಗಾಗಿ ಕೆಲವೆಡೆ ಚಿರುರೊಡೆದ ಗಿಡಗಳು ನೀರಿಲ್ಲದೆ ಬಾಡುತ್ತಿದ್ದು, ರೈತರು ಆತಂಕದಲ್ಲಿದ್ದಾರೆ.
ಕೊಳವೆ ಬಾವಿ ಇದ್ದವರ ಜಮೀನುಗಳು ನಳನಳಿಸುತ್ತಿದ್ದು, ಉಳಿದೆಡೆ ಗಿಡಗಳು ಬಾಡಿವೆ. ತೆನೆ ಕಟ್ಟುವ ಹಂತದಲ್ಲಿ ಬಾರದ ಮಳೆ ಬಳಿಕ ಬಂದರೆ ಉಪಯೋಗವಿಲ್ಲ, ಜೊಳ್ಳು ತುಂಬಿಕೊಳ್ಳುತ್ತದೆ ಎಂದು ರೈತರು ಹೇಳುತ್ತಿದ್ದಾರೆ.
ಜುಲೈ ತಿಂಗಳಲ್ಲಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ ಶೇ 35ರಷ್ಟು, ಹೊಸಪೇಟೆಯಲ್ಲಿ ಶೇ 25ರಷ್ಟು ಹಾಗೂ ಹೂವಿನ ಹಡಗಲಿಯಲ್ಲಿ ಶೇ 14ರಷ್ಟು ಮಳೆಕೊರತೆ ಕಾಣಿಸಿದೆ. ಒಟ್ಟಾರೆ ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ ಲೆಕ್ಕ ಹಾಕಿದರೆ ಹಡಗಲಿಯಲ್ಲಿ ಶೇ 21ರಷ್ಟು ಮತ್ತು ಹರಪನಹಳ್ಳಿಯಲ್ಲಿ ಶೇ 10ರಷ್ಟು ಮಳೆ ಕೊರತೆ ಕಾಣಿಸಿದೆ.
‘ಮಳೆ ಮೋಡ ಇದೆ, ಕೆಲವೆಡೆ ಲಘುವಾಗಿ ಮಳೆ ಸುರಿಯುತ್ತಿದೆ. ಇನ್ನು ಒಂದು ವಾರದಲ್ಲಿ ಮಳೆ ಸುರಿದರೆ ಸಮಸ್ಯೆ ಇಲ್ಲ, ಮತ್ತೂ ಮಳೆ ಬಾರದಿದ್ದರೆ ತೆನೆ ಕಟ್ಟುವಲ್ಲಿ ಸಮಸ್ಯೆಯಾಗಿ ಬೆಳೆ ಹಾನಿಯಾಗುವ ಸಾಧ್ಯತೆ ಇದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದ್ಗಲ್ ‘ಪ್ರಜಾವಾಣಿ’ಗೆ ತಿಳಿಸಿದರು.
ಮಳೆಯಾಶ್ರಿತ–ಬಿತ್ತನೆ ಅಧಿಕ: ಜಿಲ್ಲೆಯ ಮಳೆಯಾಶ್ರಿತ ಕೃಷಿ ಭೂಮಿ 2.34 ಲಕ್ಷ ಹೆಕ್ಟೇರ್‌ನಷ್ಟಿದ್ದು, ಈಗಾಗಲೇ ಗುರಿ ಮೀರಿ 2.37 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ನಡೆದಿದೆ. ನೀರಾವರಿ ಆಶ್ರಿತ 59,185 ಹೆಕ್ಟೇರ್ ಕೃಷಿ ಭೂಮಿ ಇದ್ದು, 45,619 ಹೆಕ್ಟೇರ್‌ನಲ್ಲಿ ಬಿತ್ತನೆ ನಡೆದಿದೆ.
ಜಿಲ್ಲೆಯಲ್ಲಿ 11441.80 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಬೆಳೆಯುವ ಗುರಿ ಇದೆ. ಈ ಪೈಕಿ 4182.58 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಪೂರ್ಣಗೊಂಡಿದೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೆಶಕ ಚಿದಾನಂದ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುವ ತೋಟಗಾರಿಕಾ ಬೆಳೆ ಎಂದರೆ ಈರುಳ್ಳಿ.7716.91 ಹೆಕ್ಟೇರ್ ಪ್ರದೇಶದ ಪೈಕಿ ಇದುವರೆಗೆ 2262 ಹೆಕ್ಟೇರ್‌ನಲ್ಲಿ ನಾಟಿ ಕೊನೆಗೊಂಡಿದೆ. ಮೆಣಸಿನಕಾಯಿ 2330.97 ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದ್ದುಇದುವರೆಗೆ 1071 ಹೆಕ್ಟೇರ್‌ನಲ್ಲಿ ನಾಟಿ ಕೊನೆಗೊಂಡಿದೆ. ಟೊಮೆಟೊ 1250 ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿದ್ದು ಇದುವರೆಗೆ 590.50 ಹೆಕ್ಟೇರ್‌ನಲ್ಲಿ ನಾಟಿ ಕೊನೆಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.