ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಜಿಲ್ಲಾ ಉದ್ಘಾಟನೆ: ಉತ್ಸವದಲ್ಲಿ ಹೊಳೆದ ಆನಂದ್‌ ಸಿಂಗ್‌

Last Updated 5 ಅಕ್ಟೋಬರ್ 2021, 9:08 IST
ಅಕ್ಷರ ಗಾತ್ರ

ಹೊಸಪೇಟೆ: ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹೊಳೆದದ್ದು ಇಡೀ ಕಾರ್ಯಕ್ರಮದ ವಿಶೇಷ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ, ಶಾಸಕ ಬಿ.ಎಸ್‌. ಯಡಿಯೂರಪ್ಪ ಆದಿಯಾಗಿ ಸಚಿವರು, ಗಣ್ಯರು ಆನಂದ್ ಸಿಂಗ್ ಅವರನ್ನು ಕೊಂಡಾಡಿದರು. ನಟರು, ಗಾಯಕರು, ಅಷ್ಟೇ ಅಲ್ಲ ನಿರೂಪಕರು ಸಹ ಆನಂದ್‌ ಸಿಂಗ್‌ ಅವರನ್ನು ‘ವಿಜಯನಗರದ ವೀರಪುತ್ರ’ ಎಂದು ಪ್ರಶಂಶಿಸಿದರು. ಮಠಾಧೀಶರು ಕೂಡ ಹಿಂದೆ ಬೀಳಲಿಲ್ಲ.

‘ಆನಂದ್ ಸಿಂಗ್‌ ಅವರು ಉಡ ಇದ್ದಂತೆ. ಹಿಡಿದ ಕೆಲಸ ಸಾಧಿಸುವವರೆಗೆ ಹಿಂದೆ ಸರಿಯುವುದಿಲ್ಲ. ಉಡದಂತೆ ಅವರು ಗಟ್ಟಿ’ ಎಂದು ಸಿ.ಎಂ. ಹೇಳಿದರೆ, ಸಚಿವರಾದ ಬಿ.ಸಿ. ಪಾಟೀಲ, ಎಸ್‌.ಟಿ. ಸೋಮಶೇಖರ್‌, ‘ವಿಜಯನಗರಕ್ಕಾಗಿ ಆನಂದ್‌ ಸಿಂಗ್‌ ಶಾಸಕ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಿದ್ದರು. ಅವರ ಇಚ್ಛಾಶಕ್ತಿಯಿಂದ ವಿಜಯನಗರದ ವೈಭವ ಮತ್ತೆ ಮರುಕಳಿಸಲಿದೆ’ ಎಂದು ಶ್ಲಾಘಿಸಿದರು.

ಇನ್ನು ನಟ ಅಜಯ್‌ ರಾವ್‌, ‘ನಮ್ಮ ಊರು, ದೇಶಕ್ಕೆ ಕೆಲಸ ಮಾಡುವವನು ನಿಜಯವಾದ ನಾಯಕ. ವಿಜಯನಗರಕ್ಕೆ ಆನಂದ್‌ ಸಿಂಗ್‌ ಅವರಂತಹ ನಾಯಕ ಸಿಕ್ಕಿದ್ದಾರೆ. ಅವರ ನಾಯಕತ್ವದಲ್ಲಿ ಹೊಸಪೇಟೆ ಅಭಿವೃದ್ಧಿಯಾಗುತ್ತದೆ. ಎಲ್ಲರೂ ಸಹಕಾರ ಕೊಡಬೇಕು’ ಎಂದರು.

ಹಂಪಿ ಮಾತಂಗ ಮಠದ ಪೂರ್ಣಾನಂದ ಭಾರತಿ ಸ್ವಾಮೀಜಿ ಅವರು ವೇದಿಕೆಯ ಮೇಲೆ ಆನಂದ್‌ ಸಿಂಗ್‌ ತಲೆಯ ಮೇಲೆ ಕೈಯಿಟ್ಟು ಮಂತ್ರ ಹೇಳಿದರು. ಒಂದು ಹೆಜ್ಜೆ ಮುಂದೆ ಹೋಗಿ ‘ಆನಂದ್‌ ಸಿಂಗ್‌ ಭವಿಷ್ಯದಲ್ಲಿ ಈ ರಾಜ್ಯದ ಮುಖ್ಯಮಂತ್ರಿಯಾಗಲಿ’ ಎಂದು ಆಶೀರ್ವದಿಸಿದರು.

ಹೀಗೆ ಇಡೀ ಕಾರ್ಯಕ್ರಮದುದ್ದಕ್ಕೂ ಆನಂದ್‌ ಸಿಂಗ್‌ ಹೊಳೆದರು. ವಿಜಯನಗರ ಉತ್ಸವ ಮೂಲ ಉದ್ದೇಶ ಹಿಂದೆ ಸರಿದು, ವ್ಯಕ್ತಿಯ ವೈಭವೀಕರಣಕ್ಕೆ ಸಾಕ್ಷಿಯಾಯಿತು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

‘ಸರ್ಕಾರಿ ಕಾರ್ಯಕ್ರಮದಲ್ಲಿ ಆನಂದ್‌ ಸಿಂಗ್‌ ಅವರನ್ನು ವೈಭವೀಕರಿಸಿರುವುದು ಸರಿಯಲ್ಲ. ಅದಕ್ಕೆ ಜಿಲ್ಲಾಡಳಿತ ಅವಕಾಶ ಕೊಡಬಾರದಿತ್ತು. ಇದು ಸರಿಯಾದ ಕ್ರಮವಲ್ಲ. ಕಾರ್ಯಕ್ರಮದ ಮೂಲ ಉದ್ದೇಶಕ್ಕೆ ಧಕ್ಕೆಯಾಗಿದೆ’ ಎಂದು ಸಾಮಾಜಿಕ ಹೋರಾಟಗಾರ ಮರಡಿ ಜಂಬಯ್ಯ ನಾಯಕ ಅಭಿಪ್ರಾಯ ಪಟ್ಟಿದ್ದಾರೆ.

‘ಆನಂದ್‌ ಸಿಂಗ್‌ ಅವರ ಕೈಯಲ್ಲಿ ಅಧಿಕಾರ ಇದೆ. ಹೀಗಾಗಿ ಅಧಿಕಾರಿಗಳು ಏನನ್ನೂ ಪ್ರಶ್ನಿಸುವುದಿಲ್ಲ. ಎಲ್ಲವೂ ಸಚಿವರು ಅಂದುಕೊಂಡಂತೆ ಆಗಿದೆ. ಆದರೆ, ವಾಸ್ತವದಲ್ಲಿ ಹೀಗಾಗಬಾರದು’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಬಿಜೆಪಿಯ ಮುಖಂಡರು.

ಈ ಕುರಿತು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ಜನ್ಮದಿನದಂದು ಸೂಕ್ತವೇ?

ಅಕ್ಟೋಬರ್‌ 3ರಂದು ಆನಂದ್‌ ಸಿಂಗ್‌ ಅವರ ಜನ್ಮದಿನ. ಈ ಸಂದರ್ಭದಲ್ಲೇ ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭ ಆಯೋಜಿಸಿದ ಜಿಲ್ಲಾಡಳಿತದ ಕ್ರಮದ ಔಚಿತ್ಯದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.

ಕಾರ್ಯಕ್ರಮದ ಸ್ಥಳದಲ್ಲಿ ಆನಂದ್‌ ಸಿಂಗ್‌ ಅವರ ಜನ್ಮದಿನ ಆಚರಿಸಲಿಲ್ಲ. ಆದರೆ, ನಟ ಅಜಯ್‌ ರಾವ್‌ ಸೇರಿದಂತೆ ಹಲವು ಗಣ್ಯರು ಸಚಿವರಿಗೆ ಜನ್ಮದಿನದ ಶುಭ ಕೋರಿದರು. ಸಿಂಗ್‌ ಅವರ ಕೆಲವು ಬೆಂಬಲಿಗರು ಪ್ರಧಾನ ವೇದಿಕೆಯಲ್ಲಿ ಕೇಕ್‌ ಕತ್ತರಿಸಲು ಅನುಮತಿ ಕೋರಿದ್ದರು. ಆದರೆ, ಜಿಲ್ಲಾಡಳಿತ ಅದಕ್ಕೆ ಅವಕಾಶ ಕಲ್ಪಿಸಲಿಲ್ಲ ಎನ್ನುವುದು ಗೊತ್ತಾಗಿದೆ. ‘ಉದ್ದೇಶಪೂರ್ವಕವಾಗಿಯೇ ಅ.2, 3ರಂದು ಕಾರ್ಯಕ್ರಮ ಸಂಘಟಿಸಲಾಗಿತ್ತು. ಸರ್ಕಾರಿ ಕಾರ್ಯಕ್ರಮವನ್ನು ಯಾರೇ ಆಗಲಿ ಹೈಜಾಕ್‌ ಮಾಡುವುದು ಸರಿಯಲ್ಲ’ ಎಂದು ಸ್ವಪಕ್ಷದವರು, ವಿಪಕ್ಷದವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT