ಸೋಮವಾರ, ಸೆಪ್ಟೆಂಬರ್ 20, 2021
30 °C
ಹಂಪಿಯಲ್ಲಿ ಫಿಲ್ಮ್‌ ಸಿಟಿ

ವಿಜಯನಗರ ಜಿಲ್ಲೆಯಲ್ಲಿ ಮೊದಲ ಸ್ವಾತಂತ್ರ್ಯ ದಿನಾಚರಣೆ: ಆನಂದ್‌ ಸಿಂಗ್‌ ಧ್ವಜಾರೋಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಜಿಲ್ಲಾಮಟ್ಟದ ಸ್ವಾತಂತ್ರ್ಯ ದಿನ ನಗರದ ಕ್ರೀಡಾಂಗಣದಲ್ಲಿ ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.

ಸಚಿವ ಆನಂದ್ ಸಿಂಗ್ ಅವರು ತ್ರಿವರ್ಣ ಧ್ವಜಾರೋಹಣ ಮಾಡಿ, ನಗರದ ವಡಕರಾಯ ದೇವಸ್ಥಾನದಿಂದ ಸ್ಫೂರ್ತಿ ವೇದಿಕೆಯವರು ತಂದಿದ್ದ ಜ್ಯೋತಿಯಿಂದ ಬೃಹತ್‌ ಜ್ಯೋತಿ ಬೆಳಗಿಸಿದರು. ಬಳಿಕ ಪರೇಡ್‌ ಕಮಾಂಡರ್‌ ಗೋವಿಂದ ನೇತೃತ್ವದ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಕೊರೊನಾ ವಾರಿಯರ್ಸ್‌, ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಗರಿಬೊಮ್ಮನಹಳ್ಳಿಯ ಕಿರಣ್‌ ಕುಮಾರ್‌ ಅವರನ್ನು ಸನ್ಮಾನಿಸಿದರು. ದರೋಜಿ ಕರಡಿಧಾಮದ ಜಂಗಲ್ ಸಫಾರಿಯ ಮೂರು ವಾಹನಗಳು, ಐದು ಆಂಬುಲೆನ್ಸ್‌ಗಳನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ‘ತಾಲ್ಲೂಕಿನ ಹಂಪಿ ಬಳಿಯ ಕಮಲಾಪುರ ಸಮೀಪದ 50 ಎಕರೆ ಪ್ರದೇಶದಲ್ಲಿ ಫಿಲ್ಮ್‌ ಸಿಟಿ ನಿರ್ಮಿಸಲಾಗುವುದು. ನಗರದಲ್ಲಿ ₹100 ಕೋಟಿಯಲ್ಲಿ 50 ಎಕರೆಯಲ್ಲಿ ಎತ್ತಿನಗಾಡಿ, ಕುಸ್ತಿ, ಗದ್ದೆ ಓಟ, ಕಬಡ್ಡಿ, ರಂಗೋಲಿ ಸ್ಪರ್ಧೆ, ಖೋ ಖೋ, ಕ್ರಿಕೆಟ್‌, ಜಂಪ್‌ರೋಪ್‌, ಫುಟ್‌ಬಾಲ್‌, ಬಾಸ್ಕೆಟ್‌ಬಾಲ್‌ ಆಡುವುದಕ್ಕೆ ಒಳ ಮತ್ತು ಹೊರ ಕ್ರೀಡಾಂಗಣ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

‘ತುಂಗಭದ್ರಾ ಸ್ಟೀಲ್ಸ್‌ ಪ್ರಾಡಕ್ಟ್ಸ್‌ಗೆ (ಟಿಎಸ್‌ಪಿ) ಸೇರಿದ 83 ಎಕರೆ ಜಾಗದ ಪೈಕಿ 30 ಎಕರೆಯಲ್ಲಿ 250 ಹಾಸಿಗೆ ಸೌಲಭ್ಯವುಳ್ಳ ಸರ್ಕಾರಿ ಆಸ್ಪತ್ರೆ ನಿರ್ಮಿಸಲಾಗುವುದು. ಬರುವ ದಿನಗಳಲ್ಲಿ ಅದೇ ಪರಿಸರದಲ್ಲಿ ಮೆಡಿಕಲ್‌ ಕಾಲೇಜು ಸಹ ನಿರ್ಮಿಸಲಾಗುವುದು. ಇನ್ನುಳಿದ ಜಾಗದಲ್ಲಿ ಸುಸಜ್ಜಿತವಾದ ಜಿಲ್ಲಾಡಳಿತ ಭವನ ತಲೆ ಎತ್ತಲಿದೆ. ವಿಜಯನಗರ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳ ನಿರ್ಮಾಣ, ಅಧಿಕಾರಿಗಳ ನೇಮಕ ಪ್ರಕ್ರಿಯೆ ನಡೆದಿದೆ. ₹100 ಕೋಟಿ ಅನುದಾನ ಕೊಡುವಂತೆ ಪ್ರಸ್ತಾವ ಸಲ್ಲಿಸಲಾಗಿದ್ದು, ಆರ್ಥಿಕ ಇಲಾಖೆಯು ಈಗಾಗಲೇ ₹50 ಕೋಟಿ ಬಿಡುಗಡೆಗೊಳಿಸಿದೆ’ ಎಂದರು.

‘ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೇವಲ ಸಂಶೋಧನೆಗೆ ಸೀಮಿತವಾಗಿದೆ. ಅದಕ್ಕೆ ಸೇರಿದ 750 ಎಕರೆಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ನಿರ್ಮಿಸಿ, ಅದನ್ನು ಉನ್ನತ ದರ್ಜೆಗೆ ಏರಿಸಲಾಗುವುದು. ನಮ್ಮ ಭಾಗದಲ್ಲಿ ಗಿಡಮೂಲಿಕೆಗಳು ಹೆಚ್ಚಾಗಿ ಬೆಳೆಯುತ್ತವೆ. ತುಂಗಭದ್ರಾ ಜಲಾಶಯದ ಹಿನ್ನೀರಿನ ಸದುಪಯೋಗ ಪಡೆದು, ಆಯುರ್ವೇದ, ಕೃಷಿ ವಿಶ್ವವಿದ್ಯಾಲಯ, ಎಂಜಿನಿಯರಿಂಗ್‌ ಕಾಲೇಜು, ಸರ್ಕಾರಿ ಡಿಪ್ಲೊಮಾ ಕಾಲೇಜು ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

‘₹4 ಕೋಟಿಯಲ್ಲಿ ನಗರದಲ್ಲಿ ಸುಸಜ್ಜಿತ ಡಿಜಿಟಲ್‌ ಲೈಬ್ರರಿ ನಿರ್ಮಿಸಲಾಗುವುದು. ₹24 ಕೋಟಿ ವೆಚ್ಚದಲ್ಲಿ ಬಾಲಕಿಯರ ಪ್ರೌಢಶಾಲೆ, ಜೂನಿಯರ್‌ ಕಾಲೇಜು ನಿರ್ಮಿಸಲಾಗುವುದು. ₹18 ಕೋಟಿಯಲ್ಲಿ ಟಿ.ಬಿ. ಡ್ಯಾಂ ವೃತ್ತದಿಂದ ಹೊಸ ಜಿಲ್ಲಾಧಿಕಾರಿ ಕಚೇರಿ ಮೂಲಕ ವಾಲ್ಮೀಕಿ ವೃತ್ತಕ್ಕೆ ರಸ್ತೆ ನಿರ್ಮಿಸಲಾಗುವುದು. ₹24 ಕೋಟಿ ವೆಚ್ಚದಲ್ಲಿ ಜೋಳದರಾಶಿ ಗುಡ್ಡದ ಅಭಿವೃದ್ಧಿ ಕಾರ್ಯ ಆರಂಭಗೊಂಡಿದ್ದು, ಪ್ರವಾಸಿ ತಾಣವಾಗಿ ಬದಲಿಸಲಾಗುವುದು’ ಎಂದು ಹೇಳಿದರು.

‘ಅನಂತಶಯನಗುಡಿ ಬಳಿ ರೈಲ್ವೆ ಮೇಲು ಸೇತುವೆ ನಿರ್ಮಿಸಲಾಗುವುದು. ಜಿಲ್ಲಾ ಖನಿಜ ನಿಧಿಯಿಂದ ಈಗಾಗಲೇ ₹15 ಕೋಟಿ ಅನುದಾನ ನೀಡಲಾಗಿದೆ. ಜಿಲ್ಲಾ ಖನಿಜ ಪ್ರತಿಷ್ಠಾನ ಯೋಜನೆಯಡಿ ಪ್ರತಿ ವರ್ಷ 150 ಅಭ್ಯರ್ಥಿಗಳಿಗೆ ಐಎಎಸ್‌, ಕೆಎಎಸ್‌ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುವುದು’ ಎಂದರು.

ಸಂಸದ ವೈ.ದೇವೇಂದ್ರಪ್ಪ, ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಾವಣ್ಯ, ಡಿವೈಎಸ್ಪಿಗಳಾದ ವಿಶ್ವನಾಥರಾವ ಕುಲಕರ್ಣಿ, ಕಾಶಿಗೌಡ, ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಇದ್ದರು.

ವಿಜಯನಗರ ಜಿಲ್ಲೆ ಹೋರಾಟಗಾರರ ಸ್ಮರಣೆ: ಆನಂದ್‌ ಸಿಂಗ್‌ ಅವರು ಅವರ ಭಾಷಣದಲ್ಲಿ ವಿಜಯನಗರ ಜಿಲ್ಲೆಗೆ ಹೋರಾಡಿದವರನ್ನು ಸ್ಮರಿಸಿದರು. ‘2005ರಲ್ಲಿ ಅಂದಿನ ಶಾಸಕ ರತನ್‌ ಸಿಂಗ್‌ ಗಂಗಾಮತ ಸಮುದಾಯ ಭವನದಲ್ಲಿ ಜಿಲ್ಲೆ ಹೋರಾಟಕ್ಕೆ ಚಾಲನೆ ನೀಡಿದ್ದರು. ಆದರೆ, ಅಧಿಕೃತವಾಗಿ ಹೋರಾಟದ ಸ್ವರೂಪ ಪಡೆದಿದ್ದು 2007–08ರಲ್ಲಿ. ದಿವಂಗತ ಕುರುಹಟ್ಟಿ ವೆಂಕಪ್ಪ, ಉಳ್ಳೇಶ್ವರ, ಹುಸೇನ್‌ ತಂಬ್ರಹಳ್ಳಿ, ಕಾಸಿಂ ಷಾ ನಕ್ಷಾ ಬಂದಿ ಹೋರಾಟದ ಮುಂಚೂಣಿಯಲ್ಲಿದ್ದರು’ ಎಂದು ನೆನೆದರು.

‘ವೈ. ಯಮುನೇಶ, ಮಲ್ಲಾರಿ ದೀಕ್ಷಿತ್‌, ಎಸ್‌. ಗಾಳೆಪ್ಪ, ಮಡ್ಡಿ ಮಂಜುನಾಥ, ವಿಜಯಕುಮಾರ, ಗುಜ್ಜಲ್‌ ನಾಗರಾಜ್‌, ನಿಂಬಗಲ್‌ ರಾಮಕೃಷ್ಣ, ಎಂ.ಸಿ. ವೀರಸ್ವಾಮಿ, ಪಾಂಡುರಂಗ ಶೆಟ್ಟಿ, ಜಂಬಾನಹಳ್ಳಿ ವೆಂಕೋಬಣ್ಣ, ಬಾಬುಲಾಲ್‌ ಜೈನ್‌, ಜಿ.ಕೆ. ಹನುಮಂತಪ್ಪ, ಅಯ್ಯಾಳಿ ತಿಮ್ಮಪ್ಪ, ಶಿವಾನಂದ, ಟಿ.ಆರ್‌. ಚಂದ್ರಶೇಖರ, ದಿ. ನಾರಾಯಣ ಭಟ್ಟರು, ಪೂಜಾರಿ ದುರುಗಪ್ಪ, ಜಂಬಯ್ಯ ನಾಯಕ, ಪಿ. ವೆಂಕಟೇಶ, ಕುಂ.ವೀರಭದ್ರಪ್ಪ, ಬಂಗಾರಿ ಹನುಮಂತ ಅವರು ಸಕ್ರಿಯರಾಗಿದ್ದರು. ಈ ಭಾಗದ ಎಲ್ಲ ಮಠಾಧೀಶರು, ಸಂಘ ಸಂಸ್ಥೆಗಳು, ವಿವಿಧ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು ಬೆಂಬಲ ಸೂಚಿಸಿದ್ದರು’ ಎಂದರು.

‘ಸತತ ಹೋರಾಟ, ರಾಜಕೀಯ ಇಚ್ಛಾಶಕ್ತಿಯಿಂದ 2021ರ ಫೆಬ್ರುವರಿ 8ರಂದು ವಿಜಯನಗರ ಹೊಸ ಜಿಲ್ಲೆಯಾಗಿ ಉದಯಿಸಿತು. ಈ ಜಿಲ್ಲೆಗೆ ಉತ್ತಮ ಭವಿಷ್ಯ ಇದೆ. ನಾವೆಲ್ಲರೂ ಇತಿಹಾಸದ ಪುಟಗಳಲ್ಲಿ ಸೇರುತ್ತೇವೆ. ಇದನ್ನು ಆಗು ಮಾಡಿದ ಹಿಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಕೃತಜ್ಞತನೆ ತಿಳಿಸುತ್ತೇನೆ’ ಎಂದು ಹೇಳಿದರು.


ಸಚಿವ ಆನಂದ್ ಸಿಂಗ್ ಅವರು ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದರು.

39 ನಿಮಿಷ ಭಾಷಣ, ತಪ್ಪು ಉಚ್ಚಾರ: ಸಚಿವ ಆನಂದ್‌ ಸಿಂಗ್ ಅವರು ಧ್ವಜಾರೋಹಣ ನೆರವೇರಿಸಿ 13 ಪುಟಗಳ ಭಾಷಣವನ್ನು 39 ನಿಮಿಷಗಳಲ್ಲಿ ಓದಿ ಮುಗಿಸಿದರು. ಈ ವೇಳೆ ಸಾಕಷ್ಟು ಪದಗಳ ಉಚ್ಚಾರವನ್ನು ತಪ್ಪಾಗಿ ಮಾಡಿದರು. ಕೆಲವೆಡೆ ಪದಗಳನ್ನು ತಪ್ಪಾಗಿ ಪ್ರಯೋಗಿಸಿದರು. ತಮ್ಮ ಭಾಷಣದ ವೇಳೆ ಆಯಾಸಗೊಂಡ ಅವರು ಎರಡು ಸಲ ನೀರು ಕೇಳಿ ಕುಡಿದರು.

ಅದಿರಿನ ನಿಕ್ಷೇಪ ಬದಲು ನಿಪೇಕ್ಷೆ, ಅಧಿಸೂಚನೆ ಬದಲು ಆಧಿಸೂಚನೆ, ಪಿ.ಎಂ. ಕಿಸಾನ್‌ ಯೋಜನೆ ಬದಲು ಎಂ.ಪಿ. ಕಿಸಾನ್‌ ಯೋಜನೆ, ಸ್ನಾತಕೋತ್ತರ ಬದಲು ಸ್ನಾಕತವೊತ್ತರ, ವಿವಾಹ ಬದಲು ವಿಹಾವ ಎಂದು ಹೇಳಿ ಬಳಿಕ ಸರಿಪಡಿಸಿಕೊಂಡರು.

ತಾವೇ ನಿರ್ಮಿಸಿದ ಧ್ವಜಸ್ತಂಭದಲ್ಲಿ ಹಾರಿಸದ ಧ್ವಜ: ಆನಂದ್‌ ಸಿಂಗ್‌ ಅವರು ವೈಯಕ್ತಿಕವಾಗಿ ₹1 ಕೋಟಿಯಲ್ಲಿ ನಗರದ ಎರಡು ಕಡೆ 100 ಅಡಿ ಎತ್ತರದ ಧ್ವಜ ಸ್ತಂಭ ನಿರ್ಮಿಸಿದ್ದಾರೆ. ಆದರೆ, ಧ್ವಜಾರೋಹಣ ಮಾಡಲಿಲ್ಲ. ಹೋದ ವರ್ಷ ನಗರದ ರೋಟರಿ ವೃತ್ತದಲ್ಲಿ ಧ್ವಜ ಸ್ತಂಭ ಸ್ಥಾಪಿಸಿ, ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧ್ವಜಾರೋಹಣ ಮಾಡಿದ್ದರು. ಈ ವರ್ಷ ಜೋಳದರಾಶಿ ಗುಡ್ಡದಲ್ಲಿ 100 ಅಡಿ ಎತ್ತರದ ಮತ್ತೊಂದು ಧ್ವಜ ಸ್ತಂಭ ಮಾಡಿಸಿದ್ದಾರೆ. ಆದರೆ, ಅಲ್ಲೂ ಧ್ವಜಾರೋಹಣ ಮಾಡಲಿಲ್ಲ. ಆದರೆ, ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಅಧಿಕಾರಿಗಳೊಂದಿಗೆ ಗುಡ್ಡಕ್ಕೆ ತೆರಳಿ ವೀಕ್ಷಿಸಿದರು.

ಇನ್ನು, ನಗರದ ರೈಲು ನಿಲ್ದಾಣ ಬಳಿ ನಿರ್ಮಿಸಿರುವ 100 ಅಡಿ ಎತ್ತರದ ಧ್ವಜ ಸ್ತಂಭದಲ್ಲೂ ಧ್ವಜಾರೋಹಣ ನೆರವೇರಿಸಲಾಯಿತು. ಹೀಗೆ ನಗರದ ಮೂರು ದಿಕ್ಕುಗಳಲ್ಲಿ ಭಾನುವಾರ ಬೃಹತ್‌ ತ್ರಿವರ್ಣ ಧ್ವಜಗಳು ಹಾರಾಡಿ ಎಲ್ಲರ ಗಮನ ಸೆಳೆದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು