ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಘಂಟು: ಇನ್ನರ್ಧಕ್ಕೆ ಉಂಟೇ ಗ್ಯಾರಂಟಿ?

Published 28 ಜೂನ್ 2023, 2:15 IST
Last Updated 28 ಜೂನ್ 2023, 2:15 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರದ ಕೆಲಸಗಳು ಎರಡು ತಿಂಗಳಿನಿಂದ ಅಧಿಕೃತವಾಗಿ ಸಂಪೂರ್ಣ ಸ್ಥಗಿತಗೊಂಡಿದ್ದು, ಅರ್ಧ ನಿಘಂಟು ಹೊರಬಂದಿದೆ. ಇನ್ನರ್ಧ ನಿಘಂಟಿನ ಭವಿಷ್ಯ ಅತಂತ್ರವಾಗಿದೆ.

ತಾಂಡಾ ಅಭಿವೃದ್ಧಿ ನಿಗಮದ ವತಿಯಿಂದ ಕನ್ನಡ ವಿಶ್ವವಿದ್ಯಾಲಯ ಆವರಣದಲ್ಲಿ ಆರಂಭವಾದ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರದ ಬಂಜಾರ–ಕನ್ನಡ ಸಾಮಾನ್ಯ ನಿಘಂಟು ರಚನಾ ಕಾರ್ಯ ‘ನಿರೀಕ್ಷಿತ ಪ್ರಮಾಣದಲ್ಲಿ ಅಗಿಲ್ಲ’ ಎಂಬ ಕಾರಣ ನೀಡಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ನಾಯಕ ಅವರು ಕಳೆದ ಏಪ್ರಿಲ್‌ನಲ್ಲಿ ಡಾ.ಸಣ್ಣರಾಮ ನಿರ್ದೇಶಕರಾಗಿರುವ ನಿಘಂಟು ರಚನಾ ಸಮಿತಿಯನ್ನು ರದ್ದುಗೊಳಿಸಿದ್ದಾರೆ.

‘ಅಧ್ಯಯನ ಕೇಂದ್ರದ ಕೆಲಸಗಳಿಗೆ ನಿಗಮದಿಂದ 2017ರಲ್ಲೇ ₹3 ಕೋಟಿ ಮಂಜೂರಾಗಿದೆ. ₹ 1.50 ಕೋಟಿಯನ್ನು ಆಗಲೇ ನೀಡಲಾಗಿತ್ತು. ಹೀಗಿದ್ದರೂ ನಿಘಂಟು ರಚನಾ ಕಾರ್ಯ ಮುಗಿದಿಲ್ಲ, ನಮಗೂ ಕೇಳುವವರಿದ್ದಾರೆ’ ಎಂಬುದು ಶಿವಶಂಕರ್‌ ಅವರ ವಾದ.

‘2017ರಲ್ಲಿ ನೀಡಲಾದ ಅನುದಾನದಲ್ಲಿ ಕಟ್ಟಡ ನಿರ್ಮಣವಾಯಿತು. ಇನ್ನರ್ಧ ಅನುದಾನ ಬಿಡುಗಡೆಯಾದುದು 2021ರಲ್ಲಿ. ನಿಘಂಟು ರಚನಾ ಕಾರ್ಯ ಆರಂಭವಾದುದು 2021ರ ಅಗಸ್ಟ್‌ನಲ್ಲಿ. ತುಳು ನಿಘಂಟು ರಚನೆಗೆ 10 ವರ್ಷ ಬೇಕಾಯಿತು. ನಾವು ಒಂದೂವರೆ ವರ್ಷದಲ್ಲೇ ಮೊದಲ ಸಂಪುಟ ಹೊರತಂದಿದ್ದೇವೆ. ಎರಡನೇ ಸಂಪುಟವೂ ಬಹುತೇಕ ಸಜ್ಜಾಗಿದೆ. ಆರು ತಿಂಗಳ ಸಮಯ ಕೊಡಿ. ಮುಗಿಸಿಕೊಡುತ್ತೇವೆ’ ಎಂಬುದು ಡಾ.ಸಣ್ಣರಾಮ ಅವರ ಕೋರಿಕೆ.

ಸರ್ಕಾರ ಬದಲಾಗಿದೆ. ನಿಗಮಕ್ಕೆ ಅಧ್ಯಕ್ಷರನ್ನು ಇನ್ನೂ ನೇಮಿಸಿಲ್ಲ. ಹೊಸ ಅಧ್ಯಕ್ಷರು ನಿಘಂಟು ರಚನಾ ಸಮಿತಿಯನ್ನು ಮುಂದವರಿಸಲು ಒಪ್ಪುತ್ತಾರೆಯೇ? ಹೊಸ ಸಮಿತಿಯನ್ನೇ ರಚಿಸಲಾಗುತ್ತದೆಯೇ ಎಂಬ ಪ್ರಶ್ನೆ ಎದ್ದಿರುವ ಕಾರಣ ಬಂಜಾರ ಸಮುದಾಯದ ಬಹಳ ನಿರೀಕ್ಷೆಯ ನಿಘಂಟು ರಚನಾ ಕಾರ್ಯದ ಭವಿಷ್ಯದ ಬಗ್ಗೆ ಅತಂಕ ನೆಲೆಸಿದೆ. ಸದ್ಯ ಕೇಂದ್ರದಲ್ಲಿನ ನಿರ್ದೇಶಕರು, ಇಬ್ಬರು ಸಂಶೋಧನಾ ಸಹಾಯಕರು ಹಾಗೂ ಇತರ ಮೂವರು ಸಿಬ್ಬಂದಿ ಎರಡು ತಿಂಗಳಿಂದ ಸಂಬಳ ಇಲ್ಲದೆ ಅನಧಿಕೃತವಾಗಿ ನಿಘಂಟು ರಚನೆಯಲ್ಲಿ ನಿರತರಾಗಿದ್ದಾರೆ.

‘ನಿಗಮದಲ್ಲಿ ಹಣ ಇಲ್ಲ. ಸಮಿತಿಯ ಕೆಲಸ ಮುಂದುವರಿದರೆ ಸಂಬಳ, ಇತರ ವೆಚ್ಚ ಭರಿಸಬೇಕಾಗುತ್ತದೆ. ಸಮಿತಿ ತನ್ನ ಕೆಲಸವನ್ನು ಅನಧಿಕೃತವಾಗಿ ಮುಂದುವರಿಸಲಿ, ಹೊಸ ಅಧ್ಯಕ್ಷರ ನೇಮಕವಾದ ಬಳಿಕ ಸ್ವಲ್ಪ ಸಮಯ ನೀಡಿ ನಿಘಂಟಿನ ಎರಡನೇ ಸಂಪುಟ  ಹೊರತರಲು ಅವಕಾಶ ಕಲ್ಪಿಸಲಾಗುವುದು ಎಂಬ ಮೌಖಿಕ ಭರವಸೆಯನ್ನು ಶಿವಶಂಕರ್ ಅವರು ನನಗೆ ನೀಡಿದ್ದಾರೆ. ಇದನ್ನು ನಾನು ಡಾ.ಸಣ್ಣರಾಮ ಅವರಿಗೆ ತಿಳಿಸಿದ್ದೇನೆ. ಹೀಗಾಗಿ ಅವರು ತಮ್ಮ ಕೆಲಸ ಮುಂದುವರಿಸಿದ್ದಾರೆ. ಸರ್ಕಾರ ಮನಸ್ಸು ಮಾಡಬಹುದು ಎಂಬ ನಿರೀಕ್ಷೆ ಇದೆ‘ ಎಂದು ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ‘ಗೆ ತಿಳಿಸಿದರು.

ಈ ಬಗ್ಗೆ ಶಿವಶಂಕರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ಅದು ಸಾಧ್ಯವಾಗಲಿಲ್ಲ.

ಪ್ಪು ಬಿಳುಪಿನಲ್ಲಿ ಕುಂದಿದ ನಿಘಂಟಿನ ಚೆಂದ

ಬಂಜಾರ ಸಮುದಾಯದ ವೇಷ ಭೂಷಣ ಕಲೆ ಸಂಸ್ಕೃತಿಗಳೆಲ್ಲ ವರ್ಣಮಯ. ಆದರೆ ಈ ಭಾಷೆಗೆ ಸ್ವಂತ ಲಿಪಿ ಇಲ್ಲ. ಆ ಕೊರತೆಯನ್ನು ತುಂಬಿಕೊಡುವ ದೊಡ್ಡ ಕೆಲಸ ನಿಘಂಟು ರಚನಾ ಸಮಿತಿಗೆ ಇದೆ. ಅದನ್ನು ಶ್ರದ್ಧೆಯಿಂದಲೇ ಮಾಡಲಾಗಿದೆ. ಬಂಜಾರ ಪದದ ಕನ್ನಡ ಅರ್ಥ ಲಿಪ್ಯಂತರ ಪದ ಪ್ರಯೋಗ ವ್ಯಾಕರಣ ಸೂಚಕ ಪದಗಳು ಹಾಗೂ ಛಾಯಾಚಿತ್ರಗಳನ್ನು ನಿಘಂಟು ಒಳಗೊಂಡಿದೆ. ಸದ್ಯ ಅ ಅಕ್ಷರದಿಂದ ಞ ಅಕ್ಷರವರೆಗಿನ (ಸುಮಾರು 3500 ಪದಗಳು)  ಪದಗಳಿಗೆ ಅರ್ಥ ವಿವರಣೆ ಆಗಿದೆ. ಸುಮಾರು 7500 ಪದಗಳ ಎರಡನೇ ಸಂಪುಟ ಸಜ್ಜಾಗುತ್ತಿದೆ. ಅದನ್ನಾದರೂ ವರ್ಣಮಯವಾಗಿ ಹೊರತರಬೇಕು ಎಂಬುದು ಡಾ.ಸಣ್ಣರಾಮ ಅವರ ಚಿಂತನೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ ಆವರಣದಲ್ಲಿರುವ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರ
ಹಂಪಿ ಕನ್ನಡ ವಿಶ್ವವಿದ್ಯಾಲಯ ಆವರಣದಲ್ಲಿರುವ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT