ಗುರುವಾರ , ಮೇ 13, 2021
18 °C

ಅವ್ಯವಸ್ಥೆ ನಡುವೆ ಜನರ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ನಗರದ ಜಂಬುನಾಥ ರಸ್ತೆಯಲ್ಲಿನ 24ನೇ ವಾರ್ಡಿನ ಮೆಹಬೂಬ್ ನಗರದ ನಿವಾಸಿಗಳು ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೇ ಜೀವನ ನಡೆಸುತ್ತಿದ್ದಾರೆ.

ನಗರದ ಹೃದಯ ಭಾಗದಲ್ಲೇ ಇದ್ದರೂ ನಗರದ ನಿವಾಸಿಗಳೆಂಬ ಭಾವನೆ ಅವರಲ್ಲಿಲ್ಲ. ಇತರೆ ಬಡಾವಣೆಗಳಿಗೆ ಕಲ್ಪಿಸಿರುವ ಸೌಲಭ್ಯ ಅವರ ಬಡಾವಣೆಯಲ್ಲಿ ಇರದೇ ಇರುವುದು ಅದಕ್ಕೆ ಪ್ರಮುಖ ಕಾರಣ.

ಶುದ್ಧ ಕುಡಿಯುವ ನೀರು ಪೂರೈಕೆ, ಸಮರ್ಪಕವಾದ ಚರಂಡಿ, ರಸ್ತೆ, ಬೀದಿ ದೀಪ, ತ್ಯಾಜ್ಯ ವಿಲೇವಾರಿ ಸೇರಿದಂತೆ ಯಾವುದೂ ಸರಿಯಾಗಿ ಇಲ್ಲ. ಇಲ್ಲಗಳ ನಡುವೆಯೇ ಸ್ಥಳೀಯರು ಅನಿವಾರ್ಯವಾಗಿ ಬದುಕು ನಡೆಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಷ್ಟೇ ಈ ಕಡೆ ಮುಖ ಮಾಡುವ ಜನಪ್ರತಿನಿಧಿಗಳು, ಮುಗಿದ ನಂತರ ತಿರುಗಿಯೂ ನೋಡುವುದಿಲ್ಲ. ಖುದ್ದು ಭೇಟಿ ಮಾಡಿ ಸಮಸ್ಯೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪ.

‘ಅನೇಕ ದಶಕಗಳ ಹಿಂದೆ ನಿರ್ಮಿಸಿದ ಚರಂಡಿಗಳೆಲ್ಲ ಹಾಳಾಗಿವೆ. ಅವುಗಳ ಜಾಗದಲ್ಲಿ ವೈಜ್ಞಾನಿಕವಾಗಿ ಚರಂಡಿ ನಿರ್ಮಿಸಬೇಕು. ಒಳಚರಂಡಿಯ ಚೇಂಬರ್‌ ರಸ್ತೆಕ್ಕಿಂತ ಎತ್ತರದಲ್ಲಿವೆ. ಸಿ.ಸಿ ರಸ್ತೆ ನಿರ್ಮಿಸಿದರೆ ಆ ಸಮಸ್ಯೆ ಬಗೆಹರಿಯಬಹುದು. ಸದಾ ಚರಂಡಿಗಳು ತುಂಬಿ ಹರಿಯುತ್ತವೆ. ಮಳೆ ಬಂದರಂತೂ ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸುತ್ತದೆ. ಸೊಳ್ಳೆ, ಕ್ರಿಮಿ ಕೀಟಗಳಿಂದ ಜನರ ಬದುಕು ದುಸ್ತರವಾಗಿದೆ’ ಎಂದು ಸ್ಥಳೀಯ ನಿವಾಸಿ ರಮೇಶ ಗೋಳು ತೋಡಿಕೊಂಡರು.

‘ಅನೇಕ ಕಡೆ ಯುಜಿಡಿ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸಿ ರಸ್ತೆ ಸಮತಟ್ಟು ಮಾಡದೇ ಬಿಟ್ಟಿರುವ ಕಾರಣ ವಾಹನ ಸವಾರರು ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಬೀದಿ ದೀಪಗಳ ಅಳವಡಿಕೆಗೆ ಅನುದಾನದ ಕೊರತೆ ನೆಪವೊಡ್ಡಲಾಗುತ್ತಿದೆ. ಕತ್ತಲಲ್ಲೇ ಜನ ಓಡಾಡುವಂತಾಗಿದೆ’ ಎಂದು ಇನ್ನೊಬ್ಬ ನಿವಾಸಿ ರವಿ ತಿಳಿಸಿದರು.

‘ವಾರ್ಡಿನಿಂದ ಸಮರ್ಪಕವಾಗಿ ಕಸ ವಿಲೇವಾರಿ ಮಾಡುವುದಿಲ್ಲ. ಎರಡು ವಾರಗಳಿಗೊಮ್ಮೆ ನಗರಸಭೆ ಕಸ ಸಂಗ್ರಹಿಸುವ ವಾಹನ ಬರುತ್ತದೆ. ದಿನನಿತ್ಯದ ಮನೆಯ ಕಸ ಅಷ್ಟು ದಿನಗಳ ವರೆಗೆ ಇಟ್ಟುಕೊಳ್ಳಲು ಸಾಧ್ಯವೇ? ಅದು ಆಗದ ಕೆಲಸ. ಹೀಗಾಗಿ ಜನ ರಸ್ತೆ ಬದಿ ತ್ಯಾಜ್ಯ ಎಸೆದು ಹೋಗುತ್ತಾರೆ’ ಎಂದರು.

‘ಕನಿಷ್ಠ ಮೂಲಸೌಕರ್ಯ ಒದಗಿಸಲು ನಗರಸಭೆ ಪೌರಾಯುಕ್ತರಿಗೆ ಅನೇಕ ಸಲ ಮನವಿ ಪತ್ರ ಸಲ್ಲಿಸಲಾಗಿದೆ. ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ, ಒಮ್ಮೆಯೂ ವಾರ್ಡಿಗೆ ಬಂದಿಲ್ಲ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು