ಬಿಜೆಪಿ ಟೋಪಿ ಧರಿಸದ ಬಿಎಸ್ವೈ, ವೇದಿಕೆಗೆ ಬಾರದ ಸಂಘಟನಾ ಕಾರ್ಯದರ್ಶಿ ಸಂತೋಷ್

ಹೊಸಪೇಟೆ: ವಿಜಯನಗರದ ನೆಲದಲ್ಲಿ ಆರಂಭಗೊಂಡ ಬಿಜೆಪಿ ರಾಜ್ಯ ಕಾರ್ಯಕಾರಿಣಿಗೂ ಮುನ್ನ ನಡೆದ ಪಕ್ಷದ ಬಾವುಟ ಹಾರಿಸುವ ಕಾರ್ಯಕ್ರಮದಲ್ಲಿ ಮುಖಂಡರೊಬ್ಬರು ಶಾಸಕ ಬಿ.ಎಸ್. ಯಡಿಯೂರಪ್ಪನವರಿಗೆ ಬಿಜೆಪಿ ಟೋಪಿ ಹಾಕಲು ಮುಂದಾದರು. ಆದರೆ, ಅವರು ಅದನ್ನು ನಿರಾಕರಿಸಿದರು. ಎಲ್ಲ ಮುಖಂಡರು ಟೋಪಿ ಧರಿಸಿದ್ದರು. ಆದರೆ, ಬಿಎಸ್ವೈ ಮಾತ್ರ ಧರಿಸಿರಲಿಲ್ಲ. ಸಭಾ ಕಾರ್ಯಕ್ರಮದಲ್ಲೂ ಟೋಪಿ ಧರಿಸದೇ ಪಾಲ್ಗೊಂಡಿದ್ದರು.
ಇನ್ನು, ಬೆಳಿಗ್ಗೆಯಿಂದ ಎಲ್ಲೆಡೆ ಓಡಾಡಿಕೊಂಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಎಲ್ಲ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. ಆದರೆ, ಸಭಾ ಕಾರ್ಯಕ್ರಮದ ವೇದಿಕೆಗೆ ಬರಲಿಲ್ಲ. ನಿರೂಪಕರು ಅವರನ್ನು ಕರೆದರೂ ಕೂಡ ಅವರು ಮೇಲೆ ಬರದೇ ಕಾರ್ಯಕಾರಿಣಿ ಸದಸ್ಯರೊಂದಿಗೆ ಕುಳಿತರು.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಕಾಂಗ್ರೆಸ್ ಸಂಚಿನ ಪಕ್ಷ. ಅದರಲ್ಲಿ ಅದು ಪರಿಣಿತಿ ಹೊಂದಿದೆ. ಕೆ.ಎಸ್. ಈಶ್ವರಪ್ಪ ವಿರುದ್ಧ ಕೂಡ ಕಾಂಗ್ರೆಸ್ ಸಂಚು ಮಾಡಿ, ಅವರು ರಾಜೀನಾಮೆ ನೀಡುವಂತೆ ಮಾಡಿದೆ. ಸಂತೋಷ್ ಪಾಟೀಲ ಆತ್ಮಹತ್ಯೆಗೆ ಹಲವು ಆಯಾಮಗಳಿವೆ. ಆದರೆ, ತನಿಖೆ ನಂತರ ಎಲ್ಲವೂ ಹೊರಬರಲಿದೆ ಎಂದರು.
ಇದನ್ನೂ ಓದಿ: ವಿಜಯನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ; ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಈಶ್ವರಪ್ಪನವರು ಪುನಃ ಮಂತ್ರಿಯಾಗುವರು. ಅವರು ಪಕ್ಷದ ದೊಡ್ಡ ನೇತಾರರು. ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.