ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರುಗಾಲುವೆ: ಹರಿಯದ ನೀರು; ಸಿಗದ ಸ್ಪಂದನೆ

ರಾಯ ಕಾಲುವೆಯ ಸೈಫನ್ ಬಾವಿ ಸಮಸ್ಯೆ: 50 ಎಕರೆ ಜಮೀನು ಬರಡಾಗುವ ಭೀತಿ
Published 22 ಮೇ 2024, 6:17 IST
Last Updated 22 ಮೇ 2024, 6:17 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ಚಿತ್ತವಾಡ್ಗಿ ತುಂಗಭದ್ರಾ ಕೆಳದಂಡೆ ಕಾಲುವೆಯ (ಎಲ್ಎಲ್‌ಸಿ) ಅಡಿಭಾಗದಲ್ಲಿ ಹಾದು ಹೋಗಿರುವ ರಾಯ ಕಾಲುವೆಯ 27ನೇ ನಂಬರ್ ಕಿರುಗಾಲುವೆಯ ಪೈಪ್‌ಗಳಲ್ಲಿ ಸರಾಗವಾಗಿ ನೀರು ಹರಿದು ಹೋಗದೆ ಸುಮಾರು 50 ಎಕರೆಯಷ್ಟು ನೀರಾವರಿ ಭೂಮಿ ಬರಡಾಗುವ ಅಪಾಯ ಎದುರಾಗಿದೆ.

ನೀರಿಲ್ಲದ ಕಾರಣಕ್ಕೆ ಈಗಾಗಲೇ  ಕೆಲವು ರೈತರು ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದು, ಉಳಿದ ರೈತರು ಸಹ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಸುಮಾರು 10 ವರ್ಷಗಳಿಂದ ಮನವಿಗಳ ಮೇಲೆ ಮನವಿ ಕೊಟ್ಟರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.

‘ರಾಯಕಾಲುವೆಯಿಂದ ಕಿರುಗಾಲುವೆಗೆ ನೇರವಾಗಿ ನೀರು ಬಂದರೆ ಸಮಸ್ಯೆಯೇ ಇಲ್ಲ. 10 ವರ್ಷಗಳ ಹಿಂದೆ ಎಲ್‌ಎಲ್‌ಸಿ ಕಾಲುವೆಯನ್ನು ಎರಡೂ ಬದಿಗೆ ತಲಾ 10 ಅಡಿಯಷ್ಟು ವಿಸ್ತರಿಸಿದಾಗ ಸೈಫನ್ ಬಾವಿಗಳನ್ನು ಮುಂದಕ್ಕೆ ಚಾಚದೆ ಅಲ್ಲಿಯೇ ಬಿಟ್ಟಿದ್ದೇ ಸಮಸ್ಯೆ. ಈ ಬಾವಿಯಲ್ಲಿ ಕಸ, ಮಣ್ಣು ತುಂಬಿಕೊಳ್ಳುತ್ತಿದ್ದು, ಮೂರು ತಿಂಗಳಿಗೊಮ್ಮೆ ರೈತರೇ ತೆರವು ಮಾಡಬೇಕಾಗಿದೆ. ಆದರೆ ಬಾವಿಯ ಮೇಲ್ಗಡೆಯ ಚಪ್ಪಡಿ ಕಲ್ಲು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಬಾವಿಯೊಳಗೆ ಇಳಿಯಲು ಯಾರೂ ಮುಂದಾಗುತ್ತಿಲ್ಲ. ಇದು 10 ವರ್ಷದಿಂದಲೂ ನಾವು ಅನುಭವಿಸುತ್ತಿರುವ ಸಮಸ್ಯೆ’ ಎಂದು 27ನೇ ನಂಬರ್ ಕಿರುಗಾಲುವೆಯನ್ನೇ ನಂಬಿ ಐದು ಎಕರೆ ಬಾಳೆತೋಟ ಮಾಡಿಕೊಂಡಿರುವ ದೊಡ್ಡಯ್ಯ ಸ್ವಾಮಿ ಹೇಳಿದರು.

‘ತುಂಗಭದ್ರಾ ಮಂಡಳಿಯವರು ಆಂಧ್ರದ ಸಲುವಾಗಿ ಕಾಲುವೆ ವಿಸ್ತರಣೆ ಮಾಡುತ್ತಿದ್ದಾಗ ನಮ್ಮ ನೀರಾವರಿ ಇಲಾಖೆಯ ಎಂಜಿನಿಯರ್‌ಗಳು ಇಲ್ಲಿನ ಕಿರುಗಾಲುವೆಗಳ ಮೇಲ್ವಿಚಾರಣೆ ನಡೆಸಬೇಕಿತ್ತು. ಆದನ್ನು ಮಾಡದ ಕಾರಣವೇ ಇಷ್ಟೆಲ್ಲ ಸಮಸ್ಯೆ ಎದುರಾಗಿದೆ. ಬಳಿಕವೂ ಎಂಜಿನಿಯರ್‌ಗಳು ಆಗಾಗ ಬಂದು ಪರಿಶೀಲನೆ ನಡೆಸಿದ್ದನ್ನು ಸ್ಥಳೀಯರು ಕಂಡಿಲ್ಲ’ ಎಂದು ಈ ಭಾಗದ ಇನ್ನೊಬ್ಬ ಕೃಷಿಕ ಎಂ.ಮಲ್ಲಯ್ಯ ಹೇಳಿದರು.

ರಾಯಕಾಲುವೆಗೆ 40ಕ್ಕೂ ಅಧಿಕ ಕಿರುಗಾಲುವೆಗಳಿದ್ದು, ರೈಲು ನಿಲ್ದಾಣದ ಪ್ಲಾಟ್‌ಫಾರಂ ಕೆಳಗಡೆಯಿಂದ ಹೋಗುವ ಕಿರುಗಾಲುವೆಯೊಂದು ವಿದ್ಯುತ್ ಕಂಬದಿಂದಾಗಿ ಮುಚ್ಚಿ 88 ಮುದ್ಲಾಪುರ ಭಾಗದ ಹಲವಾರು ರೈತರು ಕಷ್ಟಕ್ಕೆ ಸಿಲುಕಿದ್ದಾರೆ. ಬಹುತೇಕ ಅದೇ ರೀತಿಯ ಸ್ಥಿತಿಯನ್ನು 27ನೇ ಕಿರುಗಾಲುವೆ ರೈತರೂ ಅನುಭವಿಸುತ್ತಿದ್ದಾರೆ. ಪಕ್ಕದಲ್ಲೇ ಪ್ರಭಾವಿ ವ್ಯಕ್ತಿಯೊಬ್ಬರ ಆಪ್ತರಿಗೆ ಸೇರಿದ ನಿವೇಶನವೂ ಇದ್ದು, ಅಲ್ಲಿ ಲೇಔಟ್‌ ತಲೆ ಎತ್ತುತ್ತಿದೆ. ಇಲ್ಲಿಂದ ನೋಡಿದಾಗ ದೂರದಲ್ಲಿ ರಾಯಲ್‌ ಆರ್ಕಿಡ್ ಹೋಟೆಲ್‌ ಸಹ ಕಾಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಪೂರ್ತಿ ವಸತಿ ಪ್ರದೇಶವಾಗಿ ಬದಲಾಗಲಿದೆ. ಹೀಗಿದ್ದರೂ ಕೃಷಿ ಜಮೀನು ಉಳಿಸಿಕೊಳ್ಳಬೇಕು ಎಂದು ಬಯಸುವ ಕೃಷಿಕರ ಕಷ್ಟಗಳಿಗೆ ಸ್ಪಂದಿಸುವವರಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.

27ನೇ ಕಿರುಗಾಲುವೆಯಲ್ಲಿ ನೀರು ಸರಿಯಾಗಿ ಹರಿಯದೆ ಬರಡಾಗುತ್ತಿರುವ ಫಲವತ್ತಾದ ಭೂಮಿ
27ನೇ ಕಿರುಗಾಲುವೆಯಲ್ಲಿ ನೀರು ಸರಿಯಾಗಿ ಹರಿಯದೆ ಬರಡಾಗುತ್ತಿರುವ ಫಲವತ್ತಾದ ಭೂಮಿ
ಇಂತಹ ಸ್ಥಿತಿ ಇರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಸ್ಥಳ ಪರಿಶೀಲನೆ ನಡೆಸಿ ಟಿ.ಬಿ. ಡ್ಯಾಂ ಅಧಿಕಾರಿಗಳ ಜತೆಗೆ ಚರ್ಚಿಸಿ ಪರಿಹಾರ ಉಪಾಯ ಕಂಡುಕೊಳ್ಳಲಾಗುವುದು.
–ಬಸಪ್ಪ ಜಾನ್ಕರ್‌ ಎಇಇ ಕರ್ನಾಟಕ ನೀರಾವರಿ ನಿಗಮ ಕಮಲಾಪುರ
ನೀರಿಲ್ಲ ಎಂದು ರೈತರು ಜಮೀನು ಮಾರಿದ್ದಾರೋ ನಿವೇಶನ ಮಾಡಲು ಮಾರಾಟ ಮಾಡಿದ್ದಾರೋ ಗೊತ್ತಿಲ್ಲ. ಉಳಿದ ರೈತರು ಆಗಲೇ ಕಿರುಗಾಲುವೆಯ ಸಮಸ್ಯೆ ಬಿಂಬಿಸಬೇಕಿತ್ತು.
–ಶ್ರೀನಿವಾಸ ರಾವ್ ಅಧ್ಯಕ್ಷ ನೀರಾವರಿ ಬಳಕೆದಾರರ ಸಂಘ

₹23 ಲಕ್ಷದ ಕಳಪೆ ಕಾಮಗಾರಿ?

‘ಕಿರುಗಾಲುವೆಯಿಂದ ಬರುವ ನೀರನ್ನು ಜಮೀನುಗಳಿಗೆ ಹರಿಸಲು ಮಡಿಗಾಲುವೆ ನಿರ್ಮಿಸಲಾಗುತ್ತದೆ. ಚಿತ್ತವಾಡ್ಗಿಯಲ್ಲಿ ಇಂತಹ ಮಡಿಗಾಲುವೆ ನಿರ್ಮಿಸಿ 6 ತಿಂಗಳಷ್ಟೇ ಆಗಿದೆ. ಆಗಲೇ ಅಲ್ಲಲ್ಲಿ ಮಣ್ಣು ತುಂಬಿಕೊಂಡಿದ್ದು ಕೆಲವೆಡೆ ಸಿಮೆಂಟ್‌ ಕುಸಿದಿದೆ. ಕೆಲವೆಡೆ ಎತ್ತರದ ಜಾಗದಲ್ಲಿ ಮಡಿಗಾಲುವೆ ಹರಿಯುತ್ತದೆ. ದೂರದ ರೈತರ ಹೊಲಗಳಿಗೆ ನೀರು ಹರಿದು ಹೋಗುವುದು ಸಾಧ್ಯವೇ ಇಲ್ಲದ ಸ್ಥಿತಿ ಇದೆ. ₹23 ಲಕ್ಷ ವೆಚ್ಚ ಮಾಡಿದ್ದರಲ್ಲಿ ಯಾರಿಗೆ ಎಷ್ಟು ಪಾಲು ಇದೆಯೋ ಎಂಬ ಸಂಶಯ ಮಡಿಗಾಲುವೆಗಳನ್ನು ಕಂಡಾಗ ಮೂಡುತ್ತದೆ’ ಎಂದು ಸ್ಥಳೀಯ ರೈತರು  ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT