ಮಂಗಳವಾರ, ಡಿಸೆಂಬರ್ 6, 2022
21 °C

ಸಕ್ಕರೆ ಕಾರ್ಖಾನೆಗಳ ಮಾಫಿಯಾ ಒತ್ತಡದಲ್ಲಿ ಸಿ.ಎಂ: ಚಾಮರಸ ಮಾಲಿಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ‘ಸಕ್ಕರೆ ಕಾರ್ಖಾನೆಗಳ ಮಾಫಿಯಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಲುಕಿಕೊಂಡಿದ್ದಾರೆ. ಹೀಗಾಗಿಯೇ ಅವರು ಕಬ್ಬು ಬೆಳೆಗಾರರ ಹಿತ ಕಾಯಲು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಆಗುತ್ತಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಆರೋಪಿಸಿದರು.

ರಾಜ್ಯದ ಸಕ್ಕರೆ ಕಾರ್ಖಾನೆಗಳ ಮೇಲೆ ಯಾರ ಹಿಡಿತವೂ ಇಲ್ಲ. ಬಹುತೇಕ ಕಾರ್ಖಾನೆಗಳು ರಾಜಕೀಯ ಪಕ್ಷಗಳ ಮುಖಂಡರಿಗೆ ಸೇರಿವೆ. ಒಂದೊಂದು ಕಾರ್ಖಾನೆಯಲ್ಲಿ ಒಂದೊಂದು ಬೆಲೆ ನಿಗದಿಪಡಿಸಲಾಗಿದೆ. ಸಕ್ಕರೆ ಕಾರ್ಖಾನೆಗಳ ಮಾಫಿಯಾದಲ್ಲಿ ಸಿ.ಎಂ. ಸಿಲುಕಿಕೊಂಡಿದ್ದು, ಅವರಿಂದ ನ್ಯಾಯಸಮ್ಮತ ಬೆಲೆ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಜ್ಯದ 14 ಜಿಲ್ಲೆಗಳಲ್ಲಿ ಕಬ್ಬು ಪ್ರಮುಖ ಬೆಳೆಯಾಗಿ ರೈತರು ಬೆಳೆಯುತ್ತಾರೆ. ಆದರೆ, ಏಕರೂಪದ ಬೆಲೆ ಕೊಡುತ್ತಿಲ್ಲ. ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ 15 ದಿನಗಳೊಳಗೆ ಹಣ ಪಾವತಿಸಬೇಕೆಂಬ ನಿಯಮ ಇದೆ. ಆದರೆ, ಅದನ್ನು ಯಾರೂ ಪಾಲಿಸುತ್ತಿಲ್ಲ. ಯಾರೂ ಕೂಡ ಅವರನ್ನು ಕೇಳುವವರು ಇಲ್ಲದಂತಾಗಿದೆ. ಅವರು ಆಡಿದ್ದೇ ಆಟ ಎಂಬಂತಾಗಿದೆ. ಇದರಿಂದ ಕಬ್ಬು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಜ್ಯ, ಕೇಂದ್ರ ಸರ್ಕಾರಗಳು ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೃಷಿ ಕ್ಷೇತ್ರವನ್ನು ಉದ್ದೇಶಪೂರ್ವಕವಾಗಿಯೇ ಹಾಳುಗೆಡವಿ ರೈತರ ಜಮೀನು ಕಾರ್ಪೊರೇಟ್‌ ಕಂಪನಿಗಳಿಗೆ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಅನೇಕ ಕಾರ್ಖಾನೆಗಳು ರೈತರ ಬಾಕಿ ಪಾವತಿಸಿಲ್ಲ. ಪಾವತಿಸುವಂತೆ ಮುಖ್ಯಮಂತ್ರಿಯವರು ಗಟ್ಟಿ ಧ್ವನಿಯಲ್ಲಿ ಹೇಳುತ್ತಿಲ್ಲ. ಸಕ್ಕರೆ ಖಾತೆ ಸಚಿವರಿಗೆ ಯಾವುದೇ ನಿರ್ಣಯ ಕೈಗೊಳ್ಳಲು ಆಗುತ್ತಿಲ್ಲ. ಕಾರ್ಖಾನೆಗಳ ಮಾಲೀಕರ ಒತ್ತಡದಿಂದ ಕಬ್ಬು ಬೆಳೆಗಾರರು ನಾಶವಾಗುತ್ತಿದ್ದಾರೆ. ಉಪ ಉತ್ಪನ್ನಗಳಿಂದ ಕಾರ್ಖಾನೆ ಮಾಲೀಕರಿಗೆ ಲಾಭವಿದೆ. ಆದರೂ, ಅವರು ರೈತರಿಗೆ ಹಣ ಪಾವತಿಸುತ್ತಿಲ್ಲ ಎಂದರು.

ರಾಜ್ಯ, ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ತಂದು ಕೃಷಿಯಿಂದ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿವೆ. ಈಗ ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್‌ ಮೀಟರ್‌ ಅಳವಡಿಸಿ ಸಂಪೂರ್ಣ ನಾಶ ಮಾಡಲು ಮುಂದಾಗಿವೆ. ಫಸಲ್‌ ವಿಮೆ ಸಂಪೂರ್ಣ ವಿಫಲವಾಗಿದೆ. ಮುಂಗಾರಿನಲ್ಲಿ ಅತಿವೃಷ್ಟಿಗೆ ಬೆಳೆ ಹಾನಿಯಾದರೂ ಸಮೀಕ್ಷೆ ನಡೆಸಿ, ಪರಿಹಾರ ಒದಗಿಸುತ್ತಿಲ್ಲ. ಡಬಲ್‌ ಎಂಜಿನ್‌ ಸರ್ಕಾರಕ್ಕೆ ‘ಸಿಂಗಲ್‌ ಪಿಸ್ಟನ್‌’ ಇದೆ. ಎರಡೂ ಸರ್ಕಾರಗಳ ವಿರುದ್ಧ ಜನವರಿಯಲ್ಲಿ ದೊಡ್ಡಮಟ್ಟದ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಬ್ಬಿನ ದರ ನಿಗದಿ ಕುರಿತು ಸಿ.ಎಂ. ಸಭೆ ಕರೆಯದೇ ಕಾಲಹರಣ ಮಾಡುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳ ಮಾಲೀಕರನ್ನು ಮಣಿಸುವ ತಾಕತ್ತು ಸಿ.ಎಂ.ಗಿಲ್ಲ. ಒಂದು ಸರ್ಕಾರಕ್ಕೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಆಗುತ್ತಿಲ್ಲ ಎಂದರೆ ಅದರ ಅಸಾಮರ್ಥ್ಯ ತೋರಿಸುತ್ತದೆ ಎಂದು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಗೋಣಿಬಸಪ್ಪ, ರವಿಕುಮಾರ ಪೂಣಚ್ಚ ಇದ್ದರು.

‘23 ನಿಮಿಷಕ್ಕೆ ಒಬ್ಬ ರೈತನ ಸಾವು’

ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಮಾತನಾಡಿ, ದೇಶದಲ್ಲಿ 23 ನಿಮಿಷಕ್ಕೆ ಒಬ್ಬ ರೈತ ಸಾವನ್ನಪ್ಪುತ್ತಿದ್ದಾನೆ. ಈ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಿದೆ. ಇದಕ್ಕೆಲ್ಲ ಕೃಷಿ ಬಿಕ್ಕಟ್ಟೇ ಕಾರಣ. ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸೂಕ್ತ ವ್ಯವಸ್ಥೆಯಿಲ್ಲ. ಇರುವ ಎಪಿಎಂಸಿಗಳನ್ನು ಸರ್ಕಾರ ಹಾಳು ಮಾಡಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ 45 ಲಕ್ಷ ಕೃಷಿ ಪಂಪ್‌ಸೆಟ್‌ ಬಳಸುವ ರೈತರಿದ್ದಾರೆ. ಎಲ್ಲರೂ ಒಂದಿಲ್ಲೊಂದು ರೂಪದಲ್ಲಿ ಸಾಲಗಾರರು. ಸ್ಮಾರ್ಟ್‌ ಮೀಟರ್‌ ಅಳವಡಿಸಿದರೆ ಅವರು ಸಂಪೂರ್ಣ ಬೀದಿಗೆ ಬರುತ್ತಾರೆ. ಅದರ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು