ಮಂಗಳವಾರ, ಅಕ್ಟೋಬರ್ 26, 2021
21 °C
ತಡರಾತ್ರಿ ವರೆಗೆ ಜಾನಪದ ಹಾಡು ಆಲಿಸಿ, ಕುಣಿದು ಕುಪ್ಪಳಿಸಿದ ಜನ

ವಿಜಯನಗರ: ಮಾದಪ್ಪನ ಹಾಡಿಗೆ ಉಘೇ ಎಂದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಅದು ಮಧ್ಯರಾತ್ರಿಯ ಸಮಯ. ಆದರೆ, ಅಲ್ಲಿದ್ದ ಯಾರಿಗೂ ಮನೆಗೆ ಹೋಗಬೇಕೆಂಬ ಮನಸ್ಸು ಇರಲಿಲ್ಲ. ಜಾನಪದ ಗೀತೆ ಗಾಯನದ ಮೋಡಿ, ಸಂಗೀತ ವಾದ್ಯಗಳ ತಾಳ ಅವರನ್ನು ಅಲ್ಲಿ ಕಟ್ಟಿ ಹಾಕಿತ್ತು.

ಹೌದು, ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭದ ನಿಮಿತ್ತ ಶನಿವಾರ ರಾತ್ರಿ ಹತ್ತು ಗಂಟೆಯ ನಂತರ ಆರಂಭಗೊಂಡ ಸಂಗೀತ ರಸಮಂಜರಿ ಕಾರ್ಯಕ್ರಮ ತಡರಾತ್ರಿ ಒಂದು ಗಂಟೆಯ ವರೆಗೆ ನಡೆಯಿತು.

ಗಾಯಕಿ ಎಂ.ಡಿ.ಪಲ್ಲವಿ ಅವರು, 'ದೀಪವು ನಿನ್ನದೆ, ಗಾಳಿಯು ನಿನ್ನದೆ', 'ಎದೆ ತುಂಬಿ ಹಾಡಿದೆನು' ಭಾವಗೀತೆಗಳು ಜನರನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿತ್ತು. ಗಾಯಕಿ ಶಹನಾಜ್ ಅಕ್ತರ್, ದೇಶಭಕ್ತಿ ಗೀತೆಗಳು ಜನರನ್ನು ತಲೆ ದೂಗುವಂತೆ ಮಾಡಿತು.

ಗಾಯಕಿ ಸವಿತಾ ಮತ್ತು ಬಸವಂತ್ ಪಾಟೀಲ್ ಹಾಡಿದ ಮಾದಪ್ಪ ಹಾಗೂ ಚಾಮುಂಡಿ ದೇವಿ ಕುರಿತ ಜಾನಪದ ಗೀತೆಗಳು ಎಲ್ಲರನ್ನೂ ರಂಜಿಸಿದವು. ಇದಾದ ಬಳಿಕ ವೇದಿಕೆಗೆ ಬಂದ ಗಾಯಕಿ ಕಲಾವತಿ ದಯಾನಂದ ಅವರು ಏರು ದನಿಯಲ್ಲಿ ಜಿ.ಎಸ್.ಶಿವರುದ್ರಪ್ಪನವರ 'ಕಾಣದ ಕಡಲಿಗೆ ಹಂಬಲಿಸಿದೆ ಮನ', ಸಂತ ಶಿಶುನಾಳ ಶರೀಫರ 'ಸೋರುತಿಹುದು ಮನೆಯ ಮಾಳಿಗಿ' ಹಾಗೂ 'ಯಾಕೆ ಬಡದಾಡ್ತಿ ತಮ್ಮಾ' ಹಾಡು ಅಲ್ಲಿದ್ದವರು ಹುಚ್ಚೆದ್ದು ಕುಣಿಸುವಂತೆ ಮಾಡಿತು.

ಗಾಯಕಿ ಅನನ್ಯ ಭಟ್, 'ಸೋಜುಗದ ಸೂಜುಮಲ್ಲಿಗೆ' ಹಾಡು ಪ್ರೇಕ್ಷಕರನ್ನು ಭಕ್ತಿಪರವಶವಾಗುವಂತೆ ಮಾಡಿದರೆ, ಮಾದಪ್ಪನ 'ಅಣ್ಣ ಮಾದಯ್ಯ, ಕಿರುಗಣ್ಣ ಮಾದಯ್ಯ' ಹಾಡಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದರು.

ಡ್ರಮ್ ವಾದಕ ಶಿವಮಣಿ ಅವರು ಗಂಟೆ, ಶಂಖ, ಜಾಗಟೆ, ತಟ್ಟೆ, ಚಮಚಗಳಿಂದ ಹೊರಹೊಮ್ಮಿಸುತ್ತಿದ್ದ ಧ್ವನಿ ಪ್ರೇಕ್ಷಕರನ್ನು ಬೆರಗುಗೊಳಿಸಿತು. ಇವರಿಗೆ ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ, ವೀಣಾ ವಾದಕ ರಾಜೇಶ್ ಸಾಥ್‌ ನೀಡಿದರು. ವೀಣೆ-ಕೊಳಲಿನ ಜುಗಲ್ ಬಂದಿ ಪ್ರೇಕ್ಷಕರಿಗೆ ಮುದ ನೀಡಿತು.

ಕೊಳಲು–ವೀಣೆ ಮತ್ತು ತಬಲ ವಾದನದ ಮೂಲಕ ಗೀತಾ ಚಿತ್ರದ ‘ಜೊತೆ ಜೊತೆಯಲಿ’, ‘ಕೇಳದೆ ನೀಮಗೀಗ’ ಹಾಗೂ ‘ನಗುವ ನಯನ ಮಧುರ ಮೌನ’ ಹಾಡುಗಳು ಸಂಗೀತ ಪ್ರಿಯರ ಮನತಣಿಸಿತು. ಜೊತೆಗೆ ‘ರೋಜಾ’, ‘ಕಲ್ ಹೋ ನಾ ಹೋ‘, ‘ಮಿಥ್ವಾ’, ‘ಚಂದಾ ರೆ ಚಂದಾ ರೆ’, ‘ವೈಷ್ಣವ ಜನತೋ’ ಪ್ರೇಕ್ಷರನ್ನು ರಂಜಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು