ಹರಪನಹಳ್ಳಿ: ಪಟ್ಟಣದ ಹೊಸಪೇಟೆ ರಸ್ತೆ ಆಶ್ರಯ ಕಾಲೊನಿಯ ಸರ್ಕಾರಿ ಮನೆಗಳಲ್ಲಿ ವಾಸಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ 50ಕ್ಕೂ ಅಧಿಕ ಕುಟುಂಬಗಳು ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದವು.
‘ಆಶ್ರಯ ಕಾಲೊನಿಗಳಲ್ಲಿ 50ಕ್ಕೂ ಅಧಿಕ ಕುಟುಂಬಗಳ ಮನೆಗಳಿವೆ. ಆದರೆ ಇತ್ತೀಚೆಗೆ ಪುರಸಭೆ ಅಧಿಕಾರಿಗಳು ಅನಧಿಕೃತ ನಿವಾಸಿಗಳ ತೆರವು ಅಧಿನಿಯಮ ಅಡಿ ಮನೆಗಳನ್ನು ಖಾಲಿ ಮಾಡುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ನಾವು ಆರ್ಥಿಕವಾಗಿ ಹಿಂದುಳಿದಿದ್ದೇವೆ. ಎಲ್ಲಿಯೂ ಸ್ವಂತ ಮನೆ ಇಲ್ಲ. ಆಶ್ರಯ ಕಾಲೊನಿಯ ಮನೆಗಳಲ್ಲಿರುವ ನಿವಾಸಿಗಳನ್ನೇ ಫಲಾನುಭವಿಗಳೆಂದು ಪರಿಗಣಿಸಿ ಹಕ್ಕು ಅನುಭವಿಸಲು ಅನುಮತಿಸಬೇಕು’ ಎಂದು ಆಗ್ರಹಿಸಿದರು.
ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮವಹಿಸುವುದಾಗಿ ಮುಖ್ಯಾಧಿಕಾರಿ ಭರವಸೆ ನೀಡಿದರು.