ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಮಾಡು ಇಲ್ಲವೇ ಮಡಿ ಚುನಾವಣೆ: ಎಚ್‌.ಸಿ. ಮಹದೇವಪ್ಪ

ಎಸ್ಸಿ/ಎಸ್ಟಿ ಐಕ್ಯತಾ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾಜಿ ಸಚಿವ
Last Updated 5 ಜನವರಿ 2023, 12:38 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘2023ರ ರಾಜ್ಯ ವಿಧಾನಸಭೆ ಚುನಾವಣೆ ಕಾಂಗ್ರೆಸ್‌ಗೆ ಮಾಡು ಇಲ್ಲವೇ ಮಡಿ ಚುನಾವಣೆ’ ಎಂದು ಮಾಜಿಸಚಿವರೂ ಆದ ಕಾಂಗ್ರೆಸ್‌ ಮುಖಂಡ ಎಚ್‌.ಸಿ. ಮಹದೇವಪ್ಪ ಹೇಳಿದರು.

ಚಿತ್ರದುರ್ಗದಲ್ಲಿ ಜನವರಿ 8ರಂದು ನಡೆಯಲಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಐಕ್ಯತಾ ಸಮಾವೇಶದ ಹಿನ್ನೆಲೆಯಲ್ಲಿ ಗುರುವಾರ ನಗರದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಬೇಕು. ಅದೇ ರೀತಿ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಬರಬೇಕು. ಕೆಲಸ ಮಾಡುವವರು, ಅಭಿವೃದ್ಧಿ ಪರವಾಗಿ ಇರುವವರು ಸೋಲಬಾರದು. ಧರ್ಮ, ಕೋಮುವಾದದ ಪ್ರಚೋದನೆ ನಿಲ್ಲಿಸಿ, ಅಭಿವೃದ್ಧಿ ಸಾಮರಸ್ಯದ ಕಡೆಗೆ ಹೆಜ್ಜೆ ಹಾಕುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಪಿಸುಮಾತು, ಗಾಳಿಸುದ್ದಿ ಮೂಲಕ ಬಿಜೆಪಿ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸುತ್ತಿದೆ. ರಾಜಕೀಯ ಶುದ್ಧೀಕರಣಕ್ಕೆ ಶೋಷಿತ ಸಮುದಾಯಗಳು ಒಂದಾಗಿ ಒಗ್ಗಟ್ಟು ತೋರಿಸಬೇಕು. ಸಂಘಟನಾತ್ಮಕ ಶಕ್ತಿಯಾಗಿ ಹೊರಹೊಮ್ಮಬೇಕು. ಅದರ ಮೂಲಕ ಇಡೀ ದೇಶಕ್ಕೆ ಸಂದೇಶ ಕಳಿಸಬೇಕು. ಚಿತ್ರದುರ್ಗದಲ್ಲಿ ನಡೆಯಲಿರುವ ಸಮಾವೇಶವು ರಾಜಕೀಯ ಮೀರಿದ ಸಮಾವೇಶವಾಗಲಿದೆ. ರಾಷ್ಟ್ರೀಯ ಹಿತ, ಗುಣಾತ್ಮಕ ರಾಜಕೀಯ ಈ ಸಮಾವೇಶದ ಉದ್ದೇಶ. ರಾಜಕೀಯ ಅಧಿಕಾರ ಇದ್ದರಷ್ಟೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಜನ ಮತ್ತೊಮ್ಮೆ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟು ಕೋಮುವಾದ, ಜಾತಿವಾದ ಅಳಿಸಿ ಸಂವಿಧಾನ ರಕ್ಷಿಸುವ ಕೆಲಸ ಮಾಡಬೇಕೆಂದು ಹೇಳಿದರು.

ಕೋಮುವಾದ, ಜಾತಿವಾದದಿಂದ ಪ್ರಜಾಪ್ರಭುತ್ವ ದುರ್ಬಲಗೊಳ್ಳುತ್ತಿದೆ. ಅದರ ರಕ್ಷಣೆ ಆಗದಿದ್ದರೆ ದೇಶ ಹಾಗೂ ಜನರ ಏಳಿಗೆ ಸಾಧ್ಯವಿಲ್ಲ. ಮಂಡಲ್‌ ಕಮಿಷನ್‌ ವಿರೋಧಿಸಿದ ಬಿಜೆಪಿಯವರು ಈಗ ಮೀಸಲಾತಿಯ ಬಗ್ಗೆ ಮಾತಾಡುತ್ತಾರೆ. ಐಐಟಿಗಳಲ್ಲಿ ಮೀಸಲಾತಿ ಕೊಡಬೇಕೆಂಬ ಪ್ರಸ್ತಾವ ಯುಪಿಎ ಸರ್ಕಾರ ಮುಂದಿಟ್ಟಾಗ ಅದನ್ನು ವಿರೋಧಿಸಿದವರು ಬಿಜೆಪಿಯವರು ಎಂದು ಆರೋಪಿಸಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿದ್ದಾಗ ತಳವಾರ, ಪರಿವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಕೇಂದ್ರ ಸರ್ಕಾರ ಕೂಡ ಅದನ್ನು ಒಪ್ಪಿಕೊಂಡಿತ್ತು. ಅದರ ಲಾಭ ಬಿಜೆಪಿಯವರು ಪಡೆದರು. ಸುಳ್ಳು, ರಾಜಕೀಯ ಅಪಪ್ರಚಾರದಿಂದ 2018ರಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿತು. ಆದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಏನಾಗುತ್ತಿದೆ ಎನ್ನುವುದು ಎಲ್ಲರ ಮುಂದಿದೆ. ಜಾತಿವಾದ ಮುಂಚೂಣಿಗೆ ಬರುತ್ತಿದೆ. ಅದು ತೊಲಗಬೇಕು. ಸೌಹಾರ್ದತೆ ಬರಬೇಕು. ಅದಕ್ಕಾಗಿ ಶೋಷಿತ ಸಮುದಾಯಗಳು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಉಪಮುಖ್ಯಮಂತ್ರಿಯೂ ಆದ ಮುಖಂಡ ಡಾ.ಜಿ. ಪರಮೇಶ್ವರ್‌ ಮಾತನಾಡಿ, ಮೀಸಲಾತಿಯಿಂದ ಕೆಲವರು ವಿದ್ಯಾವಂತರಾದವರು. ಕೆಲವರಿಗೆ ನೌಕರಿಗಳು ಸಿಕ್ಕಿವೆ. ಆದರೆ, ಈಗಲೂ ಶೋಷಿತರ ಪರಿಸ್ಥಿತಿ ಸರಿಯಿಲ್ಲ. ಅವರ ಹಕ್ಕುಗಳನ್ನು ಹತ್ತಿಕ್ಕುವ ಹುನ್ನಾರ ನಡೆಸಲಾಗುತ್ತಿದೆ. ಶೋಷಿತ ವರ್ಗಗಳೆಲ್ಲ ಒಂದು ವೇದಿಕೆಗೆ ಬಂದು ಹೋರಾಟ ನಡೆಸಲು ಚಿತ್ರದುರ್ಗದ ಸಮಾವೇಶ ಸಹಕಾರಿಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಶಾಸಕರಾದ ಎಲ್‌.ಬಿ.ಪಿ. ಭೀಮ ನಾಯ್ಕ, ಪಿ.ಟಿ.ಪರಮೇಶ್ವರ ನಾಯ್ಕ, ಈ. ತುಕಾರಾಂ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಗ್ರಾಮೀಣ ಘಟಕದ ಅಧ್ಯಕ್ಷ ಬಿ.ವಿ. ಶಿವಯೋಗಿ, ಮುಖಂಡರಾದ ಎಚ್‌.ಸಿ. ಮಹದೇವಪ್ಪ, ಶಿವರಾಜ ತಂಗಡಗಿ, ಸಿರಾಜ್‌ ಶೇಖ್‌, ಚಂದ್ರಪ್ಪ, ಗುಜ್ಜಲ್‌ ರಘು, ರಾಜಶೇಖರ್‌ ಹಿಟ್ನಾಳ್‌ ಇತರರಿದ್ದರು.

5 ಕ್ಷೇತ್ರಕ್ಕೆ 62 ಅರ್ಜಿಗಳು

‘ವಿಜಯನಗರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಟಿಕೆಟ್‌ಗಾಗಿ 62 ಜನರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಯಾರು ಅರ್ಜಿ ಹಾಕಿದ್ದೀರಿ ಅವರು ಚಿತ್ರದುರ್ಗದಲ್ಲಿ ಜನವರಿ 8ರಂದು ನಡೆಯಲಿರುವ ಎಸ್ಸಿ/ಎಸ್ಟಿ ಐಕ್ಯತಾ ಸಮಾವೇಶಕ್ಕೆ ಕನಿಷ್ಠ 500 ಜನರನ್ನು ಕರೆ ತರಬೇಕು. ಜನರನ್ನು ಕರೆತರುವ ಶಕ್ತಿ ಇಲ್ಲದಿದ್ದರೆ ಅರ್ಜಿ ಏಕೆ ಹಾಕಬೇಕು? ಯಾರು ಜನರನ್ನು ಕರೆ ತರುವುದಿಲ್ಲ ಅವರ ಹೆಸರು ಜಿಲ್ಲಾಧ್ಯಕ್ಷರು ತಿಳಿಸಿದರೆ ಅವರ ಅರ್ಜಿ ತಿರಸ್ಕರಿಸಲಾಗುವುದು’ ಎಂದು ಡಾ.ಜಿ. ಪರಮೇಶ್ವರ್‌ ಅವರು ತಮಾಷೆ ಮಾಡಿದಾಗ ಸಭೆ ನಗೆಗಡಲಲ್ಲಿ ತೇಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT