ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಯಲ್ಲಿ ನ್ಯೂನತೆ: ಸಿರಾಜ್‌ ಶೇಕ್‌

ಅಧಿಕಾರಿಗಳಿಗೆ ಹೆದರಿಸಿ, ಬೆದರಿಸಿ ಕೆಲಸ
Last Updated 26 ಫೆಬ್ರುವರಿ 2023, 13:14 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ನಗರದ ಕೊಳೆಗೇರಿ ನಿವಾಸಿಗಳಿಗೆ ನ್ಯಾಯಬದ್ಧವಾಗಿ ಹಕ್ಕುಪತ್ರ ವಿತರಿಸಬೇಕು. ಆದರೆ, ಸರ್ಕಾರಿ ಅಧಿಕಾರಿಗಳನ್ನು ಹೆದರಿಸಿ, ಬೆದರಿಸಿ ಕೆಲಸ ಮಾಡಿಸುತ್ತಿರುವುದು ಸರಿಯಲ್ಲ. ಅಲ್ಲದೇ ಹಕ್ಕುಪತ್ರಗಳ ಮೇಲೆ ಸ್ಥಳೀಯ ಜನಪ್ರತಿನಿಧಿಗಳ ಭಾವಚಿತ್ರಗಳನ್ನು ಬಳಸುವಂತಿಲ್ಲ. ಇದರ ಬಗ್ಗೆ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಉತ್ತರಿಸಬೇಕು’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿರಾಜ್‌ ಶೇಕ್‌ ಆಗ್ರಹಿಸಿದರು.

ಭಾನುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ತಿಂಗಳಲ್ಲಿ ಚುನಾವಣೆ ನಡೆಯಲಿದೆ. ತರಾತುರಿಯಲ್ಲಿ ಪಟ್ಟಾ ಕೊಡುತ್ತಿರುವುದರ ಔಚಿತ್ಯವೇನು? ಇದು ರಾಜಕೀಯ ಗಿಮಿಕ್‌. ಇಷ್ಟು ವರ್ಷ ಮನೆಯಲ್ಲಿ ಮಲಗಿ ಈಗ ಜನರಿಗೆ ಮೋಸ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.

ನಗರದಲ್ಲಿ 60 ಕೊಳೆಗೇರಿಗಳಿವೆ. ಸ್ಲಂಗಳೆಂದು ನಗರಸಭೆ ಘೋಷಿಸಿ ಕೊಳೆಗೇರಿ ಅಭಿವೃದ್ಧಿ ಮಂಡಳಿಗೆ ಕಳುಹಿಸಬೇಕು. ಅನಂತರ ಅವುಗಳನ್ನು ಅಭಿವೃದ್ಧಿ ಪಡಿಸಬೇಕು. ಆದರೆ, ಇದರ ಹೆಸರಲ್ಲಿ ರಾಜಕೀಯ ಮಾಡಲಾಗುತ್ತಿದೆ. ನಗರದಲ್ಲಿ ಸದ್ಯ ವಿತರಿಸಲಾಗುತ್ತಿರುವ ಪಟ್ಟಾ ಪ್ರಮಾಣ ಪತ್ರಗಳನ್ನು ಯಾರು ಮುದ್ರಿಸಿದ್ದಾರೆ? ಇದನ್ನು ಮುದ್ರಿಸಲು ಕಾನೂನಿನಲ್ಲಿ ಅವಕಾಶ ಇದೆಯೇ? ಎಷ್ಟು ಮುದ್ರಿಸಿದ್ದಾರೆ? ಅದರ ವಿವರ ಅದರ ಮೇಲೆ ನಮೂದಿಸಬೇಕು. ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ಹೈಕೋರ್ಟ್‌ ನ್ಯಾಯಮೂರ್ತಿ ಹೊರತುಪಡಿಸಿ ಬೇರೆ ಯಾರ ಭಾವಚಿತ್ರ ಪ್ರಕಟಿಸುವಂತಿಲ್ಲ. ಇದಕ್ಕೆ ಅನ್ವಯಿಸುವುದಿಲ್ಲವೋ ಎಂದು ಪ್ರಶ್ನಿಸಿದರು.

ಪಟ್ಟಾ ಕೊಟ್ಟವರಿಗೆ ಸಮಾಧಾನ ಆಗುವ ರೀತಿಯಲ್ಲಿ ಒಂದೇ ಸಮನಾಗಿ ಹಂಚ ಬೇಕು. ಸ್ಲಂ ಬೋರ್ಡ್‌ ಕ್ಲಿಯರನ್ಸ್‌ ಆ್ಯಕ್ಟ್‌ ಪ್ರಕಾರ, ಸ್ವತ್ತಿನ ವಿವರ, ಅಳತೆ ಇರಬೇಕು. ಪಟ್ಟಾ ಪ್ರಮಾಣ ಪತ್ರಗಳ ಮೇಲೆ ಬಳ್ಳಾರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸಹಿ ಇದೆ. ಫಲಾನುಭವಿಗಳು ಎಲ್ಲಿಗೆ ಹೋಗಿ ಪಟ್ಟಾ ಪಡೆಯಬೇಕು. ಅಧಿಕಾರಿಗಳು ಪಟ್ಟಾ ಕೊಡುತ್ತಿದ್ದಾರೆಯೇ ಅಥವಾ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕೊಡುತ್ತಿದ್ದಾರೆಯೇ ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಪಟ್ಟಾ ಕೊಟ್ಟರೆ ಅದರ ಸರ್ವೇ ನಂಬರ್‌ ಇದೆಯೇ? ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಹಾರಿಕೆ ಉತ್ತರ ಕೊಡುತ್ತಾರೆ. ಪಟ್ಟಾ ಪಡೆದ ಅನೇಕರಿಗೆ ಜಾಗ ಎಲ್ಲಿದೆ ಎನ್ನುವುದು ಗೊತ್ತಿಲ್ಲ. ಜನಕ್ಕೆ ಅನ್ಯಾಯ ಮಾಡುತ್ತಿರುವುದು ಎಷ್ಟು ಸರಿ. ಇನ್ನೂ ಕೆಲವೇ ದಿನಗಳಲ್ಲಿ ಸರ್ಕಾರ ಬದಲಾಗಲಿದೆ. ತಪ್ಪು ಎಸಗಿದ ಅಧಿಕಾರಿಗಳು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಪಟ್ಟಾ ಪಡೆದು ಮನೆ ಕಟ್ಟಿ, ನಾಳೆ ಸಮಸ್ಯೆಗೆ ಒಳಗಾದರೆ ಯಾರು ಜವಾಬ್ದಾರರು. ಪಟ್ಟಾ ಕೊಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ನ್ಯಾಯಬದ್ಧವಾಗಿ ಕೊಡಬೇಕು ಎಂದರು.

ಸಂಡೂರಿನಲ್ಲಿ ಉತ್ಕೃಷ್ಟವಾದ ಕಬ್ಬಿಣ ಮತ್ತು ಮ್ಯಾಂಗನೀಸ್‌ ಅದಿರಿನ ಗಣಿಗಳಿವೆ. ಅದರ ಮೇಲೆ ಗುಜರಾತಿಗಳ ಕಣ್ಣು ಬಿದ್ದಿದೆ. ಹೀಗಾಗಿಯೇ ಗೃಹ ಸಚಿವ ಅಮಿತ್‌ ಷಾ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಅಲ್ಲಿಗೆ ಭೇಟಿ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಖಂಡರಾದ ಸೋಮಶೇಖರ್‌ ಬಣ್ಣದಮನೆ, ತಮ್ಮನ್ನೆಳೆಪ್ಪ, ಮಾರೆಪ್ಪ, ಸಂಗಪ್ಪ, ಮರಡಿ ಮಂಜುನಾಥ ಹಾಜರಿದ್ದರು.

**
ತಹಶೀಲ್ದಾರ್‌ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
‘2022ರ ಜುಲೈನಲ್ಲಿ ವಿಜಯನಗರ ಕ್ಷೇತ್ರದ ಮತದಾರರ ಪಟ್ಟಿಗಾಗಿ ಹೊಸಪೇಟೆ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದೆ. ₹23 ಸಾವಿರ ಮೌಲ್ಯದ ಚಲನ್‌ ಕೂಡ ಕಟ್ಟಿದ್ದೇನೆ. ಇದುವರೆಗೆ ಅವರು ಮತದಾರರ ಪಟ್ಟಿ ಕೊಟ್ಟಿಲ್ಲ. ಇಂದು, ನಾಳೆ ಎಂದು ಕಾಲಹರಣ ಮಾಡುತ್ತಿದ್ದಾರೆ. ವಿಜಯನಗರದಲ್ಲಿ ಸರ್ಕಾರಿ ವ್ಯವಸ್ಥೆ ಹೀಗಾಗಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ನಿರ್ಧರಿಸಿದ್ದೇನೆ’ ಎಂದು ಸಿರಾಜ್‌ ಶೇಕ್‌ ತಿಳಿಸಿದರು.

**
ಜನ ಸೇರ್ತಾ ಇಲ್ವಾ, ದಿವಾಳಿ ಆಗಿರಬಹುದಾ?
‘ಫೆ. 27ರಂದು ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅದರಲ್ಲಿ ಎಲ್ಲಾ ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು ಪಾಲ್ಗೊಳ್ಳಬೇಕು. ಒಬ್ಬರು ಕನಿಷ್ಠ ಮೂವರು ಸ್ತ್ರೀಶಕ್ತಿ ಅಥವಾ ಸ್ವಸಹಾಯ ಸಂಘದ ಮಹಿಳೆಯರನ್ನು ಕಡ್ಡಾಯವಾಗಿ ಕರೆ ತರಬೇಕೆಂದು ಸಿಡಿಪಿಒ ಆದೇಶ ಮಾಡಿದ್ದಾರೆ. ಒತ್ತಾಯಪೂರ್ವಕವಾಗಿ ಕರೆದೊಯ್ಯಬಹುದಾ? ಜನ ಸೇರ್ತಾ ಇಲ್ವಾ? ಇವರು ದಿವಾಳಿ ಆಗಿರಬಹುದಾ?’ ಎಂದು ಸಿರಾಕ್‌ ಶೇಕ್‌ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT