ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ನುಡಿಹಬ್ಬ

ಡಾ.ಬಸವಲಿಂಗ ಪಟ್ಟದ್ದೇವರು, ಪ್ರೊ.ತೇಜಸ್ವಿ ಕಟ್ಟಿಮನಿ, ಪ್ರೊ. ಎಸ್.ಸಿ.ಶರ್ಮಾಗೆ ನಾಡೋಜ ಪ್ರದಾನ
Published 10 ಜನವರಿ 2024, 14:06 IST
Last Updated 10 ಜನವರಿ 2024, 14:06 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ 32ನೇ ನುಡಿಹಬ್ಬ (ಘಟಿಕೋತ್ಸವ) ಪ್ರಯುಕ್ತ ಬುಧವಾರ ವಿದ್ಯಾರಣ್ಯ ಕ್ಯಾಂಪಸ್ ನ ನವರಂಗ ಬಯಲು ರಂಗ ಮಂಟಪದಲ್ಲಿ ರಾಜ್ಯದ ಮೂವರು ಗಣ್ಯರಾದ ಡಾ.ಬಸವಲಿಂಗ ಪಟ್ಟದ್ದೇವರು, ಪ್ರೊ.ತೇಜಸ್ವಿ ಕಟ್ಟಿಮನಿ, ಪ್ರೊ. ಎಸ್.ಸಿ.ಶರ್ಮಾಗೆ ನಾಡೋಜ ಗೌರವ ಪದವಿ ಮಾಡಲಾಯಿತು.

ಬಸವ ತತ್ವವನ್ನೇ ಬದುಕಿನ ಆದರ್ಶವನ್ನಾಗಿ ಮಾಡಿಕೊಂಡಿದ್ದ ಪೂಜ್ಯ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರ ಬಸವಸಂಸ್ಕೃತಿ ಪರಂಪರೆಯನ್ನು ಮುಂದುವರಿಸಿಕೊಂಡು ಹೊರಟಿರುವ ಭಾಲ್ಕಿ ಹಿರೇಮಠದ ಡಾ.ಬಸವಲಿಂಗ ಪಟ್ಟದ್ದೇವರು, ಬಹುಭಾಷಾ ಪಂಡಿತರಾಗಿ ಸಮರ್ಥ ಅನುವಾದಕರೆಂದು ಖ್ಯಾತಿ ಪಡೆದ ಮೂಲತಃ ನಮ್ಮ ರಾಜ್ಯದ ಪ್ರಾಧ್ಯಾಪಕರು ಹಾಗೂ ಪ್ರಸ್ತುತ ಆಂದ್ರಪ್ರದೇಶದ ಸರ್ಕಾರಿ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ತೇಜಸ್ವಿ ವಿ ಕಟ್ಟಿಮನಿ, ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಬೆಂಗಳೂರಿನ ಪ್ರೊ. ಎಸ್.ಸಿ.ಶರ್ಮಾ ಅವರಿಗೆ ಉನ್ನತ ಶಿಕ್ಷಣ ಸಚಿವರೂ ಆದ ಸಮಕುಲಾಧಿಪತಿ ಡಾ.ಎಂ.ಸಿ.ಸುಧಾಕರ್ ನಾಡೋಜ ಗೌರವ ಪ್ರದಾನ ಮಾಡಿದರು. ಕುಲಪತಿ ಪ್ರೊ.ಡಿ.ವಿ.ಪರಮ ಶಿವಮೂರ್ತಿ ಇದ್ದರು.

ಹಂಪಿ ಕನ್ನಡ ವಿಶ್ವವಿದ್ಯಾಲಯವು ರಾಷ್ಟ್ರ ಕವಿ ಕುವೆಂಪು, ಸಿದ್ದವನಹಳ್ಳಿ ನಿಜಲಿಂಗಪ್ಪ, ಗಂಗೂಬಾಯಿ ಹಾನಗಲ್, ಡಾ. ಪಾಟೀಲ ಪುಟ್ಟಪ್ಪ ಸೇರಿದಂತೆ ಇಲ್ಲಿಯವರೆಗೆ 95 ಗಣ್ಯರಿಗೆ ನಾಡೋಜ ಗೌರವ ಪದವಿ ನೀಡಿ ಗೌರವಿದಿದೆ.

ಪ್ರೊ.ಎಫ್.ಟಿ.ಹಳ್ಳಿಕೇರಿ, ಡಾ.ಚೆಲುವರಾಜು, ಡಾ.ಶಿವಾನಂದ ವಿರಕ್ತಮಠ ಅವರು ನಾಡೋಜ ಪುರಷ್ಕೃತರ ಪರಿಚಯ ಮಾಡಿದರು.

ಡಾ.ಬಸವಲಿಂಗ ಪಟ್ಟದ್ದೇವರು:

ಕಲ್ಯಾಣ-ಕರ್ನಾಟಕ ಭಾಗವಾದ ಬೀದರಿನ ಭಾಲ್ಕಿ ಹಿರೇಮಠ ಸಂಸ್ಥಾನದ ಪರಮಪೂಜ್ಯರಾದ ಡಾ. ಬಸವಲಿಂಗ ಪಟ್ಟದ್ದೇವರು 25.08.1950 ರಲ್ಲಿ ಜನಿಸಿದರು. ಬಸವತತ್ವವನ್ನೇ ಬದುಕಿನ ಆದರ್ಶವನ್ನಾಗಿ ಮಾಡಿಕೊಂಡಿದ್ದ ಪೂಜ್ಯ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರ ಬಸವಸಂಸ್ಕೃತಿ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು. ಗಡಿಭಾಗವಾದ ಬೀದರ್ ಪರಿಸರದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಪ್ರಜ್ಞೆಯನ್ನು ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದರು. ಡಾ. ಬಸವಲಿಂಗ ಪಟ್ಟದ್ದೇವರು ಬಹುಭಾಷಿಕ ವಿದ್ವಾಂಸರು. ಶರಣ ಸಾಹಿತ್ಯ ಕುರಿತು 30ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಇವರ ಕೃತಿಗಳು ಮರಾಠಿ, ತೆಲುಗು ಭಾಷೆಗೆ ಅನುವಾದಗೊಂಡು ಜನಪ್ರಿಯತೆ ಪಡೆದಿವೆ. ಪೂಜ್ಯರಿಗೆ ಬಸವತತ್ವ ಪ್ರಸಾರವೇ ಪ್ರಾಣಜೀವಾಳವಾಗಿದೆ. ಆದಕಾರಣ ಪೂಜ್ಯರು ರಾಜ್ಯ-ಹೊರರಾಜ್ಯಗಳಲ್ಲಿ ಮಹಾರಾಷ್ಟ್ರ ಬಸವ ಪರಿಷತ್ತು, ತೆಲಂಗಾಣ ಬಸವ ಪರಿಷತ್ತು, ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಸ್ಥಾಪಿಸಿ ಬಸವತತ್ವದ ಪ್ರಸ್ತುತೆಯನ್ನು ನಾಡಿನಾದ್ಯಂತ ಪ್ರಸಾರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಪರಮಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಸಾಧನೆಗಳನ್ನು ಪುರಸ್ಕರಿಸಿ ಕನ್ನಡ ವಿಶ್ವವಿದ್ಯಾಲಯವು 32ನೇ ನುಡಿಹಬ್ಬದಲ್ಲಿ ಪ್ರತಿಣಷ್ಠಿತ ‘ನಾಡೋಜ’ ಗೌರವ ಪದವಿಯನ್ನು ನೀಡಿ ಗೌರವಿಸಿದೆ.

ಪ್ರೊ.ತೇಜಸ್ವಿ ವಿ ಕಟ್ಟಿಮನಿ:

ಡಾ ತೇಜಸ್ವಿ ವೆಂಕಪ್ಪ ಕಟ್ಟಿಮನಿ ಅವರು 14 ಜೂನ್ 1955ರಲ್ಲಿ ಕೊಪ್ಪಳ ಜಿಲ್ಲೆ ಅಳವಂಡಿಯಲ್ಲಿ ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಹಿಂದಿ ವಿಷಯದಲ್ಲಿ ಎಂ.ಎ.ಪಿಎಚ್ ಡಿ ಪದವಿಯನ್ನು ಪಡೆದಿದ್ದಾರೆ. 44 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ದುಡಿದಿರುವ ಪ್ರೊ. ಟಿ.ವಿ. ಕಟ್ಟಿಮನಿಯವರು 2014 ರಿಂದ 2019 ರವರೆಗೆ ಮಧ್ಯಪ್ರದೇಶದ ಅಮರ್‌ಕಂಟಕ್‌ನ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಆಂಧ್ರಪ್ರದೇಶ ವಿಜಯನಗರದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಬದ್ಧತೆಯೊಂದಿಗೆ ತಮ್ಮ ಬರಹಗಳನ್ನು ಆರಂಭಿಸಿರುವ ಇವರು ಕನ್ನಡ, ಹಿಂದಿ, ಗುಜರಾತಿ ಹಾಗೂ ಇಂಗ್ಲೀಷ್ ಭಾಷೆಗಳಿಗೆ ಸಾಹಿತ್ಯ ಮತ್ತು ಸಾಹಿತ್ಯೇತರ 25ಕ್ಕೂ ಹೆಚ್ಚು ಕೃತಿಗಳನ್ನು ಅನುವಾದ ಮಾಡಿ ಸಮರ್ಥ ಅನುವಾದಕರೆಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಭಾರತದ ಬೇರೆ ಬೇರೆ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಸಿಂಡಿಕೇಟ್ ಸದಸ್ಯರಾಗಿ, ಕೇಂದ್ರ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ, ಬುಡಕಟ್ಟು ಕಲ್ಯಾಣ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಡಾ ಟಿ.ವಿ.ಕಟ್ಟಿಮನಿ ಅವರ ಶೈಕ್ಷಣಿಕ ಸಾಧನೆಗಳನ್ನು ಪುರಸ್ಕರಿಸಿ ಕನ್ನಡ ವಿಶ್ವವಿದ್ಯಾಲಯವು 32ನೇ ನುಡಿಹಬ್ಬದಲ್ಲಿ ಪ್ರತಿಷ್ಠಿತ ‘ನಾಡೋಜ’ ಗೌರವ ಪದವಿಯನ್ನು ನೀಡಿ ಗೌರವಿಸಿದೆ.

ಪ್ರೊ.ಎಸ್.ಸಿ.ಶರ್ಮಾ:

ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಎಸ್.ಸಿ. ಶರ್ಮಾ ಅವರು 27.03.1959 ರಂದು ಜನಿಸಿದರು. 1984 ರಲ್ಲಿ ಬೆಂಗಳೂರಿನ ಬಿ.ಎಂ.ಎಸ್. ಇಂಜಿನೀಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ, 1988ರಲ್ಲಿ ಬೆಂಗಳೂರಿನ ಎಂ.ಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಿಂದ ಮೆಟೇರಿಯಲ್ ಕಾಸ್ಟಿಂಗ್ ಸೈನ್ಸ್ ಮತ್ತು ಇಂಜಿನೀಯರಿಂಗ್(ಲೋಹದ ಎರಕ ವಿಜ್ಞಾನ ಮತ್ತು ಇಂಜಿನೀಯರಿಂಗ್) ವಿಷಯದಲ್ಲಿ ಎಂ.ಇ. ಪದವಿಯನ್ನು ಪಡೆದರು. 1991ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಪಿಎಚ್.ಡಿ ಪದವಿಯನ್ನು ಪೂರೈಸಿದರು. 1998 ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಹಾಗೂ 2007 ರಲ್ಲಿ ಆಸ್ಟ್ರೇಲಿಯಾದ ಡೀಕಿನ್ ವಿಶ್ವವಿದ್ಯಾಲಯದಿಂದ ಮೆಟೇರಿಯಲ್ ಸೈನ್ಸ್ ವಿಷಯದಲ್ಲಿ ಅಧ್ಯಯನ ನಡೆಸಿ ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ಪಡೆದರು. ಇವುಗಳ ಜೊತೆಗೆ 2003ರಲ್ಲಿ ಕುವೆಂಪು ವಿಶ್ವವಿದ್ಯಾಲಯದಿಂದ ಗಣಕ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು, 2007 ರಲ್ಲಿ ಕೊಯಮತ್ತೂರಿನ ಅವಿನಾಶಿಲಿಂಗ ಮಹಿಳಾ ವಿಶ್ವವಿದ್ಯಾಲಯದ ತಾಂತ್ರಿಕ ನಿಕಾಯದಿಂದ ಡಾಕ್ಟರ್ ಆಫ್ ಸೈನ್ಸ್ ಹಾಗೂ 2007ರಲ್ಲಿ ಅದೇ ವಿಶ್ವವಿದ್ಯಾಲಯದ ಸಂಗೀತ ನಿಕಾಯದಿಂದ ಡಾಕ್ಟರ್ ಆಫ್ ಲೆಟರ‍್ಸ್ ಪದವಿಯನ್ನು ಪಡೆದರು. 2013ರಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಮ್ಯಾನೆಜ್‌ಮೆಂಟ್ ವಿಷಯದಲ್ಲಿ ಡಿಲಿಟ್ ಪದವಿಯನ್ನು ಪಡೆದಿದ್ದಾರೆ.ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ, ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ, ಅವಿನಾಶಿಲಿಂಗಂ ಮಹಿಳಾ ವಿಶ್ವವಿದ್ಯಾಲಯ ಕೊಯಂಬತ್ತೂರು, ಛತ್ರಪತಿ ಶಾಹುಜೀ ಮಹಾರಾಜ ವಿಶ್ವವಿದ್ಯಾಲಯ ಕಾನ್ಪುರ, ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ವಿಶ್ವವಿದ್ಯಾಲಯ ಕಾಂಚೀಪುರಂ ಮುಂತಾದ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿ ನೀಡಿ ಪುಸ್ಕರಿಸಿವೆ. ನಾಡಿನ ಬೇರೆಬೇರೆ 27ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಘಟಿಕೋತ್ಸವದಲ್ಲಿ ಪಾಲ್ಗೊಂಡು ಯುವ ಮನಸ್ಸುಗಳಿಗೆ ಭಾರತೀಯ ಸಂಸ್ಕೃತಿ, ಪರಂಪರೆ, ಶಿಕ್ಷಣ ಹಾಗೂ ತಾಂತ್ರಿಕ ವಿಷಯವನ್ನೊಳಗೊಂಡ ಘಟಿಕೋತ್ಸವ ಭಾಷಣ ಮಾಡಿರುವುದು ಇವರ ಹೆಗ್ಗಳಿಕೆಯಾಗಿದೆ. ಪ್ರೊ. ಎಸ್.ಸಿ. ಶರ್ಮಾ ಅವರ ವಿಜ್ಞಾನ ಹಾಗೂ ತಂತ್ರಜ್ಞಾನದ ಈ ಎಲ್ಲಾ ಸಾಧನೆಗಳನ್ನು ಪುರಸ್ಕರಿಸಿ ಕನ್ನಡ ವಿಶ್ವವಿದ್ಯಾಲಯವು 32ನೇ ನುಡಿಹಬ್ಬದಲ್ಲಿ ಪ್ರತಿಷ್ಠಿತ ‘ನಾಡೋಜ’ ಗೌರವ ಪದವಿಯನ್ನು ನೀಡಿ ಗೌರವಿಸಿದೆ.

ನುಡಿಹಬ್ಬದಲ್ಲಿ ಪಿಎಚ್.ಡಿ ಪದವಿ ಪಡೆದ 275 ಮಂದಿ

ನುಡಿಹಬ್ಬದಲ್ಲಿ ಪಿಎಚ್.ಡಿ ಪದವಿ ಪಡೆದ 275 ಮಂದಿ

ನುಡಿಹಬ್ಬದಲ್ಲಿ ಕಿಕ್ಕಿರಿದು ಸೇರಿದ್ದ ಪಿಎಚ್.ಡಿ ಪದವೀಧರರ ಕುಟುಂಬದವರು ಹಾಗೂ ಸಾರ್ವಜನಿಕರು

ನುಡಿಹಬ್ಬದಲ್ಲಿ ಕಿಕ್ಕಿರಿದು ಸೇರಿದ್ದ ಪಿಎಚ್.ಡಿ ಪದವೀಧರರ ಕುಟುಂಬದವರು ಹಾಗೂ ಸಾರ್ವಜನಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT