ಗುರುವಾರ , ಮೇ 26, 2022
22 °C

ಬಡ್ತಿಗೆ ಲಂಚ, ಪಿಂಚಣಿಗೆ ಕಮಿಷನ್‌: ಹಂಪಿ ಕನ್ನಡ ವಿಶ್ವವಿದ್ಯಾಲಯ ಸಿಬ್ಬಂದಿ ಆರೋಪ

ಶಶಿಕಾಂತ ಎಸ್. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಬಡ್ತಿಗೆ ಲಂಚ ನೀಡಬೇಕು. ಪಿಂಚಣಿ ಸೌಲಭ್ಯಕ್ಕೆ ಕಮಿಷನ್‌ ಕೊಡಬೇಕು! ಇದು ಕನ್ನಡ ವಿಶ್ವವಿದ್ಯಾಲಯದ ಸದ್ಯದ ಸ್ಥಿತಿ. ‘ಸಹ ಪ್ರಾಧ್ಯಾಪಕ ಹುದ್ದೆಯಿಂದ ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ಕೊಡಲು ಹಾಲಿ ಕುಲಪತಿ ಪ್ರೊ. ಸ.ಚಿ. ರಮೇಶ ₹6 ಲಕ್ಷ ಲಂಚ ಕೇಳುತ್ತಿದ್ದಾರೆ’ ಎಂದು ಸಹ ಪ್ರಾಧ್ಯಾಪಕ ಎಂ. ಮಲ್ಲಿಕಾರ್ಜುನಗೌಡ ಎಂಬುವವರು ಆರೋಪಿಸಿದರೆ, ಪಿಂಚಣಿ ಬಿಡುಗಡೆಗೆ ಒಟ್ಟು ಹಣದಲ್ಲಿ ಶೇ 2ರಿಂದ 3ರಷ್ಟು ಕಮಿಷನ್‌ ಕೇಳುತ್ತಿದ್ದಾರೆ ಎಂದು ನಿವೃತ್ತ ಪ್ರಾಧ್ಯಾಪಕರು ಆರೋಪಿಸಿದ್ದಾರೆ.

‘ಆದಾಯ ತೆರಿಗೆ, ಹಿಂದಿನ ಬಾಕಿ ಹೆಸರಿನಲ್ಲಿ ನಿವೃತ್ತ ನೌಕರರ ಒಪ್ಪಿಗೆಯಿಲ್ಲದೆ ಪಿಂಚಣಿಯಿಂದ ವಿಶ್ವವಿದ್ಯಾಲಯ ಬೇಕಾಬಿಟ್ಟಿ ಹಣ ಕಡಿತಗೊಳಿಸುತ್ತಿದೆ. ಬಾಕಿಯೂ ಕೊಡುತ್ತಿಲ್ಲ. ಈ ಕುರಿತು ದೂರು ಕೊಟ್ಟರೆ ಅದಕ್ಕೆ ಸ್ಪಂದಿಸುತ್ತಿಲ್ಲ’ ಎಂದು ನಿವೃತ್ತ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ, ನಿವೃತ್ತ ಪ್ರಾಧ್ಯಾಪಕರಾದ ಎಂ. ಚಂದ್ರ ಪೂಜಾರಿ, ಅಮರೇಶ ನುಗಡೋಣಿ, ರಹಮತ್‌ ತರಿಕೆರೆ, ಕೆ.ಜಿ. ಭಟ್‌ ಸೂರಿ, ಎಸ್‌.ಸಿ. ಪಾಟೀಲ್‌, ಕೇಶವನ್‌ ಪ್ರಸಾದ್‌, ಉಷಾ, ನಾಗೇಶ್‌ ಅವರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಮೂರು ವರ್ಷ, ಎರಡು ವರ್ಷ ಹಾಗೂ ಆರು ತಿಂಗಳ ಹಿಂದೆ ನಿವೃತ್ತರಾದವರಿಗೆ ಇದುವರೆಗೆ ಪಿಂಚಣಿ ಹಣ ಕೊಟ್ಟಿಲ್ಲ. ಹಲವು ಸಲ ಪತ್ರ ಬರೆದರೂ ಅದಕ್ಕೆ ಸ್ಪಂದಿಸಿಲ್ಲ. ಒಟ್ಟು ಪಿಂಚಣಿಯಲ್ಲಿ ಶೇ 2ರಿಂದ 3ರಷ್ಟು ಕಮಿಷನ್‌ ಕೊಟ್ಟರೆ ಹಣ ಬಿಡುಗಡೆಗೊಳಿಸುವುದಾಗಿ ಕುಲಪತಿ ಹೇಳುತ್ತಿದ್ದಾರೆ’ ಎಂದು ಹೆಸರು ಹೇಳಲಿಚ್ಛಿಸದ ನಿವೃತ್ತ ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕೆರಿಯರ್‌ ಅಡ್ವಾನ್ಸ್‌ಮೆಂಟ್‌ ಸ್ಕೀಮ್‌‘ (ಸಿಎಎಸ್‌) ಯೋಜನೆಯಡಿ ನನ್ನ ನಾಲ್ವರು ಸಹದ್ಯೋಗಿಗಳಿಂದ ತಲಾ ₹6 ಲಕ್ಷ ಲಂಚ ಪಡೆದು ಮುಂಬಡ್ತಿ ನೀಡಲಾಗಿದೆ. ಭಾಷಾ ನಿಕಾಯದಲ್ಲಿದ್ದ ನಾನು ಅರ್ಹನಾಗಿದ್ದರೂ ಮುಂಬಡ್ತಿ ನೀಡಿಲ್ಲ. ಈ ಕುರಿತು ಕುಲಪತಿಯನ್ನು ನೇರ ಭೇಟಿಯಾಗಿ ಮುಂಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸಲು ಕೋರಿದೆ. ಅದಕ್ಕವರು, ‘ಈಗಾಗಲೇ ಮುಂಬಡ್ತಿ ಪಡೆದ ಸಹದ್ಯೋಗಿಗಳ ಮಾರ್ಗದರ್ಶನ ಪಡೆದು, ಅವರ ಕ್ರಮ ಅನುಸರಿಸಬೇಕು’ ಎಂದು ತಿಳಿಸಿದ್ದಾರೆ. ಇದು ಸರಿಯಾದ ಕ್ರಮವೇ? ಎಂದು ಸಹ ಪ್ರಾಧ್ಯಾಪಕ ಎಂ. ಮಲ್ಲಿಕಾರ್ಜುನಗೌಡ ಪ್ರಶ್ನಿಸಿದ್ದಾರೆ.

‘ಹೊಸದಾಗಿ 17 ಜನ ಬೋಧಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆದಿದೆ. ಅರ್ಜಿ ಪರಿಶೀಲನಾ ಸಮಿತಿಯಲ್ಲಿ ನಾನು ಕೂಡ ಒಬ್ಬ ಸದಸ್ಯನಾಗಿದ್ದೆ. ನೇಮಕಕ್ಕೆ ಸಂಬಂಧಿಸಿದ ಯುಜಿಸಿ ನಿಯಾಮವಳಿ, ರಾಜ್ಯಪಾಲರ ಅನುಮೋದನೆ ಪತ್ರ ಕೇಳಿದರೆ ಕೊಡಲಿಲ್ಲ. ಸಮಿತಿ ಸಭೆಯೂ ಕರೆದಿಲ್ಲ. ಇಡೀ ನೇಮಕಾತಿ ಪ್ರಕ್ರಿಯೆ ಗೊಂದಲದಿಂದ ಕೂಡಿದೆ. ಇದರ ಬಗ್ಗೆ ತಕರಾರು ತೆಗೆದಿದ್ದಕ್ಕೆ ನನ್ನನ್ನು ವಿ.ವಿಯ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದಿಂದ  ಕೂಡಲಸಂಗಮ ಅಂತರರಾಷ್ಟ್ರೀಯ ವಚನ ಸಾಹಿತ್ಯ ಅಧ್ಯಯನ ಕೇಂದ್ರಕ್ಕೆ ವರ್ಗಾವಣೆಗೊಳಿಸಿದ್ದಾರೆ’ ಎಂದು ಹೇಳಿದರು.

‘ಮುಂಬಡ್ತಿ, ಅವೈಜ್ಞಾನಿಕ ಬೋಧಕರ ನೇಮಕಾತಿ ಪ್ರಕ್ರಿಯೆ ಕುರಿತು ತನಿಖೆ ನಡೆಸಬೇಕು. ಅಲ್ಲಿಯವರೆಗೆ ಕುಲಪತಿಗಳನ್ನು ಆ ಸ್ಥಾನದಿಂದ ತೆಗೆಯಬೇಕು. ವಿಶ್ವವಿದ್ಯಾಲಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಬೇಕು. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಕ್ಷಮ ಪ್ರಾಧಿಕಾರದ ಮೊರೆ ಹೋಗಬೇಕಾಗುತ್ತದೆ’ ಎಂದು ಅವರು ಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ ಅವರಿಗೆ ಪತ್ರ ಬರೆದಿದ್ದಾರೆ. ಆ ಪತ್ರದ ಪ್ರತಿಯೂ ‘ಪ್ರಜಾವಾಣಿ’ಗೆ ಸಿಕ್ಕಿದೆ.

‘ಪಿಂಚಣಿ ಕೊಡಲು ನಮ್ಮ ಬಳಿ ಹಣ ಇಲ್ಲ. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ. ಮುಂಬಡ್ತಿ ಸೇರಿದಂತೆ ಎಲ್ಲವೂ ನಿಯಮಾನುಸಾರವಾಗಿ ನಡೆಯುತ್ತಿದೆ’ ಎಂದು ಕುಲಪತಿ ಪ್ರೊ.ಸ.ಚಿ. ರಮೇಶ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು