ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿವಿ: ಬಂತು ಅರ್ಧ ಸ್ಕಾಲರ್‌ಶಿಪ್‌ ಹಣ, ಬರಲೇ ಇಲ್ಲ ಅನುದಾನ

Published 13 ಫೆಬ್ರುವರಿ 2024, 16:20 IST
Last Updated 13 ಫೆಬ್ರುವರಿ 2024, 16:20 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯ ಆರ್ಥಿಕ ಸಂಕಷ್ಟ ಸದ್ಯಕ್ಕಂತೂ ಕೊನೆಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲವಾದರೂ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳ ಕಷ್ಟಕ್ಕೆ ಸರ್ಕಾರ ಸ್ವಲ್ಪ ಮಟ್ಟಿಗೆ ಸ್ಪಂದಿಸಿದೆ.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿ ವೇತನ ರೂಪದಲ್ಲಿ ಈಚೆಗೆ ₹2.25 ಕೋಟಿ ಬಂದಿದ್ದು, ಇದರಲ್ಲಿ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ 5 ತಿಂಗಳ ವಿದ್ಯಾರ್ಥಿ ವೇತನ ರೂಪದಲ್ಲಿ ತಲಾ ₹50 ಸಾವಿರ ನೀಡಲಾಗಿದೆ.

‘ಸದ್ಯ ವಿದ್ಯಾರ್ಥಿಗಳ ಒಂದಿಷ್ಟು ಸಂಕಷ್ಟ ಪರಿಹರಿಸಿದ ತೃಪ್ತಿ ಇದೆ. ಈಚೆಗೆ ನಗರಕ್ಕೆ ಬಂದಿದ್ದ ಸಮಾಜ ಕಲ್ಯಾಣ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ ಈ ಅನುದಾನಕ್ಕಾಗಿ ಕೃತಜ್ಞತೆ ಸಲ್ಲಿಸಿದೆ. ವಿಶ್ವವಿದ್ಯಾಲಯಕ್ಕೆ ಬರಬೇಕಾದ ಇತರ ಅನುದಾನಗಳು ಸಹ ಹೀಗೆಯೇ ಬಂದಿದ್ದರೆ ಯಾವ ಚಿಂತೆಯೂ ಇರಲಿಲ್ಲ, ಆದರೆ ಅದು ಕಾರ್ಯಗತವಾಗುತ್ತಲೇ ಇಲ್ಲ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಶ್ವವಿದ್ಯಾಲಯಕ್ಕೆ ತಕ್ಷಣಕ್ಕೆ ಕನಿಷ್ಠ ₹ 4 ಕೋಟಿ ಅನುದಾನ ಬೇಕೇ ಬೇಕು. 20 ದಿನದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್‌ ಅವರು ವಿಶ್ವವಿದ್ಯಾಲಯಕ್ಕೆ ಬಂದಿದ್ದಾಗ ಅವರಿಗೆ ಸಮಸ್ಯೆಗಳನ್ನು ಮನವರಿಕೆ ಮಾಡಲಾಗಿತ್ತು. ವಾರದೊಳಗೆ ₹ 4 ಕೋಟಿ ಬಿಡುಗಡೆ ಮಾಡಿಸುವುದಾಗಿ ಹೇಳಿದ್ದರು. ಅದು ಇನ್ನೂ ಸಾಕಾರಗೊಂಡಿಲ್ಲ. ಬಜೆಟ್ ಪೂರ್ವದಲ್ಲಿ ಒಂದಿಷ್ಟು ಅನುದಾನ ಸಿಗುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಇದೀಗ ವಿದ್ಯುತ್ ಬಿಲ್‌ ರೂಪದಲ್ಲೇ ₹1.05 ಕೋಟಿ ಪಾವತಿಸುವ ಅನಿವಾರ್ಯತೆ ಎದುರಾಗಿದೆ’ ಎಂದು ಅವರು ಹೇಳಿದರು.

ವಾರ್ಷಿಕ ಅನುದಾನ ರೂಪದಲ್ಲಿ ಬರಬೇಕಾದ ₹47 ಲಕ್ಷ ಮಾತ್ರ ಸದ್ಯದ ಆಶಾಕಿರಣ. ಅದರಲ್ಲೇ ಇನ್ನು ಮೂರ್ನಾಲ್ಕು ತಿಂಗಳು ನಿಭಾಯಿಸಬೇಕು.
ಪ್ರೊ.ಡಿ.ವಿ.ಪರಮಶಿವಮೂರ್ತಿ, ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT