ಬುಧವಾರ, ಮೇ 25, 2022
30 °C
ಪತ್ರಕರ್ತರ ಯಾವುದೇ ಪ್ರಶ್ನೆಗೂ ಉತ್ತರಿಸದ ಕುಲಪತಿ ಪ್ರೊ.ಸ.ಚಿ.ರಮೇಶ

ಕುಲಪತಿಯ ‘ಆಫ್‌ ದಿ ರೆಕಾರ್ಡ್‌’ ಸುದ್ದಿಗೋಷ್ಠಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರಿಂದ ಎದುರಾಗುವ ಕೆಲವು ಪ್ರಶ್ನೆಗಳಿಗೆ ಸಂಬಂಧಿಸಿದವರು ಉತ್ತರಿಸುವುದಿಲ್ಲ. ಬದಲಾಗಿ ‘ಆಫ್‌ ದಿ ರೆಕಾರ್ಡ್‌’ ಮಾತನಾಡುತ್ತಾರೆ. ಆ ವಿಷಯ ಪ್ರಕಟಗೊಳ್ಳಬಾರದು ಎನ್ನುವುದು ಅದರ ಉದ್ದೇಶ. ಆದರೆ, ಇಡೀ ಸುದ್ದಿಗೋಷ್ಠಿಯೇ ಆಫ್‌ ದಿ ರೆಕಾರ್ಡ್‌’ ಆದರೆ ಹೇಗಿರುತ್ತೆ?

ಹೌದು, ಇಂತಹದ್ದೊಂದು ಪ್ರಸಂಗಕ್ಕೆ ಗುರುವಾರ ಹಂಪಿ ಕನ್ನಡ ವಿಶ್ವವಿದ್ಯಾಲಯ ಸಾಕ್ಷಿಯಾಯಿತು. ಕುಲಪತಿ ಪ್ರೊ.ಸ.ಚಿ.ರಮೇಶ ಅವರು ನುಡಿಹಬ್ಬ, ನಾಡೋಜ ಗೌರವ ಪದವಿಗೆ ಆಯ್ಕೆಯಾದವರ ಹೆಸರು ಘೋಷಣೆಗೆ ಸುದ್ದಿಗೋಷ್ಠಿ ಕರೆದಿದ್ದರು. ನುಡಿಹಬ್ಬದ ಕುರಿತು ಎಲ್ಲ ವಿವರಗಳನ್ನು ಹಂಚಿಕೊಂಡ ನಂತರ ಪತ್ರಕರ್ತರು ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಆದರೆ, ಅವರು ಯಾವುದೇ ಪ್ರಶ್ನೆಗೂ ಉತ್ತರಿಸಲಿಲ್ಲ. ಬದಲಾಗಿ ಎಲ್ಲ ಪ್ರಶ್ನೆಗಳಿಗೂ ‘ಆಫ್‌ ದಿ ರೆಕಾರ್ಡ್‌’ ಎಂದು ಹೇಳುತ್ತ ದೀರ್ಘವಾಗಿ ಮಾತನಾಡಿದರು.

ಪ್ರತಿ ಸಲವೂ ಪ್ರಶ್ನೆ ಕೇಳಿದಾಗ, ‘ಇದು ನುಡಿಹಬ್ಬಕ್ಕೆ ಸೀಮಿತವಾದ ಸುದ್ದಿಗೋಷ್ಠಿ. ನಿಮ್ಮ ಬೇರೆ ಪ್ರಶ್ನೆಗಳಿಗೆ ಮತ್ತೊಂದು ಸಲ ಸುದ್ದಿಗೋಷ್ಠಿ ಕರೆದು ಉತ್ತರಿಸುತ್ತೇನೆ. ಆದರೆ, ಆಫ್‌ ದಿ ರೆಕಾರ್ಡ್‌ ಕೆಲವು ವಿಷಯಗಳನ್ನು ಹೇಳುತ್ತೇನೆ ಕೇಳಿ’ ಎಂದು ವಿವರಿಸಿದರು.

ವಿಶ್ರಾಂತ ಕುಲಪತಿ ಮಲ್ಲಿಕಾ ಎಸ್‌. ಘಂಟಿ ಹಾಗೂ ನಿಮ್ಮ ಅವಧಿಯಲ್ಲಾದ ಕಾಮಗಾರಿಗಳ ತನಿಖೆಯನ್ನು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯಿಂದ ನಡೆಸಲು ತೀರ್ಮಾನಿಸಲಾಗಿತ್ತು. ಆ ವಿಷಯ ಎಲ್ಲಿಗೆ ಬಂತು? ನಿಮ್ಮ ಸಿಬ್ಬಂದಿಯೇ ನಿಮ್ಮ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡಲು ಕಾರಣವೇನು? ವಿಶ್ವವಿದ್ಯಾಲಯದ ಕಾನೂನು ಘಟಕದ ಅಧಿಕಾರಿ ಎಚ್‌.ಎಂ.ಸೋಮನಾಥ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಶ್ವವಿದ್ಯಾಲಯ ಏನು ಕ್ರಮ ಕೈಗೊಂಡಿದೆ?

ಮಲ್ಲಿಕಾ ಎಸ್‌. ಘಂಟಿ ಅವಧಿಯಲ್ಲಿ ₹50.86 ಕೋಟಿ ಹಗರಣ ನಡೆದಿದೆ ಎಂದು ಲೋಕಾಯುಕ್ತ ಅಂತಿಮ ವರದಿ ನೀಡಿದೆ. ಅವರ ವಿರುದ್ಧ ಮುಂದಿನ ಕ್ರಮವೇನು? ಹೀಗೆ ಪತ್ರಕರ್ತರು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು. ಆದರೆ, ಕುಲಪತಿಯವರು ಯಾವುದಕ್ಕೂ ಉತ್ತರಿಸಲಿಲ್ಲ. ಬದಲಿಗೆ ‘ಆಫ್‌ ದಿ ರೆಕಾರ್ಡ್‌’ ಮಾತನಾಡಿದರು. ಆಗ ಪತ್ರಕರ್ತರೊಬ್ಬರು, ‘ಯಾವುದು ಆನ್‌ ರೆಕಾರ್ಡ್‌, ಯಾವುದು ಆಫ್‌ ದಿ ರೆಕಾರ್ಡ್‌’ ಎಂದು ನೀವೇ ಬರೆದು ಕಳುಹಿಸಿದರೆ ಉತ್ತಮ’ ಎಂದು ವ್ಯಂಗ್ಯವಾಗಿ ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು