ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಂಪಿ: ಕಬಡ್ಡಿಯಲ್ಲಿ ಸದೃಢರನ್ನು ನಾಚಿಸಿದ ದಿವ್ಯಾಂಗರು

Last Updated 27 ಜನವರಿ 2023, 11:24 IST
ಅಕ್ಷರ ಗಾತ್ರ

ಹಂಪಿ (ಹೊಸಪೇಟೆ): ಈ ಸಲದ ಹಂಪಿ ಉತ್ಸವದ ಅಂಗವಾಗಿ ಏರ್ಪಡಿಸಿರುವ ಅಂಗವಿಕಲರ ಕ್ರೀಡಾಕೂಟ ಎಲ್ಲರ ಗಮನ ಸೆಳೆಯಿತು. ದೈಹಿಕವಾಗಿ ಸಹಜವಾಗಿರುವವರನ್ನು ನಾಚಿಸುವ ರೀತಿಯಲ್ಲಿ ದಿವ್ಯಾಂಗರು ಕಬಡ್ಡಿ ಆಡಿದರು.

ಕಮಲಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಅಂಗವಿಕಲರಿಗಾಗಿ ಶುಕ್ರವಾರ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು. ಅದರಲ್ಲಿ ಸಿಟ್ಟಿಂಗ್‌ ಕಬಡ್ಡಿ ಎಲ್ಲರ ಆಕರ್ಷಣೆಗೆ ಕಾರಣವಾಯಿತು.

ಕಬಡ್ಡಿ ಪಂದ್ಯಾವಳಿಯಲ್ಲಿ ಗದಗ, ಹರಪನಹಳ್ಳಿ, ಗಂಗಾವತಿ ತಂಡಗಳ ಆಟಗಾರರು ತಮ್ಮ ಪಟ್ಟುಗಳನ್ನು ಪ್ರದರ್ಶಿಸುವ ಮೂಲಕ ನೆರೆದಿದ್ದವರನ್ನು ಹುಬ್ಬೇರಿಸುವಂತೆ ಮಾಡಿದರು. ಮೈದಾನದಲ್ಲಿ ತೆವಳುತ್ತಲೇ ಕಬಡ್ಡಿ ಆಟವನ್ನು ಉತ್ಸಾಹದಿಂದ ಆಡಿದರು.

ಮೊದಲ ಪಂದ್ಯದಲ್ಲಿ ಗದಗ ತಂಡದ 48 ವರ್ಷದ ಸಹದೇವಪ್ಪ ರೈಡಿಂಗ್ ಮತ್ತು ಟ್ಯಾಕಲ್‍ನಲ್ಲೂ ವಿಶೇಷವಾಗಿ ಗಮನ ಸೆಳೆದರು. ತಂಡದ ಇತರೆ ಆಟಗಾರರು ಉತ್ತಮ ಸಾಥ್ ನೀಡಿದ್ದರಿಂದ ಹರಪನಹಳ್ಳಿ ತಂಡವನ್ನು ಸುಲಭವಾಗಿ ಮಣಿಸಿದರು. ಫೈನಲ್ ಪಂದ್ಯದಲ್ಲಿ ವಿರೋಚಿತ ಹೋರಾಟ ನಡೆಸಿಯೂ ಗಂಗಾವತಿ ತಂಡದ ವಿರುದ್ಧ ಗದಗ ತಂಡದವರು ಸೋಲುಂಡರು. ಜಯ ಗಳಿಸಿದ ತಂಡಕ್ಕೆ ₹20 ಸಾವಿರ ನಗದು, ರನ್ನರ್‌ ಅಪ್‌ ತಂಡಕ್ಕೆ ₹10 ಸಾವಿರ ನಗದು ಬಹುಮಾನ ನೀಡಲಾಯಿತು.

ಶ್ರವಣದೋಷ ಹೊಂದಿದ ಪುರುಷ ಮತ್ತು ಮಹಿಳೆಯರಿಗೆ ಗುಂಡು ಎಸೆತ, ಅಂಧ ಪುರುಷ ಮತ್ತು ಮಹಿಳೆಯರಿಗೆ ವೈಟ್‍ಕೇನ್ ರೇಸ್ ಹಾಗೂ ಬಗಲು ಕೋಲು ಓಟದಲ್ಲಿ ಅಂಗವಿಕಲರು ಯಾವುದೇ ಅಳುಕಿಲ್ಲದೆ ಭಾಗವಹಿಸಿ ಸಾಮರ್ಥ್ಯ ಪ್ರದರ್ಶಿಸಿದರು.

100 ಮೀಟರ್ ಬಗಲು ಕೋಲು ಓಟದಲ್ಲಿ ಹೂವಿನಹಡಗಲಿ ತಾಲ್ಲೂಕು ಮುದೇನೂರು ಗ್ರಾಮದ ರಾಜಭಕ್ಷಿ, ಹರಪನಹಳ್ಳಿಯ ಗಿರಿರಾಜ, ಹೊಸಪೇಟೆಯ ಗಾದಿಗನೂರಿನ ಕೆ.ಟಿ.ಪಂಪಾಪತಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಹೊಸಪೇಟೆಯ ಅರುಣಾ, ರಾಮಸಾಗರದ ರಾಮಲಿಂಗಮ್ಮ, ಕಂಪ್ಲಿಯ ಕಾಳಮ್ಮ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು.

ವೈಟ್‍ಕೇನ್ ಓಟದಲ್ಲಿ ಜಯಪ್ರಕಾಶ್ ಪ್ರಥಮ, ಪ್ರಸನ್ನಕುಮಾರ್ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಎಸ್.ಅನ್ನಪೂರ್ಣ ಪ್ರಥಮ ಸ್ಥಾನ ಪಡೆದರು. ಪುರುಷರ ಗುಂಡು ಎಸೆತದಲ್ಲಿ ರಾಮಸಾಗರದ ಮಲ್ಲೇಶಪ್ಪ ಪ್ರಥಮ, ಏಳುಬೆಂಚಿಯ ದೊಡ್ಡ ಬಸಪ್ಪ ದ್ವಿತೀಯ ಸ್ಥಾನ ಪಡೆದರು.

ಕ್ರೀಡಾಕೂಟದಲ್ಲಿ ಆಟಗಾರರೆಲ್ಲರೂ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು, ಆದರೆ ಅವರಿಗೆ ಬೆಂಬಲಿಸಬೇಕಾದ ಸದೃಢರ ಕೈಗಳ ಚಪ್ಪಾಳೆ ಕೊರತೆ ಎದ್ದು ಕಾಣುತ್ತಿತ್ತು, ಅಂಗವಿಕಲ ಪ್ರೇಕ್ಷಕರು ಹುರಿದುಂಬಿಸುವ ಕೆಲಸ ಮಾಡಿದರು. ಕ್ರೀಡಾಕೂಟಕ್ಕೆ ಸಚಿವರಾದ ಆನಂದ್‌ ಸಿಂಗ್‌, ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಸಾಕ್ಷಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT