ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಮತ್ತೆ ವೈಭವದತ್ತ ನಾಡಿನ ಮೂಲ ದಸರಾ

ದಸರಾ ಆಚರಣೆಗೆ ವರ್ಣರಂಜಿತ ಮುಕ್ತಾಯ, ಏಳುಕೇರಿಗಳಲ್ಲಿ ಸಂಭ್ರಮೋತ್ಸಾಹ
Published 24 ಅಕ್ಟೋಬರ್ 2023, 14:27 IST
Last Updated 24 ಅಕ್ಟೋಬರ್ 2023, 14:27 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ಏಳುಕೇರಿಗಳ ಶಕ್ತಿದೇವತೆಗಳು, ಕಮಲಾಪುರದ ಏಳುಕೇರಿ, ನಾಗೇನಹಳ್ಳಿ, ಬಸವನದುರ್ಗದ ಶಕ್ತಿದೇವತೆಗಳು ಆಯುಧ ಪೂಜೆಯ  ದಿನವಾದ ಸೋಮವಾರ ಸಂಜೆ ನಾಗೇನಹಳ್ಳಿಯ ‌ಧರ್ಮದಗುಡ್ಡಕ್ಕೆ ತೆರಳಿ, ಚನ್ನಬಸವೇಶ್ವರನ ನೇತೃತ್ವದಲ್ಲಿ ‘ಬನ್ನಿ’ ಮುಡಿಯುವ ಮೂಲಕ ಹೊಸಪೇಟೆ ದಸರಾ ಗತಕಾಲವನ್ನು ನೆನಪಿಸಿತು. ನಾಡಿನ ಮೂಲ ದಸರಾ ಮತ್ತೆ ವೈಭವದತ್ತ ಸಾಗುತ್ತಿರುವುದಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.

ಚನ್ನಬಸವೇಶ್ವರ ಧರ್ಮದಗುಡ್ಡದ ಕ್ಷೇತ್ರಾಧಿಪತಿ. ಆತನ ತಂಗಿ ನಿಜಲಿಂಗಮ್ಮ. ಇವರಿಬ್ಬರ ಸನ್ನಿಧಿಗೆ ಆಯುಧ ಪೂಜೆಯ ದಿನವೇ ಪಲ್ಲಕ್ಕಿಗಳ ಬರುವ ಶಕ್ತಿ ದೇವತೆಗಳು, ಬಳಿಕ ಜತೆಯಾಗಿಯೇ ಕಾಳಮ್ಮನ ಸನ್ನಿಧಿಯಿರುವ ಬನ್ನಿಮರದತ್ತ ತೆರಳಿ ಬನ್ನಿ ಮುಡಿಯುವ ಸಂಪ್ರದಾಯ ದೇಶದ ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ. ಇಂತಹ  ವಿಶಿಷ್ಟ ಆಚರಣೆ ವಿಜಯನಗರ ಅರಸರ ಕಾಲದಲ್ಲಿ ಆರಂಭವಾದುದು ಈಗಲೂ ನಡೆಯುತ್ತಿದ್ದು, ಮತ್ತೆ ತನ್ನ ವೈಭವದ ದಿನಗಳತ್ತ ಹೆಜ್ಜೆ ಹಾಕತೊಡಗಿದೆ. ಸೋಮವಾರ ಸಂಜೆ 10 ಸಾವಿರಕ್ಕೂ ಅಧಿಕ ಮಂದಿ ಈ ಬನ್ನಿ ಮೆರವಣಿಗೆಗೆ ಸಾಕ್ಷಿಯಾದರೆ, ಹೊಸಪೇಟೆಯ ಏಳುಕೇರಿಗಳಲ್ಲಿ ಸೋಮವಾರ ಅಹೋರಾತ್ರಿ ಡೊಳ್ಳುಕುಣಿತ, ಕೋಲಾಟ, ಭಜನೆಗಳ ಮೂಲಕ ಶಕ್ತಿ ದೇವತೆಗಳನ್ನು ಮೂಲ ಸ್ಥಾನಗಳಿಗೆ ಕರೆತಂದ ದೃಶ್ಯ ಕಣ್ಮನ ಸೂರೆಗೊಂಡಿತು. ವಿಜಯದಶಮಿ ದಿನವಾದ ಮಂಗಳವಾರ ಊರ ಬನ್ನಿ ಆಚರಣೆ ನಡೆಯಿತು.

ಧರ್ಮದಗುಡ್ಡದ ಚನ್ನಬಸವೇಶ್ವರ, ನಿಜಲಿಂಗಮ್ಮ ಅವರ ಉತ್ಸವವೂ ಆಯುಧಪೂಜೆ, ವಿಜಯದಶಮಿಗಳಂದು ನಡೆಯುತ್ತದೆ. ಹೀಗಾಗಿ ಎರಡೂ ಆಚರಣೆಗಳು ಒಂದೆಡೆ ಕಲೆತು ನಾಗೇನಹಳ್ಳಿ ಎಂಬ ಪುಟ್ಟ ಊರು ಉತ್ಸಾಹದಿಂದ  ಹಬ್ಬವನ್ನು ಆಚರಿಸುವುದು 500 ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಹೀಗಾಗಿ  ನಾಗೇನಹಳ್ಳಿ ಎಂಬ ಪುಟ್ಟ ಊರು ಸಾವಿರಾರು ಜನರೊಂದಿಗೆ ಸಂಭ್ರಮಿಸಿತು. ಹೊಸಪೇಟೆಯ ವಾಲ್ಮೀಕಿ ನಾಯಕ ಜನಾಂಗದ ಏಳು ಕೇರಿಗಳು ಸುಮಾರು 20 ದಿನಗಳ ಮಹಾಲಯ, ನವರಾತ್ರಿ ಹಬ್ಬಗಳ ಅಂತಿಮ ದಿನದ ಸಂಭ್ರಮದಲ್ಲಿ ಮುಳುಗೆದ್ದಿತು.

ಮೈಸೂರು ದಸರಾ ಆರಂಭವಾಗುವುದಕ್ಕೆ ಮೊದಲೇ ವಿಜಯನಗರ ಸಾಮ್ರಾಜ್ಯದ ಮಹಾನ್‌ ದೊರೆ ಕೃಷ್ಣದೇವರಾಯನ ಕಾಲದಲ್ಲಿ ದಸರಾ ಆಚರಣೆ ಆರಂಭವಾಯಿತು. ಹಂಪಿಯಲ್ಲಿರುವ ಮಹಾನವಮಿ ದಿಬ್ಬವನ್ನು ನಿರ್ಮಿಸಿದ್ದು ಸಹ ಈ ದಸರಾ ಆಚರಣೆಗಾಗಿಯೇ. ಅಂದಿನಿಂದ ನಡೆಯುತ್ತ ಬಂದಿರುವ ದಸರಾ ವಿಜಯನಗರ ಸಾಮ್ರಾಜ್ಯದ ಪತನದ ನಂತರ ತನ್ನ ಮಹತ್ವ ಕಳೆದುಕೊಂಡರೂ, ಇಂದಿಗೂ ಸಾಂಪ್ರದಾಯಿಕ ರೀತಿಯಲ್ಲಿ ಆಚರಣೆಗೊಳ್ಳುತ್ತ ಬಂದಿದೆ. ಸರ್ಕಾರದ ನೆರವಿಲ್ಲದೆ ಇಲ್ಲಿ ದಸರಾ ಆಚರಣೆ ನಡೆಯುತ್ತಿದ್ದರೆ, ಮೈಸೂರು ದಸರಾಕ್ಕೆ ಸರ್ಕಾರದ ನೆರವು ದೊರೆತು ವಿಜೃಂಭಣೆ ಪಡೆದುಕೊಳ್ಳುವಂತಾಗಿದೆ.

ಹಿನ್ನೆಲೆ: ‘ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕೃಷ್ಣದೇವರಾಯ ಏಳು ಸಾವಿರ ಬೇಡರ ಪಡೆಗಳನ್ನು ಹೊಸಪೇಟೆ ಕೋಟೆಯ ಹಿಂಭಾಗದಲ್ಲಿ ಇರಿಸಿದ್ದ. ಆಗ ವಿಜಯನಗರ ಸಾಮ್ರಾಜ್ಯದ ವಿಸ್ತೀರ್ಣ 60 ಚದರ ಕಿಮೀ ನಷ್ಟಿತ್ತು. ಶತ್ರು ಸೈನ್ಯ ಹೊಸಪೇಟೆಯ ಬೇಡರ ಪಡೆಯನ್ನು ದಾಟಿಯೇ ಸಾಮ್ರಾಜ್ಯದೊಳಗೆ ಬರಬೇಕಿತ್ತು. 1565ರಲ್ಲಿ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಏಳು ಸಾವಿರ ಬೇಡರ ಪಡೆ ಏಳು ಕೇರಿಗಳಾಗಿ ಮಾರ್ಪಾಟಾದವು. ಪ್ರತಿಯೊಂದು ಕೇರಿಗಳಲ್ಲೂ ಹೆಣ್ಣು ದೇವತೆಗಳನ್ನು (ಶಕ್ತಿ ದೇವತೆ) ಸ್ಥಾಪನೆ ಮಾಡಿದರು. ಆಗಿನ ಕಾಲದಲ್ಲಿ ಮುಂದುವರಿದ ಜನಾಂಗದವರು ಬೇಡ ಜನಾಂಗದವರನ್ನು ತಮ್ಮ ದೇವಾಲಯಗಳಿಗೆ ಬಿಟ್ಟುಕೊಡುತ್ತಿರಲಿಲ್ಲ. ಹೀಗಾಗಿ ತಾವೇ ತಮ್ಮ ದೇವತೆಗಳನ್ನು ಸ್ಥಾಪಿಸಿಕೊಂಡರು’ ಎಂದು ವಿವರಣೆ ನೀಡುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ತಾರಿಹಳ್ಳಿ ಹನುಮಂತಪ್ಪ ಅವರು.

ಪೊಲೀಸ್ ಭದ್ರತೆ: ಧರ್ಮದ ಗುಡ್ಡದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಜನರನ್ನು ನಿಯಂತ್ರಿಸಲು ದೊಡ್ಡ ಸಂಖ್ಯೆಯಲ್ಲಿ  ಪೊಲೀಸರನ್ನು ಸಹ ನಿಯೋಜಿಸಲಾಗಿತ್ತು. ಸ್ವತಃ ಎಸ್‌ಪಿ ಶ್ರೀಹರಿಬಾಬು ಬಿ.ಎಲ್‌. ಅವರೇ ಬಂದಿದ್ದರು. ಬಿಜೆಪಿ ಯುವ ನಾಯಕ ಸಿದ್ಧಾರ್ಥಸಿಂಗ್‌, ಶಾಸಕ ಎಚ್.ಆರ್.ಗವಿಯಪ್ಪ ಅವರ ಪುತ್ರ ಗುರುದತ್ತ, ನಗರಸಭೆಯ ಹಲವು ಸದಸ್ಯರು, ಸ್ಥಳೀಯ ಗ್ರಾಮ ಪಂಚಾಯಿತಿಗಳ ಸದಸ್ಯರು ಇದ್ದರು.

[object Object]
ಹೊಸಪೇಟೆ ತಾಲ್ಲೂಕಿನ ನಾಗೇನಹಳ್ಳಿಯ ಧರ್ಮದಗುಡ್ಡದಲ್ಲಿ ಸೋಮವಾರ ಪಲ್ಲಕ್ಕಿಗಳಲ್ಲಿ ಬಂದ ಶಕ್ತಿ ದೇವತೆಗಳಿಂದ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಿತು 

ಯುವಕರ ಬೈಕ್‌ ಓಡಾಟಕ್ಕೆ ತಡೆ: ಪುಟ್ಟ ಹಳ್ಳಿಯಲ್ಲಿ ಸಾವಿರಾರು ಜನ ಸೇರಿದ್ದರೂ ಒಂದಿಷ್ಟೂ ತೊಂದರೆ ಆಗದ ರೀತಿಯಲ್ಲಿ ಪೊಲೀಸರು ಬಹಳ ಅಚ್ಚುಕಟ್ಟಾಗಿ ದಸರಾ ಹಬ್ಬ ಆಚರಿಸುವಂತೆ ಮಾಡಿದರು. ಏಳು ಕೇರಿಗಳಿಂದ ನೂರಾರು ಯುವಕರು ಬೈಕ್‌ಗಳಲ್ಲಿ ಬರುವುದು ಸೈಲೆನ್ಸರ್ ಕಳಚಿಟ್ಟು ಜೋರಾಗಿ ಸದ್ದು ಮಾಡುತ್ತ ಓಡಾಡುವುದು ಈ ಹಿಂದಿನ ವರ್ಷಗಳಲ್ಲಿ ಕಂಡುಬಂದಿತ್ತು. ಆದರೆ ಈ ಬಾರಿ ಅದಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು. ಕೇರಿಗಳಲ್ಲಿ ತಮ್ಮದೇ ಆದಂತಹ ಆಡಳಿತ ವ್ಯವಸ್ಥೆಯೊಂದಿದ್ದು ಕೇರಿಗಳ ಮುಖಂಡರು ಸಹ ಯುವಕರಿಗೆ ನಿರ್ಬಂಧದ ಮನವರಿಕೆ ಮಾಡಿದ್ದರು ಹಾಗೂ ತಪ್ಪಿದಲ್ಲಿ ₹ 1 ಲಕ್ಷದವರೆಗೆ ದಂಡ ವಿಧಿಸುವ ಎಚ್ಚರಿಕೆ ನೀಡಿದ್ದರು. 

ಬನ್ನಿ ಮುಡಿಯುವ ಸಂಪ್ರದಾಯ: ಮೊದಲಿಗೆ ಚನ್ನಬಸವೇಶ್ವರ ನಿಜಲಿಂಗಮ್ಮ ಅವರ ಪಲ್ಲಕ್ಕಿ ಬನ್ನಿ ಮರವನ್ನು ಪ್ರದಕ್ಷಿಣೆ ಹಾಕುತ್ತದೆ. ಜತೆಗೆ ತಂಡೋಪತಂಡವಾಗಿ ಶಕ್ತಿದೇವತೆಗಳ ಪಲ್ಲಕ್ಕಿಗಳು ಸೇರಿಕೊಳ್ಳುತ್ತವೆ. ಮೂರು ಮರಕ್ಕೆ ಮೂರು ಸುತ್ತು ಹಾಕಿದ ಬಳಿಕ ಕಾಳಮ್ಮನ ಸನ್ನಿಧಿಯಲ್ಲಿ ಪೂಜೆ ನಡೆಯುತ್ತದೆ. ಬನ್ನಿಯನ್ನು (ಶಮೀವೃಕ್ಷ) ಪಲ್ಲಕ್ಕಿಯಲ್ಲಿನ ಶಕ್ತಿ ದೇವತೆಗಳ ಉಡಿಗೆ ತುಂಬಿಸಲಾಗುತ್ತದೆ. ಇದುವೇ ಬನ್ನಿ ಮುಡಿಯುವ ಸಂಪ್ರದಾಯ. ಬನ್ನಿ ಮುಡಿದ ಬಳಿಕ ಪಲ್ಲಕ್ಕಿಗಳು ಮತ್ತೆ ತಮ್ಮ ಸ್ವಸ್ಥಾನಗಳತ್ತ ತೆರಳುತ್ತವೆ. ಹಿನ್ನೆಲೆ: ಶಕ್ತಿದೇವತೆಗಳೆಂದರೆ ಉಗ್ರ ಸ್ವರೂಪಿಗಳು. ಹೋದರೆ ಇತರರಿಗೆ ಅಪಾಯ ಎಂಬ ಭಾವನೆ ಇದೆ. ಪಿತೃಪಕ್ಷದ ಒಂಭತ್ತು ದಿನಗಳು ತಮ್ಮ ಕೇರಿಗಳಲ್ಲಿ ಮಾತ್ರ ಸುತ್ತಾಡಲು ಅವುಗಳಿಗೆ ಅವಕಾಶ ಇದೆ. ನವರಾತ್ರಿಯ ಒಂಭತ್ತು ದಿನಗಳು ಅವುಗಳಿಗೆ ತೊಟ್ಟಿಲ ಸೇವೆ ನಡೆಯುತ್ತದೆ. ಆಯುಧ ಪೂಜೆಯ ದಿನ ಮಾತ್ರ ತಮ್ಮಕ್ಷೇತ್ರ ಬಿಟ್ಟು ಹೊರಹೋಗಲು ಅವಕಾಶ ಇದ್ದು ಇಡೀ ನಾಡಿನ ಕ್ಷೇತ್ರಾಧಿಪತಿ ಹಾಗೂ ತಮ್ಮ  ಅಣ್ಣನೆಂದು ಭಾವಿಸುವ ಚನ್ನಬಸವೇಶ್ವರ ನಿಜಲಿಂಗಮ್ಮ ಜತೆಗೂಡಿ ಬನ್ನಿ ಪಡೆದ ಬಳಿಕ ಅವುಗಳು ಅಲ್ಲಿ ನಿಲ್ಲದೆ ನೇರವಾಗಿ ತಮ್ಮ ಸ್ವಸ್ಥಾನ ಸೇರಬೇಕು. ಮತ್ತೆ ಮುಂದಿನ ನವರಾತ್ರಿವರೆಗೆ ಅವುಗಳಿಗೆ ಅಲ್ಲೇ ವಾಸ ಎಂಬ ನಂಬಿಕೆಯ ಭಾಗವಾಗಿ ಈ ಎಲ್ಲ ಆಚರಣೆ ವ್ಯವಸ್ಥಿತವಾಗಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT