ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಳೆ: 'ಹಾನಿಗೊಂಡ 126 ಮನೆಗಳಿಗೆ ಪರಿಹಾರ'

ಶೀಘ್ರ ಸಮೀಕ್ಷೆ ನಡೆಸಿ ಬಾಕಿಯುಳಿದ 104 ಮನೆಗಳಿಗೆ ಪರಿಹಾರ: ಡಿ.ಸಿ ಮಾಹಿತಿ
Published : 22 ಆಗಸ್ಟ್ 2024, 15:27 IST
Last Updated : 22 ಆಗಸ್ಟ್ 2024, 15:27 IST
ಫಾಲೋ ಮಾಡಿ
Comments

ಹೊಸಪೇಟೆ: ಜಿಲ್ಲೆಯಲ್ಲಿ ಮಳೆಯಿಂದಾಗಿ ಹಾನಿಯಾದ 230 ಮನೆಗಳ ಪೈಕಿ 126 ಮನೆಗಳಿಗೆ ನಿಯಮಾನುಸಾರ ಸಮೀಕ್ಷೆ ಕೈಗೊಂಡು ಪರಿಹಾರ ಧನ ಪಾವತಿಸಲಾಗಿರುತ್ತದೆ. ಕಳೆದ ನಾಲ್ಕು ದಿನಗಳಲ್ಲಿ ಮತ್ತೆ 104 ಮನೆಗಳು ಹಾನಿಗೊಂಡಿದ್ದು, ಶೀಘ್ರ ಸಮೀಕ್ಷೆ ಪೂರ್ಣಗೊಳಿಸಿ ನಿಯಮಾನುಸಾರ ಪರಿಹಾರ ಪಾವತಿಸಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮಳೆಯಿಂದಾಗಿ ಜೂನ್ 1ನೇ ತಾರೀಖಿನಿಂದ ಈವರೆಗೂ ತಾಲ್ಲೂಕುವಾರು ಹೊಸಪೇಟೆ ತಾಲ್ಲೂಕಿನಲ್ಲಿ 24, ಹಗರಿಬೊಮ್ಮನಹಳ್ಳಿಯಲ್ಲಿ  26, ಕೂಡ್ಲಿಗಿಯಲ್ಲಿ 81, ಹರಪನಹಳ್ಳಿಯಲ್ಲಿ 32, ಹಡಗಲಿಯಲ್ಲಿ 30 ಮತ್ತು ಕೊಟ್ಟೂರಿನಲ್ಲಿ 37 ಸೇರಿ ಒಟ್ಟು 230 ಮನೆಗಳಿಗೆ ಹಾನಿಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಹರಪನಹಳ್ಳಿ, ಕೂಡ್ಲಿಗಿ, ಹಡಗಲಿ ತಾಲ್ಲೂಕುಗಳಲ್ಲಿ ತಲಾ ಒಂದು ಸೇರಿ 3 ಜಾನುವಾರುಗಳ ಪ್ರಾಣಹಾನಿಯಾಗಿದೆ. ಮಾಲೀಕರಿಗೆ ನಿಯಮಾನುಸಾರ ಪರಿಹಾರ ಪಾವತಿಸಲಾಗಿರುತ್ತದೆ. ಬೆಳೆಹಾನಿಯಾದ ರೈತರಿಗೆ ಸಮೀಕ್ಷೆ ಕೈಗೊಂಡು ಶೀಘ್ರದಲ್ಲಿ ಪರಿಹಾರ ಪಾವತಿಸಲಾಗುವುದು. ಈ ಬಗ್ಗೆ ಯಾವುದೇ ರೈತರು ಆತಂಕಪಡಬೇಕಿಲ್ಲ’ ಎಂದು ಭರವಸೆ ನೀಡಿದ್ದಾರೆ.

ಅತೀ ಹೆಚ್ಚು ಮಳೆ: ಜೂನ್ 1ರಿಂದ ಆಗಸ್ಟ್‌ 22ರವರೆಗೆ 237 ಮಿ.ಮೀ ವಾಡಿಕೆ ಮಳೆ ಆಗಬೇಕಾಗಿದ್ದು, 354 ಮಿ.ಮೀ ಮಳೆ ಆಗಿದೆ. ಶೇ 49ರಷ್ಟು ವಾಡಿಕೆಗಿಂತ ಹೆಚ್ಚಿನ ಮಳೆ ಆಗಿರುತ್ತದೆ. ಕೊಟ್ಟೂರು ಮತ್ತು ಕೂಡ್ಲಿಗಿ ತಾಲ್ಲೂಕುಗಳಲ್ಲಿ ಕ್ರಮವಾಗಿ ಶೇ 138 ಮತ್ತು ಶೇ 145ರಷ್ಕು ಮಳೆಯಾಗಿದೆ ಎಂದು ಡಿ.ಸಿ ತಿಳಿಸಿದ್ಡಾರೆ.

ಕೃಷಿ ಬೆಳೆ ಹಾನಿ: ಮಳೆಯಿಂದಾಗಿ 309.35 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿಯಾಗಿದೆ. ಪ್ರಮಖವಾಗಿ ಮುಸುಕಿನ ಜೋಳ 136.29 ಹೆಕ್ಟೇರ್, ಭತ್ತ 118.71 ಹೆಕ್ಟೇರ್, ಹತ್ತಿ 21.1 ಹೆಕ್ಟೇರ್, ಸೂರ್ಯಕಾಂತಿ 11.3 ಹೆಕ್ಟೇರ್, ಜೋಳ 8.14 ಹೆಕ್ಟೇರ್, ಸಜ್ಜೆ 6.88 ಹೆಕ್ಟೇರ್, ಕಬ್ಬು 2.23 ಹೆಕ್ಟೇರ್, ರಾಗಿ 3.2 ಹೆಕ್ಟೇರ್, ಶೇಂಗಾ 1.1 ಹೆಕ್ಟೇರ್ ಮತ್ತು ಹೆಸರು 0.4 ಹೆಕ್ಟೇರ್‌ನಷ್ಟು ಕೃಷಿ ಬೆಳೆಗಳಿಗೆ ಹಾನಿಯಾಗಿದೆ.

ತೋಟಗಾರಿಕಾ ಬೆಳೆ ಹಾನಿ: ತೋಟಗಾರಿಕಾ ಬೆಳೆಗಳಿಗೆ 90.93 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿರುತ್ತವೆ. ಇವುಗಳ ಪೈಕಿ ಮೆಣಸಿನಕಾಯಿ 32.4 ಹೆಕ್ಟೇರ್, ಈರುಳ್ಳಿ 23.1 ಹೆಕ್ಟೇರ್, ಪಪ್ಪಾಯ 3.2 ಹೆಕ್ಟೇರ್, ಬಾಳೆ 5.8 ಹೆಕ್ಟೇರ್, ಟೊಮೆಟೊ 4.8 ಹೆಕ್ಟೇರ್, ಹಾಗಲಕಾಯಿ 5.8 ಹೆಕ್ಟೇರ್, ಕುಂಬಳಕಾಯಿ 1.8 ಹೆಕ್ಟೇರ್, ನುಗ್ಗೇಕಾಯಿ 5.2 ಹೆಕ್ಟೇರ್, ವಿಳ್ಯದೆಲೆ 2.73 ಹೆಕ್ಟೇರ್, ಗುಲಾಬಿ 3.5 ಹೆಕ್ಟೇರ್, ಸುಗಂಧರಾಜ 1.2 ಹೆಕ್ಟೇರ್, ಅಡಿಕೆ 0.8 ಹೆಕ್ಟೇರ್, ಹಿರೇಕಾಯಿ 0.8 ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಹಾನಿಯಾಗಿರುತ್ತವೆ.

ಜಂಟಿ ಸಮೀಕ್ಷೆ ಕಾರ್ಯ ಪ್ರಗತಿ: ಪೂರ್ವ ಮುಂಗಾರಿನಲ್ಲಿ ಒಟ್ಟು 186  ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯ ಜಂಟಿ ಸಮೀಕ್ಷೆ ಕಾರ್ಯವು ಪೂರ್ಣಗೊಂಡಿದ್ದು, ರೈತರ ದಾಖಲೆಗಳನ್ನು ಪರಿಹಾರ ತಂತ್ರಾಂಶದಲ್ಲಿ ಗಣಕೀಕರಣ ಗೊಳಿಸಲಾಗಿರುತ್ತದೆ. ಈ ಫಲಾನುಭವಿಗಳಿಗೆ ಸರ್ಕಾರದಿಂದ ಶೀಘ್ರದಲ್ಲಿ ಪರಿಹಾರ ಮೊತ್ತವನ್ನು ಜಮಾ ಮಾಡಲಾಗುವುದು. ಮುಂಗಾರು ಋತುವಿನಲ್ಲಿ ಆದ ಬೆಳೆಹಾನಿಗಳ ಜಂಟಿ ಸಮೀಕ್ಷೆ ಕಾರ್ಯವು ಪ್ರಗತಿಯಲ್ಲಿದ್ದು, ಹಾನಿಯಾದ ರೈತರ ಪಟ್ಟಿಯನ್ನು ತಯಾರಿಸಿ ಸರ್ಕಾರದಿಂದ ನೇರವಾಗಿ ರೈತರ ಖಾತೆಗಳಿಗೆ ಬೆಳೆ ಪರಿಹಾರ ಮೊತ್ತವನ್ನು ಮುಂದಿನ ದಿನಗಳಲ್ಲಿ ಜಮಾ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬೆಳೆಹಾನಿ ಪರಿಹಾರ ಪಾವತಿ: ಕ್ರಮಕ್ಕೆ ಸೂಚನೆ ನೈಸರ್ಗಿಕ ವಿಕೋಪಗಳಿಂದ ಸ್ಥಳೀಯವಾಗಿ ಉಂಟಾಗುವ ಬೆಳೆ ಹಾನಿ ಪ್ರಕರಣಗಳಲ್ಲಿ ನಿಯಮಾನುಸಾರ ಪರಿಹಾರವನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿ ಪಾವತಿಸಲು ಕಾರ್ಯವಿಧಾನ ಹಾಗೂ ಷರತ್ತು ನಿಬಂಧನೆಗಳನ್ನು ನಿಗದಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿ ಆದೇಶಿಸಿರುವುದನ್ನು ಸರಿಯಾಗಿ ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ಅವರು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. 2024-25ನೇ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಿಂದ ಸ್ಥಳೀಯವಾಗಿ ಉಂಟಾಗುವ ಬೆಳೆಹಾನಿಗೆ ಕೇಂದ್ರ ಸರ್ಕಾರದ ಗೃಹ ಮಂತ್ರಾಲಯವು 2023ರ ಜುಲೈ 11ರಂದು ಹೊರಡಿಸಿರುವ ಮಾರ್ಗಸೂಚಿಗಳನ್ವಯ ನಿಯಮಾನುಸಾರ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪಾವತಿಸಬಹುದಾದ ಪರಿಹಾರ ಮೊತ್ತವನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಪರಿಹಾರ ತಂತ್ರಾಂಶದ ಮೂಲಕವಷ್ಟೇ ಅರ್ಹ ರೈತ ಫಲಾನುಭವಿಗಳಿಗೆ ಅರ್ಹತೆ ಅನುಗುಣವಾಗಿ ಪಾವತಿಸಲು ತೀರ್ಮಾನಿಸಲಾಗಿದೆ. ಅದರಂತೆ ಸ್ಥಳೀಯವಾಗಿ ಉಂಟಾಗುವ ಬೆಳೆ ಹಾನಿಗಳಿಗೆ ಪರಿಹಾರ ಪಾವತಿಸಲು ಕಾರ್ಯವಿಧಾನ ಷರತ್ತು ಮತ್ತು ನಿಬಂಧನೆಗಳನ್ನು ಸರ್ಕಾರ ನಿಗದಿಪಡಿಸಿದೆ. ಸರ್ಕಾರವು ಆಗಸ್ಟ್ 16ರಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ ನಿಯಮಗಳಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಶೇ 100ರಷ್ಟು ಬಿತ್ತನೆ?

ಜಿಲ್ಲೆಯಲ್ಲಿ ಕೃಷಿ ಪ್ರದೇಶದಲ್ಲಿ ಶೇ 100 ರಷ್ಟು ಬಿತ್ತನೆಯಾಗಿದೆ. 294000 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಪ್ರಮುಖ ಬೆಳೆಗಳು ಮುಸುಕಿನ ಜೋಳ ಶೇಂಗಾ ಭತ್ತ ಜೋಳ ಸಜ್ಜೆ ತೊಗರಿ ಮತ್ತು ರಾಗಿ ಬೆಳೆಗಳು ಬಿತ್ತನೆಯಾಗಿದೆ. ತೋಟಗಾರಿಕಾ ಪ್ರದೇಶದಲ್ಲಿ 4795 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತದೆ. ಪ್ರಮುಖ ಬೆಳೆಗಳು ಮೆಣಸಿನಕಾಯಿ ಟಮೊಟೋ ಈರುಳ್ಳಿ ಬದನೆ ಬೆಳೆಗಳು ಸಹ ಬಿತ್ತನೆಯಾಗಿದೆ ಎಂದು ಡಿ.ಸಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT