ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯ ಹೊಸಪೇಟೆ ಸಹಿತ ಹಲವೆಡೆ ಬುಧವಾರ ರಾತ್ರಿಯಿಡಿ ಜಿಟಿ ಜಿಟಿ ಮಳೆ ಸುರಿದಿದೆ. ತುಂಗಭದ್ರಾ ನದಿಯ ಜಲಾನಯನ ಪ್ರದೇಶಗಳಲ್ಲಿ ಮಳೆ ಸುರಿದಿರುವುದರಿಂದ ಸುಮಾರು 20 ದಿನಗಳ ಬಳಿಕ ಜಲಾಶಯಕ್ಕೆ ಒಳಹರಿವು ಮತ್ತೆ ಆರಂಭವಾಗಿದೆ.
ತುಂಗಭದ್ರಾ ಜಲಾಶಯಕ್ಕೆ ಗುರುವಾರ 4,860 ಕ್ಯುಸೆಕ್ ಒಳಹರಿವು ಬಂದಿದ್ದು, ಸದ್ಯ ಜಲಾಶಯದಲ್ಲಿ 25.87 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಕಾಲುವೆಗಳಿಗೆ 9,874 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 102.05 ಟಿಎಂಸಿ ಅಡಿ ನೀರು ಸಂಗ್ರಹ ಇತ್ತು.
ತುಂಗಭದ್ರಾ ಜಲಾಶಯದ ಬಲದಂಡೆ ಮೇಲ್ಮಟ್ಟದ ಕಾಲುವೆಯಲ್ಲಿ ನೀರು ಹರಿಸುವುದನ್ನು ಶುಕ್ರವಾರದಿಂದ (ನ.10) ಸ್ಥಗಿತಗೊಳಿಸಲು ನೀರಾವರಿ ಸಲಹಾ ಸಮಿತಿ ಈಗಾಗಲೇ ನಿರ್ಧರಿಸಿದೆ. ಆದರೆ ಈ ಪ್ರಸ್ತಾವಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಳೆದು ನಿಂತಿರುವ ಭತ್ತ ಕಟಾವು ಹಂತಕ್ಕೆ ಬರುತ್ತಿದ್ದು, ಈ ಹಂತದಲ್ಲಿ ನೀರು ಹರಿಸುವುದನ್ನು ಸ್ಥಗಿತಗೊಳಿಸಬಾರದು ಎಂದು ರೈತರು ಒತ್ತಾಯಿಸಿದ್ದಾರೆ. ಹಿಂಗಾರು ಮಳೆ ಚುರುಕಾಗುವ ಲಕ್ಷಣ ಇರುವ ಕಾರಣ ಹಾಗೂ ಒಳಹರಿವು ಆರಂಭವಾಗಿರುವುದರಿಂದ ಈ ನಿರ್ಧಾರ ಮರುಪರಿಶೀಲಿಸಲಾಗುತ್ತದೆಯೇ ಎಂಬ ಕುತೂಹಲ ಗರಿಗೆದರಿದೆ. ಈ ಬಾರಿ ಎರಡನೇ ಬೆಳೆಗೆ ನೀರು ಹರಿಸುವ ಸಾಧ್ಯತೆ ಇಲ್ಲ ಎಂದು ಈಗಾಗಲೇ ತಿಳಿಸಲಾಗಿದ್ದು, ಹಿಂಗಾರು ಮಳೆಯತ್ತ ಎಲ್ಲರ ಗಮನ ನೆಟ್ಟಿದೆ.
ಹೊಸಪೇಟೆ ಸುತ್ತಮುತ್ತ ದಟ್ಟ ಮೋಡ
ದಟ್ಟ ಮೋಡ ಆವರಿಸಿರುವುದು
ಗುರುವಾರ ಬೆಳಿಗ್ಗೆ ಹೊಸಪೇಟೆ ಸುತ್ತಮುತ್ತ ದಟ್ಟ ಮೋಡ ಆವರಿಸಿದ್ದು, ಉತ್ತಮ ಮಳೆ ಸುರಿಯುವ ಮುನ್ಸೂಚನೆ ನೀಡಿದೆ.
ಜಿಲ್ಲೆಯಲ್ಲಿ ತೀವ್ರ ಬರಗಾಲ ಆವರಿಸಿದ್ದು, ಕುಡಿಯುವ ನೀರಿಗೆ ಆತಂಕ ನೆಲೆಸಿದೆ. ಕುಡಿಯುವ ನೀರಿಗೆ ಎಲ್ಲಿಯೂ ತೊಂದರೆ ಉಂಟಾಗಬಾರದು, ಅಗತ್ಯ ಇದ್ದಲ್ಲಿ ತಕ್ಷಣ ಕೊಳವೆ ಬಾವಿ ಕೊರೆಸಿ ನೀರು ಒದಗಿಸಬೇಕು ಎಂದು ಜಿಲ್ಲಾಡಳಿತ ಈಗಾಗಲೇ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಸದ್ಯ ಜಾನುವಾರುಗಳ ಮೇವಿಗೆ ಕೊರತೆ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
‘ಹಿಂಗಾರು ಮಳೆ ಜಿಲ್ಲೆಯ ಜನರಿಗೆ ನೆಮ್ಮದಿ ತಂದಿದೆ. ಬರಗಾಲದಿಂದ ಬೆಳೆ ನಷ್ಟವಾಗಿದೆ. ಸದ್ಯ ಸುರಿಯುತ್ತಿರುವ ಮಳೆಯಿಂದ ಮೇವು ಚಿಗುರಲು ಅನುಕೂಲವಾಗಿದೆ. ಜಾನುವಾರುಗಳಿಗೆ ಇನ್ನು ಮೇವಿನ ಕೊರತೆಯಂತೂ ಆಗದು. ಮಳೆ ಅಧಿಕ ಪ್ರಮಾಣದಲ್ಲಿ ಸುರಿದರೆ ತುಂಗಭದ್ರಾ ಜಲಾಶಯಕ್ಕೆ ನೀರು ಹರಿದುಬರಬಹುದು. ಇದರಿಂದ ನಾಲ್ಕು ಜಿಲ್ಲೆಗಳ ಕುಡಿಯುವ ನೀರಿನ ಕೊರತೆ ನಿವಾರಣೆಗೆ ದಾರಿ ಸುಗಮವಾದೀತು’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.