ಶುಕ್ರವಾರ, ಜನವರಿ 27, 2023
20 °C

ವಿಜಯನಗರ: 105 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಕನ್ನಡ ಧ್ವಜಾರೋಹಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಭಾನುವಾರ ನಗರದ ಡಾ. ಪುನೀತ್ ರಾಜಕುಮಾರ್ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ತಾಯಿ ಭುವನೇಶ್ವರಿ ದೇವಿ ಭಾವಚಿತ್ರಗಳಿಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಪುಷ್ಪ ಗೌರವ ಸಲ್ಲಿಸಿದರು. ನಂತರ 105 ಅಡಿ ಎತ್ತರದ ಧ್ವಜ ಸ್ತಂಭದಲ್ಲಿ ಕನ್ನಡ ಧ್ವಜಾರೋಹಣ ಮಾಡಿದರು.

ಬಳಿಕ ಮಾತನಾಡಿ, ಅನೇಕ ಜನ ಮಹನೀಯರ ತ್ಯಾಗ, ಹೋರಾಟದಿಂದ ಕನ್ನಡ ನಾಡು ಅಸ್ತಿತ್ವಕ್ಕೆ ಬಂದಿದೆ. ಅದರ ಹಿರಿಮೆ ಬಗ್ಗೆ ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸಬೇಕು. ನಾಡು, ನುಡಿಗಾಗಿ ಸದಾ ಧ್ವನಿ ಎತ್ತುತ್ತಿರುವ ಕನ್ನಡ ಸಂಘಟನೆಗಳ ಕಾರ್ಯ ಶ್ಲಾಘನಾರ್ಹವಾದುದು ಎಂದು ಹೇಳಿದರು.

ನಟ ಡಾ.ರಾಜಕುಮಾರ್ ಅವರು ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿ ಅದಕ್ಕೊಂದು ದಿಕ್ಕು ಕೊಟ್ಟಿದ್ದರು. ಜನಪ್ರಿಯ ನಟರಾಗಿದ್ದರೂ ಕನ್ನಡ ಹೊರತುಪಡಿಸಿ ಅನ್ಯಭಾಷೆಯ ಚಿತ್ರಗಳಲ್ಲಿ ನಟಿಸಲಿಲ್ಲ. ಕನ್ನಡದ ಬಗೆಗಿನ ಅವರ ಅಭಿಮಾನ ತೋರಿಸುತ್ತದೆ. ಡಾ. ಪುನೀತ್ ರಾಜಕುಮಾರ್ ಕೂಡ ಕಿರಿಯ ವಯಸ್ಸಿನಲ್ಲೇ ಸಾಕಷ್ಟು ಉತ್ತಮ ಕೆಲಸ ಮಾಡಿದರು. ಅವರ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯಲು ಪ್ರಯತ್ನಿಸೋಣ ಎಂದು ತಿಳಿಸಿದರು.

105 ಅಡಿ ಎತ್ತರದ ಧ್ವಜಸ್ತಂಭದಲ್ಲಿ ವರ್ಷದ ಎರಡು ದಿನ ತ್ರಿವರ್ಣ ಧ್ವಜ, ಮಿಕ್ಕುಳಿದ ದಿನಗಳಲ್ಲಿ ನಿರಂತರವಾಗಿ ಕನ್ನಡ ಧ್ವಜ ಹಾರಾಡಲಿದೆ ಎಂದರು.

ಗೃಹರಕ್ಷಕ ದಳದ ಮಾಜಿ‌ ಸಮಾದೇಷ್ಟ ಎಚ್.ಎಂ.ಗಿರೀಶ, ಸಹಕಾರ ಕ್ಷೇತ್ರದ ಉಪ್ಪಿನ್ ಹನುಮಂತಪ್ಪ, ಮಕ್ಕಳ ಕ್ಷೇತ್ರದಲ್ಲಿ ಸಲ್ಲಿಸಿದ ಉತ್ತಮ ಸೇವೆಗಾಗಿ ಗುಂಡಿ ರಮೇಶ ಅವರನ್ನು ಸತ್ಕರಿಸಲಾಯಿತು.

ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್.ಎಸ್. ಆನಂದ್, ಹುಡಾ ಅಧ್ಯಕ್ಷ‌ ಅಶೋಕ್ ಜೀರೆ, ಕನ್ನಡ ಸಾಹಿತ್ತ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ನಾಯಕರ ಹುಲುಗಪ್ಪ, ಮುಖಂಡರಾದ ಯತ್ನಳ್ಳಿ ಮಲ್ಲಯ್ಯ, ಮಧುರಚೆನ್ನಶಾಸ್ತ್ರಿ, ಜಂಬಯ್ಯ ನಾಯಕ, ಎಸ್.ಎಂ.ಜಂಬುನಾಥ, ಸಾಲಿ ಸಿದ್ದಯ್ಯ ಸ್ವಾಮಿ, ಬಿ.ಯರ್ರಿಸ್ವಾಮಿ, ಸಿದ್ದಾರ್ಥ ಸಿಂಗ್, ಸಂದೀಪ್ ಸಿಂಗ್, ಧರ್ಮೇಂದ್ರ ಸಿಂಗ್, ರಾಜು ಗುಜ್ಜಲ್, ಬೋಡಾ ರಾಮಪ್ಪ, ಪರಮೇಶಗೌಡ, ಗುಜ್ಜಲ್ ಗಣೇಶ್ ಇತರರಿದ್ದರು.

ನಗರಸಭೆ ಅಧ್ಯಕ್ಷೆ ಡಾನ್ಸ್: ನಗರಸಭೆ ಅಧ್ಯಕ್ಷೆ ಸುಂಕಮ್ಮ ಅವರು ಕನ್ನಡ ಬಾವುಟ ಹಿಡಿದುಕೊಂಡು ಡಾ. ರಾಜಕುಮಾರ್ ಅವರ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು... ಹಾಡಿಗೆ ಹೆಜ್ಜೆ‌ಹಾಕಿದರು. ಅವರೊಂದಿಗೆ ಕನ್ನಡ ಪರ ಸಂಘಟನೆಗಳ ಕಾರಯಕರ್ತರು ಕುಣಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು