ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ |ರಾಜ್ಯಪಾಲರ ವಿವೇಚನಾ ಕೋಟಾ: ₹107 ಕೋಟಿ ಪ್ರಸ್ತಾವ; ₹25 ಕೋಟಿಗೆ ಸಮ್ಮತಿ

ಹಂಪಿ ವಿವಿಗೆ ಕೊಂಚ ನಿರಾಳ
Published 27 ಆಗಸ್ಟ್ 2024, 4:48 IST
Last Updated 27 ಆಗಸ್ಟ್ 2024, 4:48 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವ್ಯಾಪ್ತಿಯಲ್ಲಿ ಬರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಸಲುವಾಗಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರ ವಿವೇಚನೆಯಂತೆ ₹25 ಕೋಟಿ ವೆಚ್ಚ ಮಾಡುವ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದರಿಂದ ವಿಶ್ವವಿದ್ಯಾಲಯ ಒಂದಿಷ್ಟು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದೆ.

ಕಳೆದ ಐದು ವರ್ಷಗಳಿಂದ ಸರ್ಕಾರದಿಂದ ಸೂಕ್ತ ಧನಸಹಾಯ ಇಲ್ಲದೆ ವಿಶ್ವವಿದ್ಯಾಲಯ ಕಂಗೆಟ್ಟು ಕುಳಿತಿತ್ತು. ಸಂಶೋಧನಾ ಕಾರ್ಯಗಳು ಕುಂಠಿತವಾಗಿದ್ದಲ್ಲದೆ, ದಿನನಿತ್ಯದ ಕೆಲಸಗಳಿಗೂ ಅಡಚಣೆ ಆಗಿತ್ತು. ಹೀಗಾಗಿ ಒಂದು ಆಶಾಕಿರಣ ರೂಪದಲ್ಲಿ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಅವರು 2023ರ ಡಿಸೆಂಬರ್‌ 20ರಂದು ರಾಜ್ಯಪಾಲರಿಗೆ ವಿಶ್ವವಿದ್ಯಾಲಯಕ್ಕೆ ಅಗತ್ಯವಾಗಿ ಆಗಬೇಕಾದ ಕೆಲವು ಕಾಮಗಾರಿಗಳ ಪಟ್ಟಿ ಒದಗಿಸಿ, ಅಂದಾಜು ಖರ್ಚಿನ ವಿವರ ನೀಡಿದ್ದರು. ₹107 ಕೋಟಿ ಅಂದಾಜು ವೆಚ್ಚದ ಬದಲಿಗೆ ಇದೀಗ ₹25 ಕೋಟಿ ಅನುದಾನ ಸಿಗುವ ಭರವಸೆ ಸಿಕ್ಕಿದ್ದರಿಂದಲೇ ಒಂದಿಷ್ಟು ಸಂಚಲನ ಮೂಡಿದೆ.

‘ನಾವು ಎಂಟು ಕಾಮಗಾರಿಗಳ ಮಾಹಿತಿ ಮತ್ತು ಅದಕ್ಕೆ ತಗಲಬಹುದಾದ ವೆಚ್ಚದ ಪಟ್ಟಿ ಕೊಟ್ಟಿದ್ದೆವು. ಜತೆಗೆ ಯಾತ್ರಿ ನಿವಾಸ ಸಹಿತ ₹150  ಕೋಟಿಯ ಪ್ರಸ್ತಾವವನ್ನೂ ಸಲ್ಲಿಸಿದ್ದೆವು. ವಿಶ್ವವಿದ್ಯಾಲಯ ಬಹಳ ಆರ್ಥಿಕ ಸಂಕಷ್ಟದಲ್ಲಿ ಇರುವುದನ್ನು ಪದೇ ಪದೇ ಸರ್ಕಾರದ ಮಟ್ಟದಲ್ಲಿ ತಿಳಿಸುತ್ತಲೇ ಬಂದಿದ್ದೆವು. ಇದೀಗ ಸರ್ಕಾರ ಕೆಕೆಆರ್‌ಡಿಬಿ ಅನುದಾನದಲ್ಲಿ ರಾಜ್ಯಪಾಲರಿಗೆ ವಿವೇಚನಾ ಕೋಟಾದಲ್ಲಿ ಹಣ ನೀಡಲು ಅವಕಾಶ ಕೊಟ್ಟಿರುವುದು ಖುಷಿಕೊಟ್ಟಿದೆ. ಆದರೆ ಯಾವುದಕ್ಕೆ ಎಷ್ಟು ಅನುದಾನ ಹಂಚಲಾಗಿದೆ ಎಂಬ ಮಾಹಿತಿ ಲಭಿಸಿಲ್ಲ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೈಹಿಡಿವ ವಿವೇಚನೆ: ಕನ್ನಡ ವಿಶ್ವವಿದ್ಯಾಲಯ ಕಷ್ಟದ ದಿನಗಳನ್ನು ಕಳೆದುದೇ ಅಧಿಕ. ಮೂರು ವರ್ಷದ ಹಿಂದೆ ಅಭಿವೃದ್ಧಿ ಕೆಲಸಗಳಿಗೆ, ಗೌರವಧನ, ಸ್ಕಾಲರ್‌ಶಿಪ್‌ ಪಾವತಿಗೆ ದುಡ್ಡೇ ಇಲ್ಲದಾಗ ನೆರವಿಗೆ ಬಂದುದು ಮುಖ್ಯಮಂತ್ರಿ ಅವರ ವಿವೇಚನಾ ಕೋಟಾದಲ್ಲಿ ದೊರೆತ ₹20 ಕೋಟಿ. ಅದರ ಒಂದು ಕಂತು ಬರುವುದು ಇನ್ನೂ ಬಾಕಿ ಇದೆ. ಅದೇ ಅನುದಾನದಲ್ಲಿ ಕುಡಿಯುವ ನೀರು, ಸುಸಜ್ಜಿತ ಸ್ಟುಡಿಯೊ, ಪ್ರಸಾರಾಂಗ ಸಹಿತ ಹಲವು ಕೆಲಸಗಳು ನಡೆದಿವೆ. ₹1 ಕೋಟಿಗೂ ಮಿಕ್ಕ ವಿದ್ಯುತ್ ಬಿಲ್ ಬಾಕಿ ಇದ್ದಾಗ ಸಹ ಸರ್ಕಾರ ನೆರವಿಗೆ ಬಂತು. ಇದೀಗ ಮತ್ತೆ ಒಂದಿಷ್ಟು ಕೆಲಸಗಳಿಗೆ ರಾಜ್ಯಪಾಲರ ವಿವೇಚನೆಯಲ್ಲಿ ದುಡ್ಡು ಬಿಡುಗಡೆಯಾಗಲು ಕಾಲ ಸನ್ನಿಹಿತವಾಗಿದೆ. ಇದಕ್ಕಾಗಿ ವಿದ್ಯಾರಣ್ಯ ಕ್ಯಾಂಪಸ್‌ ಖುಷಿಯಿಂದಿದೆ.

ಉನ್ನತ ಶಿಕ್ಷಣ ಮರೀಚಿಕೆಯೇ ಎಂಬಂತಿದ್ದ ಸಮುದಾಯಗಳ ಯುವಕರೂ ನಮ್ಮಲ್ಲಿ ಪಿಎಚ್.ಡಿ. ಮಾಡುತ್ತಿದ್ದಾರೆ. ಅವರೂ ಈ ಅನುದಾನದ ಫಲಾನುಭವಿಗಳು ಅದುವೇ ಖುಷಿಯ ಸಂಗತಿ
-ಪ್ರೊ. ಡಿ.ವಿ.ಪರಮಶಿವಮೂರ್ತಿ, ಕುಲಪತಿ

ರಾಜ್ಯಪಾಲರಿಗೆ ಸಲ್ಲಿಸಿದ್ದ ಕಾಮಗಾರಿ ಪ್ರಸ್ತಾವ

ಕಾಮಗಾರಿಗಳ ವಿವರ;ಅಂದಾಜು ಮೊತ್ತ (₹ಕೋಟಿಗಳಲ್ಲಿ)
ಸಂಶೋಧನಾ ವಿದ್ಯಾರ್ಥಿಗಳ ಅಧ್ಯಯನ ಕಟ್ಟಡ;5
ವಿವಿ ಆವರಣದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ;5
ಡಾರ್ಮೆಟರಿ ಮತ್ತು ಅತಿಥಿಗೃಹ;10
ಆಡಳಿತ ಕಟ್ಟಡ;10
ಅಲ್ಪಸಂಖ್ಯಾತರ ವಿದ್ಯಾರ್ಥಿ ವಸತಿ ನಿಲಯ;10
ಒಬಿಸಿ ವಿದ್ಯಾರ್ಥಿಗಳ ವಸತಿ ನಿಲಯ;10
ವಿವಿ ಆವರಣ ಸುತ್ತ ತಡೆಗೋಡೆ ನಿರ್ಮಾಣ;52
ಪುಸ್ತಕ ಮಾರಾಟ, ದಾಸ್ತಾನು, ಪ್ರದರ್ಶನ ಮಳಿಗೆ;5
ಒಟ್ಟು;107

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT