ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ದನಿಸಿದ ‘ಹರ ಹರ ಮಹಾದೇವ’ ಉದ್ಘೋಷ

ಕುರುವತ್ತಿಯಲ್ಲಿ ಬಸವೇಶ್ವರ, ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ ಸಂಭ್ರಮ
Published 10 ಮಾರ್ಚ್ 2024, 14:42 IST
Last Updated 10 ಮಾರ್ಚ್ 2024, 14:42 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಕುರುವತ್ತಿಯಲ್ಲಿ ಭಾನುವಾರ ಸಂಜೆ ಬಸವೇಶ್ವರ ಮತ್ತು ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ವೈಭವದಿಂದ ಜರುಗಿತು.

ದೇವಸ್ಥಾನದಿಂದ ಭವ್ಯ ಮೆರವಣಿಗೆಯಲ್ಲಿ ಸಾಗಿಬಂದ ಸ್ವಾಮಿಯ ಉತ್ಸವ ಮೂರ್ತಿಯು ರಥಕ್ಕೆ ಪ್ರದಕ್ಷಿಣೆ ಹಾಕಿದ ಬಳಿಕ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬೃಹತ್ ಹೂ ಮಾಲೆ, ಬಣ್ಣ ಬಣ್ಣದ ಪಟ, ತಳಿರು ತೋರಣಗಳಿಂದ ಸಿಂಗರಿಸಿದ್ದ ರಥಕ್ಕೆ ಮಹಾಮಂಗಳಾರತಿ ನೆರವೇರಿಸುತ್ತಿದ್ದಂತೆ ಅಪಾರ ಭಕ್ತರ ‘ಹರ ಹರ ಮಹಾದೇವ’ ಜಯಘೋಷದೊಂದಿಗೆ ರಥೋತ್ಸವ ಪ್ರಾರಂಭವಾಯಿತು.

ರಥಬೀದಿಯಲ್ಲಿ ನೆರೆದಿದ್ದ ಭಕ್ತ ಸಮೂಹ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿಯಿಂದ ನಮಿಸಿದರು. ರಥವು ಪಾದಗಟ್ಟೆವರೆಗೂ ತೆರಳಿ ಮೂಲ ಸ್ಥಳಕ್ಕೆ ಹಿಂತಿರುಗಿತು. ಸಮಾಳ, ಡೋಲು, ಹಲಗೆ ಮಂಗಳ ವಾದ್ಯಗಳು ವಿಜೃಂಭಣೆಯ ರಥೋತ್ಸವದ ಮೆರಗು ಹೆಚ್ಚಿಸಿದ್ದವು.

ಹೂವಿನಹಡಗಲಿ ತಾಲ್ಲೂಕು ಸೇರಿದಂತೆ ವಿಜಯನಗರ, ಬಳ್ಳಾರಿ, ದಾವಣಗೆರೆ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಿಂದ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.

ಶಾಸಕ ಎಲ್.ಕೃಷ್ಣನಾಯ್ಕ, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಎಚ್.ಗಂಗಾಧರ,  ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ.ಕೃಷ್ಣಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಭರಮಪ್ಪ ಕುಂಚೂರು, ಉಪಾಧ್ಯಕ್ಷೆ ಗೀತಮ್ಮ, ಪಿಡಿಒ ಗುತ್ತೆಪ್ಪ ತಳವಾರ ಇತರರು ಇದ್ದರು.

ತುಂಗಭದ್ರೆ ಪಶ್ಚಿಮಾಭಿಮುಖವಾಗಿ ಹರಿಯುವ ಪಾವನ ಸುಕ್ಷೇತ್ರ ಕುರುವತ್ತಿಯಲ್ಲಿ ಶಿವರಾತ್ರಿ ಅಮವಾಸ್ಯೆಯಂದು ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಇಡೀ ದಿನ ಭಕ್ತರು ಸರದಿ ಸಾಲಿನಲ್ಲಿ ತೆರಳಿ ಭಕ್ತಿಭಾವದಿಂದ ಸ್ವಾಮಿಯ ದರ್ಶನ ಪಡೆದರು. ಸುಕ್ಷೇತ್ರದೆಲ್ಲೆಡೆ ‘ಹರ ಹರ ಮಹಾದೇವ’ ಉದ್ಘೋಷ ಮಾರ್ದನಿಸಿತು.

ದೀಡು ನಮಸ್ಕಾರ, ಎತ್ತಿನ ಮೆರವಣಿಗೆ : ಕುರುವತ್ತಿ ಸುಕ್ಷೇತ್ರದಲ್ಲಿ ಭಾನುವಾರ ಬೆಳಿಗ್ಗೆಯಿಂದ ಅಪಾರ ಭಕ್ತರು ದೀಡು ನಮಸ್ಕಾರ ಹರಕೆ ತೀರಿಸಿದರು. ತುಂಗಭದ್ರಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಭಕ್ತಿಭಾವದಿಂದ ನಾನಾ ಹರಕೆಗಳನ್ನು ತೀರಿಸಿದರು. ಇದೇ ವೇಳೆ ರೈತರು ಎತ್ತಿನ ಮೆರವಣಿಗೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT