ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಬ್ಲಾಕ್‌ಮೇಲ್‌ ಮೂಲಕ ಮಹಿಳಾ ಮತಗಳಿಸಲು ಯತ್ನ: ಬಿಜೆಪಿಯ ಮಂಜುಳಾ ಆರೋಪ

Published 28 ಮಾರ್ಚ್ 2024, 10:01 IST
Last Updated 28 ಮಾರ್ಚ್ 2024, 10:01 IST
ಅಕ್ಷರ ಗಾತ್ರ

ಹೊಸಪೇಟೆ: ಕಾಂಗ್ರೆಸ್ ಅಭ್ಯರ್ಥಿ ಸೋತರೆ ಮಹಿಳೆಯರಿಗೆ ನೀಡಲಾಗುತ್ತಿರುವ ಸೌಲಭ್ಯ ಕಡಿತವಾಗಲಿದೆ ಎಂದು ಹೇಳುತ್ತ ‘ಬ್ಲಾಕ್‌ಮೇಲ್‌’ ಮಾಡಿ ಮಹಿಳಾ ಮತ ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸಿದೆ ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಆರೋಪಿಸಿದರು.

ಇಲ್ಲಿ ಗುರುವಾರ ನಡೆದ ಪಕ್ಷದ ಜಿಲ್ಲಾ ಮಹಿಳಾ ಮೋರ್ಚಾದ ವಿಶೇಷ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸುವುದಕ್ಕೆ ಮೊದಲಾಗಿಯೇ ಮೋದಿ ಸರ್ಕಾರ ಮಹಿಳೆಯರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಶೌಚಾಲಯ ನಿರ್ಮಾಣಕ್ಕೆ ₹12 ಸಾವಿರ, ಉಜ್ವಲ ಗ್ಯಾಸ್ ಯೋಜನೆಯಲ್ಲಿ ₹9 ಸಾವಿರ, ಆಯುಷ್ಮಾನ್ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ ₹ 5 ಲಕ್ಷ ವೈದ್ಯಕೀಯ ವೆಚ್ಚದ ಗ್ಯಾರಂಟಿ ಲಭಿಸಿದೆ. ಇದನ್ನು ಜನರಿಗೆ ಮನವರಿಕೆ ಮಾಡುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದ ಸ್ಥಿತಿ ಇದೆ. ಹಾವೇರಿಯಲ್ಲಿ ನಡೆದ ಘಟನೆಯ ಕುರಿತಂತೆ ವಿಶೇಷ ತನಿಖಾ ತಂಡ ರಚಿಸಬೇಕಿದ್ದರೂ ಅದನ್ನು ಮಾಡಿಲ್ಲ. ‘ಇಂಡಿಯಾ’ ಮೈತ್ರಿಕೂಟದ ಭಾಗವಾಗಿರುವ ಟಿಎಂಸಿ ಆಡಳಿತದಲ್ಲಿ ಮಹಿಳೆಯೇ ಮುಖ್ಯಮಂತ್ರಿಯಾಗಿದ್ದರೂ ಮಹಿಳೆಗೆ ರಕ್ಷಣೆಯೇ ಇಲ್ಲದ ಸ್ಥಿತಿ ಇದೆ ಎಂದು ಅವರು ದೂರಿದರು.

‘ಸಂಜೀವಿನಿ ಒಕ್ಕೂಟಗಳು ಇಂದು ಮಹಿಳಾ ಸಬಲೀಕರಣದಲ್ಲಿ ಬಹಳಷ್ಟು ಕೆಲಸ ಮಾಡಿವೆ. ಮೋದಿ ಸರ್ಕಾರದ ಹಲವು ಸ್ವಾವಲಂಬಿ ಯೋಜನೆಗಳಿಂದಾಗಿ ಅದೆಷ್ಟೋ ನಿರುದ್ಯೋಗಿಗಳಿಗೆ, ಮಹಿಳೆಯರಿಗೆ ಉದ್ಯೋಗ ಲಭಿಸಿದೆ’ ಎಂದು ಮಂಜುಳಾ ಪ್ರತಿಪಾದಿಸಿದರು.

ಸಂವಾದ: ತಮ್ಮ ಭಾಷಣದ ಜತೆಗೇ ಕೆಲವು ಫಲಾನುಭವಿಗಳನ್ನು ವೇದಿಕೆಗೆ ಕರೆಸಿಕೊಂಡ ಮಂಜುಳಾ, ಅವರ ಅನುಭವ ಹಂಚಿಕೊಂಡರು. ಶೌಚಾಲಯ ಇಲ್ಲದ ಸ್ಥಿತಿಯಲ್ಲಿ ಮಹಿಳೆಯರು ಅನುಭವಿಸುತ್ತಿದ್ದ ಯಾತನೆ, ಬೀದಿ ಬದಿ ವ್ಯಾಪಾರಿಗಳಿಗೆ ಸ್ವನಿಧಿ ಯೋಜನೆಯಿಂದ ಆಗಿರುವ ಪ್ರಯೋಜನ, ಜನಧನ ಯೋಜನೆಯಿಂದ ಆಗಿರುವ ಲಾಭಗಳ ಕುರಿತಂತೆ ಹಲವರು ತಮ್ಮ ಅನುಭವ ಹಂಚಿಕೊಂಡರು.

ಮಹಿಳಾ ಮೋರ್ಚಾದ ರಾಜ್ಯ ಉಪಾಧ್ಯಕ್ಷೆ ಶರಣಮ್ಮ, ಜಿಲ್ಲಾ ಘಟಕದ ಅಧ್ಯಕ್ಷೆ ಅರುಂಡಿ ಸುವರ್ಣ, ಉಪಾಧ್ಯಕ್ಷೆ ಭಾರತಿ ಪಾಟೀಲ್‌, ಬಳ್ಳಾರಿ ಜಿಲ್ಲಾ ಅಧ್ಯಕ್ಷೆ ಸುಗುಣ, ಉಪಾಧ್ಯಕ್ಷೆ ಬೀನಾ ಮಂಜುನಾಥ್, ಹೊಸಪೇಟೆ ಮಂಡಲ ಅಧ್ಯಕ್ಷೆ ಬಿ.ಜೆ.ಕವಿತಾ, ನಗರಸಭೆ ಅಧ್ಯಕ್ಷೆ ಲತಾ, ಸಮಾಜ ಸೇವಕಿ ಪ್ರಿಯಾಂಕಾ ಜೈನ್, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್‌.ರಾಘವೇಂದ್ರ, ಹೊಸಪೇಟೆ ಮಂಡಲ ಅಧ್ಯಕ್ಷ ಶಂಕರ ಮೇಟಿ ಇತರರು ಇದ್ದರು.

ಗ್ಯಾರಂಟಿಗೆ ವಿರೋಧವಿಲ್ಲ, ಜಾರಿಗೊಳಿಸಿದ ರೀತಿ ಸರಿ ಇಲ್ಲ

ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನಮ್ಮ ವಿರೋಧವಿಲ್ಲ. ಆದರೆ ಅದನ್ನು ಜಾರಿಗೆ ತಂದ ರೀತಿ ಸರಿ ಇಲ್ಲ. ಅಧಿಕ ಮಂದಿ ಬಸ್‌ನಲ್ಲಿ ಪ್ರಯಾಣಿಸುತ್ತಿರುವಾಗ ಹೆಚ್ಚುವರಿ ಬಸ್‌ಗಳನ್ನು ಹಾಕಬೇಕು, ಅದರ ಬದಲಿಗೆ ಬಸ್‌ಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಅನುಕೂಲ ಮಾಡಿಕೊಡಬೇಕಾದ ಯೋಜನೆ ಹಲವಾರು ಮಂದಿಗೆ ಅನಾನುಕೂಲವನ್ನೇ ತಂದಿತ್ತಿದೆ’ ಎಂದು ಮಂಜುಳಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸರ್ಕಾರ ಮಹಿಳೆಯರನ್ನಷ್ಟೇ ಬ್ಲಾಕ್‌ಮೇಲ್ ಮಾಡುತ್ತಿಲ್ಲ, ಅಲ್ಪಸಂಖ್ಯಾತರನ್ನೂ ಬ್ಲಾಕ್‌ಮೇಲ್ ಮಾಡುತ್ತಿದೆ. ದೇಶದ 140 ಕೋಟಿ ಜನರೂ ನನ್ನ ಪರಿವಾರದವರೇ ಎಂದು ಪ್ರಧಾನಿ ಮೋದಿ ಹೇಳುತ್ತಿರುವಾಗ ಅಲ್ಪಸಂಖ್ಯಾತರೂ ಅದರಲ್ಲಿ ಸೇರುತ್ತಾರೆ. ಹೀಗಿರುವಾಗ ಕೇಂದ್ರ ಸರ್ಕಾರ ಯಾರಿಗೂ ತಾರತಮ್ಯ ಮಾಡುವುದಿಲ್ಲ. ಆದರೆ ಜನರನ್ನು ದಾರಿ ತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ’ ಎಂದು ದೂರಿದರು.

‘2013ರಲ್ಲಿ ಸಿದ್ದರಾಮಯ್ಯ ಸರ್ಕಾರ ಪಿಎಫ್‌ಐ ಜತೆಗೆ ಒಳ ಒಪ್ಪಂದ ಮಾಡಿಕೊಂಡಿತ್ತು. ಅದು ದೇಶದ್ರೋಹಿ ಸಂಘಟನೆ ಎಂಬುದು ಬಳಿಕ ಸಾಬೀತಾಗಿ ನಿಷೇಧವೂ ಆಯಿತು. ಹೀಗಿದ್ದರೂ ರಾಜ್ಯ ಸರ್ಕಾರ ಈಗಲೂ ದೇಶದ್ರೋಹಿ ಸಂಘಟನೆಗಳ ಬಗೆಗೆ ಮೃದು ಧೋರಣೆ ತಳೆದಿದೆ. ವಿಧಾನಸೌಧದೊಳಗೆ ಪಾಕ್‌ ಪರ ಘೋಷಣೆ ಕೂಗಿದರೂ ಅದಕ್ಕೆ ಮೂಲ ಕಾರಣರಾದವರ ವಿರುದ್ಧ ಯಾವುದೇ ಕ್ರಮವೂ ಆಗಿಲ್ಲ’ ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT