ಶನಿವಾರ, ನವೆಂಬರ್ 26, 2022
23 °C

ಅಧ್ಯಾತ್ಮ, ನಿಸರ್ಗ ಪ್ರವಾಸೋದ್ಯಮಕ್ಕೆ ಮಲ್ಲಿಗೆ ನಾಡು

ಕೆ. ಸೋಮಶೇಖರ್‌ Updated:

ಅಕ್ಷರ ಗಾತ್ರ : | |

Prajavani

ಹೂವಿನಹಡಗಲಿ: ಸುಂದರ ಶಿಲ್ಪಕಲಾ ವೈಭವ ಸಾರುವ ಪ್ರಾಚೀನ ದೇವಾಲಯಗಳು, ನಾಡಿನಲ್ಲೇ ವೈಶಿಷ್ಟ್ಯ ಪರಂಪರೆಯ ಸುಕ್ಷೇತ್ರ, ಹಚ್ಚ ಹಸಿರು ಹೊದ್ದಿರುವ ನಿಸರ್ಗ ತಾಣಗಳನ್ನು ಒಡಲಲ್ಲಿರುವ ಮಲ್ಲಿಗೆ ನಾಡು ಅಧ್ಯಾತ್ಮ ಮತ್ತು ನಿಸರ್ಗ ಪ್ರವಾಸೋದ್ಯಮಕ್ಕೆ ಪ್ರಶಸ್ತ್ಯವಾಗಿದೆ.

ಹೂವಿನಹಡಗಲಿ, ಕುರುವತ್ತಿ, ಹಿರೇಹಡಗಲಿ, ಮಾಗಳದ ಪ್ರಾಚೀನ ದೇವಾಲಯಗಳು ಸುಂದರ ಶಿಲ್ಪಕಲೆಗಳಿಂದ ಕಂಗೊಳಿಸುತ್ತಿವೆ. ಮೈಲಾರ ಸುಕ್ಷೇತ್ರ ರಾಜ್ಯ, ಹೊರ ರಾಜ್ಯಗಳಲ್ಲಿ ಪ್ರಸಿದ್ಧವಾಗಿದೆ. ನಾಡಿನ ಭವಿಷ್ಯವಾಣಿ ಎಂದೇ ಪ್ರತೀತಿ ಇರುವ ಮೈಲಾರಲಿಂಗೇಶ್ವರ ಸ್ವಾಮಿ ಕಾರಣಿಕ ನುಡಿ ಆಲಿಸಲು ಲಕ್ಷಾಂತರ ಭಕ್ತ ಪರಿಷೆ ಸೇರುತ್ತದೆ. ಇಲ್ಲಿನ ಮೈಲಾರಲಿಂಗಸ್ವಾಮಿಯ ಧಾರ್ಮಿಕ ಆಚರಣೆ, ಗೊರವ ಪರಂಪರೆ ವೈಶಿಷ್ಟ್ಯತೆಯಿಂದ ಕೂಡಿದೆ. ಪ್ರವಾಸಿ ಕೇಂದ್ರವಾಗುವ ಎಲ್ಲ ಅರ್ಹತೆ ಮೈಲಾರ ಹೊಂದಿದೆ.

ಹಸಿರು ಹೊದ್ದಿರುವ ಬೆಟ್ಟದ ಮಲ್ಲೇಶ್ವರ ಚಾರಣಿಗರ ನೆಚ್ಚಿನ ಸ್ಥಳವಾಗಿದೆ. ಮುಂಜಾನೆ ಮಂಜು ಮುಸುಕಿದ ಹಸಿರು ಬೆಟ್ಟ ಸ್ವರ್ಗದಂತೆ ಕಂಗೊಳಿಸುತ್ತದೆ. ಬೆಟ್ಟದ ಮಧ್ಯ ಭಾಗ ಹಾಗೂ ತುತ್ತ ತುದಿಯಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ಎರಡು ದೇವಾಲಯಗಳಿವೆ. ಕೆಳಗಿರುವ ಮಲ್ಲೇಶ್ವರ ಸ್ವಾಮಿ ದೇಗುಲಕ್ಕೆ ವರ್ಷದುದ್ದಕ್ಕೂ ಭಕ್ತರು ದರ್ಶನಕ್ಕೆ ಬರುತ್ತಾರೆ. ಇಲ್ಲಿ ರಸ್ತೆ, ಮೂಲಸೌಕರ್ಯಗಳ ಸಮಸ್ಯೆ ಇದೆ.

ಅಂಗೂರು ನಡುಗಡ್ಡೆ:

ಅಂಗೂರು ಬಳಿ ಕವಲೊಡೆದಿರುವ ತುಂಗಭದ್ರಾ ನದಿ ಹರಿವಿನಿಂದಲೇ ಪ್ರಾಕೃತಿಕವಾಗಿ ನಡುಗಡ್ಡೆ ನಿರ್ಮಾಣವಾಗಿದೆ. ನೂರಾರು ಎಕರೆ ಭೂ ಪ್ರದೇಶದಲ್ಲಿ ನಾನಾ ಗಿಡಮರಗಳು, ಔಷಧಿ ಸಸ್ಯಗಳು ಸೊಂಪಾಗಿ ಬೆಳೆದಿವೆ. ನವಿಲುಗಳು ಸೇರಿದಂತೆ ನಾನಾ ಬಗೆಯ ವಲಸೆ ಹಕ್ಕಿಗಳು ಇಲ್ಲಿ ನೆಲೆ ಕಂಡುಕೊಂಡಿವೆ. ನದಿಯು ಮೈದುಂಬಿ ಹರಿಯುವಾಗ ತೆಪ್ಪದ ಮೂಲಕ ದಾಟಿ ನಡುಗಡ್ಡೆ ಸೇರುವುದು ರೋಚಕ ಅನುಭವ ನೀಡುತ್ತದೆ.

ಹೀಗೆ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ನೆಚ್ಚಿನ ತಾಣಗಳು ಹೂವಿನಹಡಗಲಿ ತಾಲ್ಲೂಕಿನಲ್ಲಿವೆ. ಇಚ್ಛಾಶಕ್ತಿಯ ಕೊರತೆಯಿಂದ ಇವು ಪ್ರವಾಸಿ ತಾಣಗಳ ಪಟ್ಟಿಗೆ ಸೇರಿಲ್ಲ. ಜಿಲ್ಲೆ ಪ್ರತಿನಿಧಿಸುವವರೇ ದಶಕದಿಂದ ಪ್ರವಾಸೋದ್ಯಮ ಖಾತೆ ಸಚಿವರಾಗಿದ್ದರೂ ಇಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಪಡಿಸುವ ಆಲೋಚನೆ ಮಾಡಿಲ್ಲ. ಸುಕ್ಷೇತ್ರಗಳಲ್ಲಿ ಯಾತ್ರಿ ನಿವಾಸ ಬಿಟ್ಟರೆ ಪ್ರವಾಸೋದ್ಯಮ ಇಲಾಖೆ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು