ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರಮ ಕೈಗೊಳ್ಳದಿದ್ದರೆ ಸಂಸತ್ ತೊರೆಯುವೆ: ಡ್ಯಾನಿಶ್ ಆಲಿ

Published : 22 ಸೆಪ್ಟೆಂಬರ್ 2023, 16:26 IST
Last Updated : 22 ಸೆಪ್ಟೆಂಬರ್ 2023, 16:26 IST
ಫಾಲೋ ಮಾಡಿ
Comments

ನವದೆಹಲಿ: ‘ಲೋಕಸಭೆಯಲ್ಲಿ ನನ್ನ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಿಜೆಪಿಯ ರಮೇಶ್ ಬಿಧೂಢಿ ಮೇಲೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಸಂಸತ್‌ ಸದಸ್ಯತ್ವ ತ್ಯಜಿಸುವ ಬಗ್ಗೆ ಆಲೋಚಿಸುತ್ತೇನೆ’ ಎಂದು ಬಿಎಸ್‌ಪಿ ಸಂಸದ ಡ್ಯಾನಿಶ್ ಆಲಿ ಶುಕ್ರವಾರ  ಹೇಳಿದ್ದಾರೆ. 

‘ದ್ವೇಷ ಭಾಷಣಗಳನ್ನು ಕೇಳಲು ಜನರು ನನ್ನನ್ನು ಆಯ್ಕೆ ಮಾಡಿಲ್ಲ. ಇದು ದ್ವೇಷ ಭಾಷಣಕ್ಕಿಂತ ಕಡಿಮೆಯೇನಿಲ್ಲ. ಸಂಸತ್ತಿನ ಹೊರಗೆ ದ್ವೇಷ ಭಾಷಣ ಮಾಡಲಾಗುತ್ತಿತ್ತು. ಆದರೆ, ಈಗ ಬಿಜೆಪಿ ಸಂಸದರೊಬ್ಬರು ಸದನದಲ್ಲಿ ದ್ವೇಷ ಭಾಷಣ ಮಾಡಿದ್ದಾರೆ’ ಎಂದು ದೂರಿದ್ದಾರೆ. 

ಇಡೀ ದೇಶವೇ ತಲೆತಗ್ಗಿಸುವಂತೆ ಅವರು ಮಾಡಿದ್ದಾರೆ. ಅವರನ್ನು ಅಮಾನತುಗೊಳಿಸಬೇಕು. ಬಿಜೆಪಿಯವರ ಮಾತು ಮತ್ತು ನಡೆ ನಡುವೆ ವ್ಯತ್ಯಾಸವಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸಂಸದರು ಆರ್‌ಎಸ್‌ಎಸ್‌ ಶಾಖೆಗಳಲ್ಲಿ ದ್ವೇಷ ಭಾಷಣಗಳನ್ನು ಕಲಿಯುತ್ತಿದ್ದಾರೆಯೇ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತದ ಹೊಸ ಪ್ರಯೋಗಾಲಯದಲ್ಲಿ ಕಲಿಯುತ್ತಿದ್ದಾರೆಯೇ ಎಂದೂ ಪ್ರಶ್ನಿಸಿದರು.

ಬಿಧೂಢಿ ವಿರುದ್ಧ  ಕ್ರಮ ಕೈಗೊಳ್ಳದಿದ್ದರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ, ‘ಸ್ಪೀಕರ್ ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ ಇದೆ. ಕ್ರಮ ಕೈಗೊಳದಿದ್ದರೆ ದ್ವೇಷ ಭಾಷಣ ಕೇಳಲು ಜನರು ನನ್ನನ್ನು ಸಂಸತ್ತಿಗೆ ಕಳುಹಿಸಿಲ್ಲ. ಹೀಗಾಗಿ, ಭಾರವಾದ ಹೃದಯದಿಂದ ಸಂಸತ್ ಸದಸ್ಯತ್ವ ತ್ಯಜಿಸಲು ಯೋಚಿಸಬಹುದು’ ಎಂದು ಉತ್ತರಿಸಿದರು.

ಬಿಧೂಢಿ ಹೇಳಿಕೆಯಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದ ಅಲಿ ಅವರು ‘ನನಗೆ ಈ ರೀತಿಯಾದರೆ, ಸಾಮಾನ್ಯ ಪ್ರಜೆಯ ಗತಿ ಏನು? ರಾತ್ರಿಯಿಡೀ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ’ ಎಂದು ಎನ್‌ಡಿ ಟಿ.ವಿಗೆ ಸಂದರ್ಶನ ನೀಡುವ  ವೇಳೆ ಕಣ್ಣೀರಿಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT