ಬುಧವಾರ, ಮೇ 18, 2022
23 °C
ವೈದ್ಯರ ಕಾಣಲು ನಸುಕಿನಲ್ಲಿ 4ಕ್ಕೆ ಪಡೆಯಬೇಕು ಟೋಕನ್‌; ಶುಲ್ಕದಲ್ಲೂ ವ್ಯತ್ಯಾಸ

ಮಕ್ಕಳ ಆಸ್ಪತ್ರೆಗಳಿಗೆ ಇಲ್ಲ ನಿಯಂತ್ರಣ; ನಸುಕಿನಲ್ಲಿ 4ಕ್ಕೆ ಪಡೆಯಬೇಕು ಟೋಕನ್

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಹೊಸಪೇಟೆ (ವಿಜಯನಗರ): ಜಿಲ್ಲೆಯ ಬಹುತೇಕ ಮಕ್ಕಳ ಖಾಸಗಿ ಆಸ್ಪತ್ರೆಗಳ ಮೇಲೆ ಜಿಲ್ಲಾ ಆರೋಗ್ಯ ಇಲಾಖೆಯ ನಿಯಂತ್ರಣವೇ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.

ಖಾಸಗಿ ಆಸ್ಪತ್ರೆಗಳ ಕಾರ್ಯವೈಖರಿ ಗಮನಿಸಿದರೆ ಎಂತಹವರಿಗೂ ಇದು ನಿಜ ಅನಿಸದೇ ಇರಲಾರದು. ಖಾಸಗಿ ಆಸ್ಪತ್ರೆಗಳು ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ನಡೆಯುತ್ತಿಲ್ಲ. ಬದಲಾಗಿ ಅವುಗಳು ತಮ್ಮದೇ ಆದ ನಿಯಮ ರಚಿಸಿಕೊಂಡು ಕೆಲಸ ನಿರ್ವಹಿಸುತ್ತಿವೆ.

ವೈದ್ಯರನ್ನು ಕಾಣಬೇಕಾದರೆ ನಸುಕಿನ ಜಾವ ನಾಲ್ಕು ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಂತು ಟೋಕನ್‌ ಪಡೆಯಬೇಕು. ಒಂದುವೇಳೆ ಟೋಕನ್‌ ಸಿಗದಿದ್ದರೆ ಮರುದಿನ ಪುನಃ ಟೋಕನ್‌ಗಾಗಿ ಬರಬೇಕು. ಇನ್ನು, ಆಸ್ಪತ್ರೆಗಳ ಶುಲ್ಕದಲ್ಲೂ ಏಕರೂಪ ಇಲ್ಲ. ಒಂದೊಂದು ಆಸ್ಪತ್ರೆಯವರು ಒಂದೊಂದು ರೀತಿಯ ಶುಲ್ಕ ನಿಗದಿಪಡಿಸಿದ್ದಾರೆ.

ವೈದ್ಯರಿಗೆ ಆಸ್ಪತ್ರೆಗೆ ಬರುವ ನಿರ್ದಿಷ್ಟ ಸಮಯವೂ ಇಲ್ಲ. ಅವರು ಬಂದಾಗ ಮಕ್ಕಳನ್ನು ತೋರಿಸಬೇಕು. ಎಷ್ಟೇ ತುರ್ತು ಇದ್ದರೂ ಕೂಡ ಟೋಕನ್‌ ಇರದೇ ಇದ್ದರೆ ಪ್ರವೇಶ ನೀಡುವುದಿಲ್ಲ. ಆಯಾ ಆಸ್ಪತ್ರೆಯವರು ಸ್ವಂತ ಮೆಡಿಕಲ್‌ಗಳನ್ನು ಇಟ್ಟುಕೊಂಡಿದ್ದು, ಅಲ್ಲೇ ಔಷಧಿ ಖರೀದಿಸಬೇಕು. ಖಾಸಗಿ ಆಸ್ಪತ್ರೆಗಳು ಮಾಡಿಕೊಂಡ ನಿಯಮಗಳಿಂದ ಬಡ, ಕೆಳ ಮಧ್ಯಮ ವರ್ಗದವರು, ಅದರಲ್ಲೂ ಗ್ರಾಮೀಣ ಪ್ರದೇಶದವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಿದ್ದರೂ ಅವರನ್ನು ತಡೆಯುವವರು ಯಾರೂ ಇಲ್ಲ.

ಟೋಕನ್‌ ಕೊಡುವ ಪದ್ದತಿಯಿದ್ದರೂ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಜನಜಾತ್ರೆ ಇರುತ್ತದೆ. ಅಂತರ ಇರುವುದಿಲ್ಲ. ಮಕ್ಕಳನ್ನು ತೋರಿಸಲು ಬಂದವರಿಗೆ ಕನಿಷ್ಠ ಕೂರಲು ಕುರ್ಚಿ ಸಹ ಇಲ್ಲದ ಆಸ್ಪತ್ರೆಗಳಿವೆ. ಕೋವಿಡ್‌ ಇದ್ದರೂ ನಿಯಮಗಳ ಪಾಲನೆ ಆಗುತ್ತಿಲ್ಲ. ನಗರದ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಮಕ್ಕಳ ವೈದ್ಯರಿದ್ದಾರೆ. ಆದರೆ, ಖಾಸಗಿ ಆಸ್ಪತ್ರೆಗಳೇ ಸಾರ್ವಜನಿಕರಿಗೆ ಅಚ್ಚುಮೆಚ್ಚಾಗಿರುವುದು ಕೂಡ ಅವುಗಳಿಗೆ ಬೇಡಿಕೆ ಹೆಚ್ಚಾಗಲು ಮುಖ್ಯ ಕಾರಣ.

‘ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ಮಕ್ಕಳ ವೈದ್ಯರಿದ್ದಾರೆ. ಆದರೆ, ನುರಿತ ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕು. ಎಲ್ಲ ರೋಗಗಳಿಗೂ ಉತ್ತಮ ಚಿಕಿತ್ಸೆ ಸಿಗುತ್ತದೆ ಎಂದು ಭರವಸೆ ಮೂಡಿಸುವ ಕೆಲಸ ಮಾಡಬೇಕು. ಆಗ, ಜನರಲ್ಲಿ ಖಾಸಗಿ ಆಸ್ಪತ್ರೆಗಳ ಬಗೆಗಿನ ವ್ಯಾಮೋಹ ತಗ್ಗಬಹುದು’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮರಡಿ ಜಂಬಯ್ಯ ನಾಯಕ.

‘ಖಾಸಗಿ ಆಸ್ಪತ್ರೆಗಳು ಆಡಿದ್ದೇ ಆಟ ಎಂಬಂತಾಗಿದೆ. ಎಲ್ಲ ಆಸ್ಪತ್ರೆಗಳಿಗೆ ಒಂದೇ ನಿಯಮ ಜಾರಿಗೊಳಿಸಬೇಕು. ಎಲ್ಲ ಕಡೆ ಒಂದೇ ರೀತಿಯ ಶುಲ್ಕ ನಿಗದಿಪಡಿಸಬೇಕು. ಅವೈಜ್ಞಾನಿಕ ಟೋಕನ್‌ ಪದ್ಧತಿ ತೆಗೆಯಬೇಕು. ಮಕ್ಕಳು ದೇವರು ಸಮಾನ. ಅವರಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿ ಪ್ರಾಣ ಉಳಿಸುವ ಕೆಲಸವಾಗಬೇಕು. ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳಿಗೆ ತುರ್ತಾಗಿ ಚಿಕಿತ್ಸೆ ಸಿಗಬೇಕು. ಟೋಕನ್‌ ಪಡೆದು, ಚಿಕಿತ್ಸೆಗೆ ಕಾದು ಕೂರಬೇಕಾದ ವ್ಯವಸ್ಥೆ ತೊಲಗಬೇಕು’ ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು