ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸಪೇಟೆ: ₹308 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು

ಗಣಿಬಾಧಿತ ಹೊಸಪೇಟೆ ನಗರ– ಕೆಎಂಇಆರ್‌ಸಿ ನಿಧಿ ಬಳಕೆಗೆ ಒಪ್ಪಿಗೆ
Published : 7 ಆಗಸ್ಟ್ 2024, 5:36 IST
Last Updated : 7 ಆಗಸ್ಟ್ 2024, 5:36 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಗೆ 2055ರವರೆಗೆ ಕುಡಿಯುವ ನೀರಿನ ಯಾವುದೇ ಸಮಸ್ಯೆ ಬರದಿರುವಂತೆ ನೋಡಿಕೊಳ್ಳುವ ಸಲುವಾಗಿ ಸಿದ್ಧಪಡಿಸಲಾದ ₹308.93 ಕೋಟಿ ವೆಚ್ಚದ ಸಮಗ್ರ ಯೋಜನೆಗೆ ಕರ್ನಾಟಕ ಗಣಿಗಾರಿಕೆ ಪ್ರದೇಶ ಪರಿಸರ ಪುನಶ್ಚೇತನ ನಿಗಮದ (ಕೆಎಂಇಆರ್‌ಸಿ) ಉನ್ನತಾಧಿಕಾರ ಸಮಿತಿ ಒಪ್ಪಿಗೆ ಸೂಚಿಸಿದೆ.

ತುಂಗಭದ್ರಾ ಜಲಾಶಯದಲ್ಲಿ ಡೆಡ್‌ ಸ್ಟೋರೇಜ್‌ನಿಂದಲೂ ನೀರು ಬಳಸಿಕೊಳ್ಳುವ ನಿಟ್ಟಿನಲ್ಲಿ, ಪಾವಗಡ ಯೋಜನೆಯ ಜಾಕ್ವೆಲ್‌ ಸಮೀಪದಲ್ಲೇ ಪ್ರತ್ಯೇಕ ಜಾಕ್ವೆಲ್‌ ನಿರ್ಮಿಸಿ, ಹೆದ್ದಾರಿ ಬದಿಯ ಟಿ.ಬಿ.ಡ್ಯಾಂ ಎರಡನೇ ಶುದ್ಧೀಕರಣ ಘಟಕದ ಸಮೀಪದ ಗುಡ್ಡದ ಮೇಲ್ಭಾಗದಲ್ಲಿ ಬೃಹತ್ ಟ್ಯಾಂಕ್‌ ನಿರ್ಮಿಸಿ, ಅಲ್ಲೇ ಇನ್ನೊಂದು ಶುದ್ಧೀಕರಣ ಘಟಕ ಸ್ಥಾಪಿಸಿ ಗುರುತ್ವಾಕರ್ಷಣೆ ಬಲದಲ್ಲೇ ನಗರದ ಎಲ್ಲಾ ಓವರ್‌ಹೆಡ್ ಟ್ಯಾಂಕ್‌ಗಳಿಗೆ ನೀರು ಹರಿಸುವುದು ಈ ಯೋಜನೆಯ ಸ್ಥೂಲ ರೂಪ. 

‘ನಾನು ಈ ಹಿಂದೆ ನಗರಸಭೆ ಆಯುಕ್ತನಾಗಿದ್ದ ವೇಳೆ ವಿವರವಾದ ಯೋಜನಾ ವರದಿಯನ್ನು ಕೆಎಂಇಆರ್‌ಸಿಗೆ ಕಳುಹಿಸಿಕೊಟ್ಟಿದ್ದೆ. ಒಟ್ಟು ₹308.93 ಕೋಟಿ ವೆಚ್ಚದ ಪೈಕಿ ಶೇ 80ರಷ್ಟು ವೆಚ್ಚಕ್ಕೆ (₹250 ಕೋಟಿ) ಅನುಮತಿ ನೀಡಬಹುದೆಂಬ ನಿರೀಕ್ಷೆ ಇತ್ತು. ಆದರೆ ಪೂರ್ಣ ಯೋಜನಾ ವೆಚ್ಚಕ್ಕೂ ಅನುಮೋದನೆ ಸಿಕ್ಕಿದೆ. ಹೀಗಾಗಿ ಯೋಜನೆಯ ಸಮೀಕ್ಷೆ ಕಾರ್ಯ ಶೀಘ್ರ ಆರಂಭವಾಗಲಿದೆ. ಅನುಷ್ಠಾನ ಸಂಸ್ಥೆಯಾದ ಕೆಯುಐಡಿಎಫ್‌ಸಿ ನಾಲ್ಕು ತಿಂಗಳೊಳಗೆ ಟೆಂಡರ್ ಕರೆಯಲಿದ್ದು, ಎರಡು ವರ್ಷದೊಳಗೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದಲ್ಲಿ ಸದ್ಯ 2.91 ಲಕ್ಷ ಜನಸಂಖ್ಯೆ ಇದೆ. 2055ರ ವೇಳೆಗೆ ಈ ಜನಸಂಖ್ಯೆ 5.50 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಅದನ್ನೆಲ್ಲ ಲೆಕ್ಕ ಹಾಕಿಕೊಂಡು ಈ ಯೋಜನೆ ರೂಪುಗೊಂಡಿದೆ. ಟಿ.ಬಿ.ಡ್ಯಾಂ ಬಳಿಯ ಗುಡ್ಡದಲ್ಲಿ 10 ಎಕರೆ ಕಂದಾಯ ಭೂಮಿ ಇದ್ದು, ಅಲ್ಲೇ ಟ್ಯಾಂಕ್‌ ಮತ್ತು ಜಲಶುದ್ಧೀಕರಣ ಘಟಕ ಸ್ಥಾಪನೆಗೊಳ್ಳಲಿದೆ. ಅಲ್ಲಿಂದ ಪಂಪ್‌ ಮಾಡದೆಯೇ ಸರಾಗವಾಗಿ ನೀರು ಹರಿದು ಎಲ್ಲಾ ಟ್ಯಾಂಕ್‌ಗಳಿಗೆ ನೀರು ತುಂಬಿಸುವುದು ಸಾಧ್ಯವಿದೆ. ಹೀಗಾಗಿ ಆ ಜಾಗವನ್ನು ಆಯ್ಕೆ ಮಾಡಲಾಗಿದೆ. ಮನೆ ಮನೆಗೆ ನೀರು ಪೂರೈಸುವ ವ್ಯವಸ್ಥೆ ಸುಧಾರಿಸುವ ಯೋಜನೆ ಇದರಲ್ಲಿ ಇಲ್ಲ’ ಎಂದು ಮಾಹಿತಿ ನೀಡಿದರು.

₹10 ಕೋಟಿಯಲ್ಲಿ ಹಾಲಿ ಯೋಜನೆಗೂ ಬಲ

‘ನಗರದ ಶೇ 70ರಷ್ಟು ಭಾಗಕ್ಕೆ ನೀರು ಪೂರೈಸುತ್ತಿರುವ ಟಿ.ಬಿ.ಡ್ಯಾಂ ಪ್ರದೇಶದಲ್ಲಿರುವ ಎರಡನೇ ಜಲ ಶುದ್ಧೀಕರಣ ಘಟಕದ ಸಾಮರ್ಥ್ಯ ವೃದ್ಧಿಸುವ ಕೆಲಸ ಡಿಎಂಎಫ್‌ ನಿಧಿಯ ₹10 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ಒಂದು ಶುದ್ಧೀಕರಣ ಸ್ಥಾವರದ ಪುನಶ್ಚೇತನ ಹಾಗೂ ತುಂಗಭದ್ರಾ ಜಲಾಶಯದಿಂದ ಬಂದಿರುವ ಪೈಪ್‌ ಅನ್ನು ಬದಲಿಸಿ ಹೊಸ ಪೈಪ್ ಅಳವಡಿಸುವುದು ಈ ಯೋಜನೆಯಲ್ಲಿ ಸೇರಿದೆ. ಟಿ.ಬಿ.ಡ್ಯಾಂ (27 ಎಂಎಲ್‌ಡಿ) ಮತ್ತು ಚಿತ್ತವಾಡ್ಗಿ (11 ಎಂಎಲ್‌ಡಿ) ಜಲಶುದ್ಧೀಕರಣ ಕೇಂದ್ರದಿಂದ 38 ಎಂಎಲ್‌ಡಿ ನೀರು ಪೂರೈಕೆಯಾಗಬೇಕಿದ್ದರೂ ಸದ್ಯ 32 ಎಂಎಲ್‌ಡಿಯಷ್ಟೇ ಪೂರೈಕೆಯಾಗುತ್ತಿದೆ. ಇದನ್ನು 38 ಎಂಎಲ್‌ಡಿಗೆ ಹೆಚ್ಚಿಸುವ ಸಲುವಾಗಿ ಈ ಪುನಶ್ಚೇತನ ಕಾರ್ಯ ನಡೆಯುತ್ತಿದೆ’ ಎಂದು ಮನೋಹರ್ ಮಾಹಿತಿ ನೀಡಿದರು.

ಎಲ್ಲೆಲ್ಲಿ ಹೊಸ ಟ್ಯಾಂಕ್‌ಗಳು?

ತಲಾ 10 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಆರು ಮತ್ತು 5 ಲಕ್ಷ ಲೀಟರ್ ಸಂಗ್ರಹ  ಸಾಮರ್ಥ್ಯದ ನಾಲ್ಕು ಓವರ್‌ಹೆಡ್ ಟ್ಯಾಂಕ್‌ಗಳು ನಿರ್ಮಾಣಗೊಳ್ಳಲಿವೆ. ಆಶ್ರಯ ಕಾಲೋನಿ ಕಾರಿಗನೂರು ವಿವೇಕಾನಂದ ಬಡಾವಣೆ ಮಲಪನಗುಡಿ ರಸ್ತೆ ಪಿ.ಕೆ.ಹಳ್ಳಿ ರಸ್ತೆ ಮತ್ತು ಹೊಸೂರು ರಸ್ತೆಗಳಲ್ಲಿ 10 ಲಕ್ಷ ಲೀಟರ್ ಟ್ಯಾಂಕ್‌ ಹಾಗೂ ಕೆಇಬಿ ಕ್ವಾರ್ಟರ್ಸ್‌ ಅನಂತಶಯನಗುಡಿ ಇಂಗಳಗಿ ರಸ್ತೆ ಮತ್ತು ನಾಗೇನಹಳ್ಳಿಗಳಲ್ಲಿ 5 ಲಕ್ಷ ಲೀಟರ್‌ ಟ್ಯಾಂಕ್‌ ನಿರ್ಮಾಣಗೊಳ್ಳಲಿವೆ.

ನೀರಿನ ಮೂಲ ಗಟ್ಟಿಗೊಳಿಸುವುದೇ ಮುಖ್ಯ ವಿಚಾರ. ಮನೆ ಮನೆಗೆ ನೀರು ಪೂರೈಕ ಸಮಸ್ಯೆಗಳನ್ನು ಸ್ಥಳೀಯ ನಿದಿಯಿಂದಲೇ ನಿಭಾಯಿಸಬಹುದು.
ಮನೋಹರ್‌, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ
ತುಂಗಭದ್ರಾ ಸೆರಗಲ್ಲೇ ಇರುವ ಹೊಸಪೇಟೆ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಈ ಯೋಜನೆ ರೂಪುಗೊಂಡಿದೆ.
ಎಂ.ಎಸ್.ದಿವಾಕರ್, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT