ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಿಬೊಮ್ಮನಹಳ್ಳಿ: ಅಂತರ್ಜಲ ಹೆಚ್ಚಿಸಿದ ಕೃಷಿ ಹೊಂಡ

Last Updated 21 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ಪಾತಾಳಕ್ಕೆ ಕುಸಿದಿದ್ದ ಅಂತರ್ಜಲ ಮಟ್ಟ ಹೆಚ್ಚಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ತಾಲ್ಲೂಕಿನಲ್ಲಿ ದಾಖಲೆ ಸಂಖ್ಯೆಯಲ್ಲಿ ಕೃಷಿ ಹೊಂಡ, ಬದು ನಿರ್ಮಿಸಿ, ನೀರು ಇಂಗಿಸುವ ಕೆಲಸ ಮಾಡಿದ್ದರಿಂದ ಇದು ಸಾಧ್ಯವಾಗಿದೆ.

ಐದು ವರ್ಷಗಳ ಹಿಂದೆ 800 ರಿಂದ 1 ಸಾವಿರ ಅಡಿ ಆಳ ಕೊರೆಸಿದರೂ ಕೊಳವೆಬಾವಿಗಳಲ್ಲಿ ನೀರು ಬರುತ್ತಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಕಡು ಬೇಸಿಗೆಯಲ್ಲೂ ಕೊಳವೆಬಾವಿಗಳಲ್ಲಿ ನೀರು ಚಿಮ್ಮುತ್ತಿದೆ. ಹಲವೆಡೆ ರೈತರು ವರ್ಷಕ್ಕೆ ಎರಡು ಬೆಳೆ ಬೆಳೆಸುತ್ತಿದ್ದಾರೆ.

ರಾಜ್ಯದಲ್ಲಿಯೇ ಅತಿ ಹೆಚ್ಚು ಬದುಗಳನ್ನು ನಿರ್ಮಿಸಿದ ಕೀರ್ತಿ ತಾಲ್ಲೂಕಿಗೆ ಇದೆ. 1,575 ಬದು, 135 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಇದರ ಪರಿಣಾಮ ಕೊಳವೆಬಾವಿಗಳ ಅಂತರ್ಜಲ ಮರುಪೂರಣಗೊಂಡಿದೆ. ಕೂಲಿಕಾರರಿಗೆ ಉದ್ಯೋಗವೂ ದೊರೆತಿದೆ. ಚೆಕ್ ಡ್ಯಾಂ, ಗೋಕಟ್ಟೆ, ಕಲ್ಯಾಣಿ, ಕುಂಟೆ ಹಾಗೂ ನಾಲಾಗಳಲ್ಲಿ ಹೂಳು ತೆಗೆದು ನೀರು ಸಂಗ್ರಹವಾಗುವಂತೆ ಮಾಡಲಾಗಿದೆ.

ತಾಲ್ಲೂಕಿನ ಬ್ಯಾಸಿಗಿದೇರಿ, ಬಾಚಿಗೊಂಡನಹಳ್ಳಿ, ಮೋರಿಗೇರಿ, ಸೊನ್ನ ಗ್ರಾಮಗಳಲ್ಲಿ ಅತಿ ಹೆಚ್ಚು ಬದು, ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗಿದೆ. ಹನಸಿ ಕೆರೆ, ಅಂಕಸಮುದ್ರ ಪಕ್ಷಿಧಾಮದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಆರ್ಕಿಡ್ ಸಸ್ಯ ನೆಡಲಾಗಿದೆ.

ಹೋದ ವರ್ಷ ನಿರ್ಮಿಸಿದ್ದ ಎಲ್ಲ ಕೃಷಿ ಹೊಂಡಗಳು ಭರ್ತಿಯಾಗಿವೆ. ಒಟ್ಟಾರೆಯಾಗಿ ತಾಲ್ಲೂಕಿನಲ್ಲಿ ಕೃಷಿ ಹೊಂಡಗಳು ರೈತರಿಗೆ ವರದಾನವಾಗಿವೆ. ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದ್ದ ಮೋರಿಗೇರಿ ಮತ್ತು ಸೊನ್ನ ಗ್ರಾಮಗಳಲ್ಲಿ ಸಮಸ್ಯೆ ಬಗೆಹರಿದಿದೆ. ಇದನ್ನು ಗ್ರಾಮಸ್ಥರು ಸಹ ಒಪ್ಪುತ್ತಾರೆ.

‘ಬದು, ಕೃಷಿ ಹೊಂಡ ನಿರ್ಮಿಸಿರುವುದರಿಂದ ನೀರಿನ ಮಟ್ಟ ಸುಧಾರಿಸಿದೆ. ವಿಫಲಗೊಂಡಿದ್ದ ಕೊಳವೆಬಾವಿಗಳಲ್ಲಿ ನೀರು ಬಂದಿದೆ. ಮಣ್ಣಿನ ಸಂರಕ್ಷಣೆ ಆಗಿ, ಜಮೀನಿನ ಫಲವತ್ತತೆ ಹೆಚ್ಚಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಲಸಿದ್ದಪ್ಪ ಪೂಜೇರಿ ತಿಳಿಸಿದರು.

‘ಅಂತರ್ಜಲ ಹೆಚ್ಚಿಸಲು ತಾಲ್ಲೂಕಿನಲ್ಲಿ ಬದು ನಿರ್ಮಾಣದಲ್ಲಿ ಗುರಿ ಮೀರಿ ಸಾಧನೆ ಮಾಡಲಾಗಿದೆ. ಜನಪ್ರತಿನಿಧಿಗಳು, ಇಲಾಖೆಯ ಮೇಲಧಿಕಾರಿಗಳು ಉತ್ತಮ ಬೆಂಬಲ ನೀಡಿದ್ದಾರೆ’ ಎನ್ನುತ್ತಾರೆ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಕೆ.ಎಸ್‌. ಮಲ್ಲನಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT