ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೂವಿನಹಡಗಲಿ: ‘ಅನ್ನದಾತ’ರ ರಸ್ತೆಯ ಶೋಚನೀಯ ಸ್ಥಿತಿ

ಮಸಲವಾಡ ಒಳ ದಾರಿಯಲ್ಲಿ ರೈತರ ಪರದಾಟ: ‘ಬಂಡಿದಾರಿ’ಯಲ್ಲಿ ಯಶಸ್ವಿಯಾಗಿ ಸಾಗಿ ಬಂದವನೇ ಭಂಡ
ಕೆ. ಸೋಮಶೇಖರ
Published 31 ಆಗಸ್ಟ್ 2024, 6:20 IST
Last Updated 31 ಆಗಸ್ಟ್ 2024, 6:20 IST
ಅಕ್ಷರ ಗಾತ್ರ

ಹೂವಿನಹಡಗಲಿ: ತಾಲ್ಲೂಕಿನ ನಾಗತಿಬಸಾಪುರ ಮತ್ತು ಮಾನ್ಯರಮಸಲವಾಡ ಗ್ರಾಮದ ಬಹುತೇಕ ರೈತರು ಕೃಷಿಗಾಗಿ ಅವಲಂಬಿಸಿರುವ ‘ಮಸಲವಾಡ ಒಳದಾರಿ’ ಈವರೆಗೆ ಒಮ್ಮೆಯೂ ಅಭಿವೃದ್ಧಿ ಕಂಡಿಲ್ಲ. ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಮಾರ್ಪಡುವ ಈ ದಾರಿಯಲ್ಲಿ ರೈತರು ಎತ್ತು, ಗಳೇವುಗಳೊಂದಿಗೆ ತೆರಳಲು ಪರದಾಡುವಂತಾಗಿದೆ.

ನಾಗತಿಬಸಾಪುರದಿಂದ ಮಾನ್ಯರಮಸಲವಾಡಕ್ಕೆ ನೇರ ಸಂಪರ್ಕ ಕಲ್ಪಿಸುವ 6 ಕಿ.ಮೀ. ಉದ್ದದ ಈ ಒಳದಾರಿ ಸಂಪೂರ್ಣ ಹದಗೆಟ್ಟಿದೆ. ಎರಡೂ ಗ್ರಾಮಗಳ ರೈತರು ಹೊಲ, ಗದ್ದೆಗಳಿಗೆ ತೆರಳಲು ಈ ದಾರಿ ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ಎತ್ತಿನ ಬಂಡಿ, ಟ್ರ್ಯಾಕ್ಟರ್ ಚಕ್ರಗಳು ಕೆಸರಲ್ಲಿ ಸಿಲುಕಿ ರೈತರು ನಿತ್ಯ ಗೋಳು ಅನುಭವಿಸುತ್ತಿದ್ದು, ಹದಗೆಟ್ಟ ಈ ದಾರಿ ಕೃಷಿ ಚಟುವಟಿಕೆಗೆ ಅಡ್ಡಿಯಾಗಿ ಪರಿಣಮಿಸಿದೆ.

‘ಬಿತ್ತನೆ ವೇಳೆ ಹೊಲಗಳಿಗೆ ಬೀಜ, ಗೊಬ್ಬರ ಸಾಗಿಸಲು ಮತ್ತು ಫಸಲು ಕಟಾವು ಮಾಡಿಕೊಂಡು ಮನೆಗೆ ತರುವಾಗಲಂತೂ ತೀವ್ರ ಕಷ್ಟ ಅನುಭವಿಸುತ್ತೇವೆ. ಸಕಾಲದಲ್ಲಿ ಕೃಷಿ ಚಟುವಟಿಕೆ ನಡೆಸಲಾಗದೇ ಬೆಳೆಗಳ ಇಳುವರಿ ಕುಂಠಿತವಾಗಿ ನಷ್ಟ ಅನುಭವಿಸುವಂತಾಗಿದೆ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

‘ಈ ಕುರಿತು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ದಶಕದಿಂದ ಮನವಿ ಸಲ್ಲಿಸುತ್ತ ಬಂದಿದ್ದರೂ ಪ್ರಯೋಜನವಾಗಿಲ್ಲ. ಇಂತಹ ಮಾರ್ಗಗಳ ಅಭಿವೃದ್ಧಿ ಸಲುವಾಗಿ ‘ನಮ್ಮ ಹೊಲ, ನಮ್ಮ ದಾರಿ’ ಯೋಜನೆ ಇದ್ದರೂ ಅದು ಘೋಷಣೆಗೆ ಸೀಮಿತ ಎಂಬಂತಾಗಿದೆ. ಅಧಿಕಾರಿಗಳಿಗೆ ಇಂತಹ ಹದಗೆಟ್ಟ ರಸ್ತೆಗಳು ಕಾಣಿಸುವುದೇ ಇಲ್ಲ. ಬರೀ ಸಬೂಬು ಹೇಳುತ್ತ ಸರ್ಕಾರದ ಕಡೆ ಬೊಟ್ಟು ತೋರಿಸುತ್ತಿದ್ದಾರೆ’ ಎಂದು ರೈತ ಸಜ್ಜಿ ಶರಣಪ್ಪ ದೂರಿದರು.

‘ಕೃಷಿ ಉತ್ಪಾದನೆ ಹೆಚ್ಚಿಸಲು ಸರ್ಕಾರ ಪ್ರೋತ್ಸಾಹದಾಯಕ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ಇಲ್ಲಿ ಕೃಷಿಗೆ ತೊಡಕಾಗಿರುವ ಬಂಡಿದಾರಿಯ ಅಭಿವೃದ್ಧಿಗೆ ಹಿಂದೇಟು ಹಾಕುತ್ತಿರುವುದು ಯಾವ ನ್ಯಾಯ’ ಎಂದು ರೈತರು ಪ್ರಶ್ನಿಸಿದ್ದಾರೆ.

ರೈತರಿಗೆ ಉಪಯುಕ್ತವಾಗಿರುವ ಈ ಒಳದಾರಿಯನ್ನು ‘ನರೇಗಾ’ ಇಲ್ಲವೇ ‘ನಮ್ಮ ಹೊಲ, ನಮ್ಮ ದಾರಿ’ ಯೋಜನೆಯಡಿ ಅಭಿವೃದ್ಧಿಪಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಾಗತಿಬಸಾಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನಾಗತಿಬಸಾಪುರ–ಮಸಲವಾಡ ಒಳ ದಾರಿ ಕೆಸರು ಗದ್ದೆಯಾಗಿದೆ
ನಾಗತಿಬಸಾಪುರ–ಮಸಲವಾಡ ಒಳ ದಾರಿ ಕೆಸರು ಗದ್ದೆಯಾಗಿದೆ
ಈ ರಸ್ತೆ ಇಲಾಖೆಗೆ ಸೇರಿದ್ದರೆ ಅಭಿವೃದ್ಧಿಪಡಿಸಲಾಗುವುದು. ಬಂಡಿ ದಾರಿ ಆಗಿದ್ದಲ್ಲಿ ‘ನರೇಗಾ’ದಲ್ಲಿ ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ರೂಪಿಸುತ್ತೇವೆ
ಎಂ. ಉಮೇಶ್ ತಾ.ಪಂ. ಇಒ ಹೂವಿನಹಡಗಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT