ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಟ್ಟೆಗೆ ಬರಲಾಗದವರಿಗಷ್ಟೇ ಅಂಚೆ ಮತದಾನ: ಚುನಾವಣಾಧಿಕಾರಿ ಸಿದ್ದರಾಮೇಶ್ವರ

‘ಮತದಾನದ ಹಬ್ಬ’ದಲ್ಲಿ ಮತದಾರರು ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಸೂಚನೆ
Last Updated 3 ಏಪ್ರಿಲ್ 2023, 13:29 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಅನಿವಾರ್ಯ ಕಾರಣಗಳಿಂದ ಮತಗಟ್ಟೆಗಳಿಗೆ ಬರಲು ಸಾಧ್ಯವಾಗದವರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದು ಉಪವಿಭಾಗಾಧಿಕಾರಿಯೂ ಆದ ವಿಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಿದ್ದರಾಮೇಶ್ವರ ತಿಳಿಸಿದರು.

ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಮತಗಟ್ಟೆ ಅಧಿಕಾರಿಗಳು, ಮೇಲ್ವಿಚಾರಕರು ಹಾಗೂ ಸೆಕ್ಟೊರಲ್ ಅಧಿಕಾರಿಗಳಿಗೆ ಅಂಚೆ ಮತಪತ್ರ ಪ್ರಕ್ರಿಯೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

80 ವರ್ಷ ಮೇಲಿನವರಿಗೆ, ಅಂಗವಿಕಲರಿಗೆ ಹಾಗೂ ಕೋವಿಡ್‌ನಿಂದ ಬಾಧಿತರಾದವರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಮತದಾರರು ಮತಗಟ್ಟೆಗೆ ಹೋಗಿ ಹಕ್ಕು ಚಲಾಯಿಸಿದಾಗ ‘ಮತದಾನ ಹಬ್ಬ’ ಎನಿಸಿಕೊಳ್ಳುತ್ತದೆ. ಸಾಧ್ಯವಾದಷ್ಟು ಮತಕೇಂದ್ರಗಳಿಗೆ ಹೋಗಿ ಮತದಾನ ಮಾಡಲು ಜನರನ್ನು ಪ್ರೇರೇಪಿಸಬೇಕು. ಮತಕೇಂದ್ರಕ್ಕೆ ಬರಲು ಆಗದವರಿಗೆ ಅಂಚೆ ಮತಪತ್ರ ಕಡ್ಡಾಯವಾಗಿ ವಿತರಣೆ ಮಾಡಿ ಮತದಾನ ಮಾಡುವ ಕ್ರಮಗಳನ್ನು ವಿವರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

80 ವರ್ಷ ಮೇಲಿನವರು ಹಾಗೂ ಶೇ 40ರಷ್ಟು ಅಂಗವೈಕಲ್ಯ ಹೊಂದಿದವರಿಗೆ ಮತದಾರರ ವಿವರಗಳನ್ನು ಒಳಗೊಂಡ ಪಟ್ಟಿಯನ್ನು ನೀಡಲಾಗಿದೆ. ಅಂಚೆ ಮತದಾರರ ಮನೆಗೆ ತೆರಳಿ ಅಂಚೆ ಮತಪತ್ರಕ್ಕೆ ಸಂಬಂಧಿಸಿದ ನಮೂನೆ 12ಡಿ ವಿತರಿಸಿದ 2 ದಿನಗಳ ಒಳಗೆ ಅರ್ಹ ಮತದಾರರು ಅರ್ಜಿ ಭರ್ತಿ ಮಾಡಿ ಸಂಬಂಧಿಸಿದ ಸೂಪರ್‌ವೈಸರ್‌ಗೆ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದರು.

ಚುನಾವಣೆಗೆ ಅಧಿಸೂಚನೆ ಪ್ರಕಟವಾಗುವ ಒಂದು ದಿನದ ಮುಂಚೆ ಅಂಚೆ ಪತ್ರಕ್ಕೆ ಅರ್ಜಿ ಸಲ್ಲಿಸಬೇಕಾಗಿರುವ ಕಾರಣ ಅಧಿಕಾರಿಗಳನ್ನು ಈ ಕೆಲಸವನ್ನು ಬೇಗ ಮುಗಿಸಬೇಕು. ಚುನಾವಣಾ ಸಿಬ್ಬಂದಿ ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೆ ನಿಗದಿತ ಅವಧಿಯೊಳಗೆ ಅರ್ಜಿಗಳನ್ನು ಮತದಾರರಿಗೆ ನೀಡಿ, ಅಂಚೆ ಮತದಾನಕ್ಕೆ ಇಚ್ಛಿಸುವವರಿಂದ ಅರ್ಜಿ ಪಡೆದು ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು. ಒಮ್ಮೆ ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸಿದಲ್ಲಿ ಮತಕೇಂದ್ರಕ್ಕೆ ಬಂದು ಮತದಾನ ಮಾಡಲು ಚುನಾವಣಾ ಅಯೋಗವು ಅವಕಾಶ ಕಲ್ಪಿಸುವುದಿಲ್ಲ. ಈ ವಿಷಯವನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.

ಉಪನ್ಯಾಸಕರಾದ ಟಿ.ಎಚ್‌. ಬಸವರಾಜ, ಸೋಮಪ್ಪ ಬಡಿಗೇರ್ ಅವರು ಅಂಚೆ ಮತಪತ್ರ, ಅಂಚೆ ಮತದಾನದ ಕುರಿತು ಮಾಹಿತಿ ನೀಡಿದರು. ಸಹಾಯಕ ಚುನಾವಣಾಧಿಕಾರಿ ವಿಶ್ವಜೀತ್ ಮೆಹ್ತಾ, ನಗರಸಭೆ ಪೌರಾಯುಕ್ತ ಮನೋಹರ್ ನಾಗರಾಜ, ನಾಗೇಶ್, ವೆಂಕಟೇಶ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT