ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ. 2ರಿಂದ ಐತಿಹಾಸಿಕ ಹಂಪಿ ಉತ್ಸವ: ಶಾಸ್ತ್ರೀಯ ಸಂಗೀತ, ನೃತ್ಯಗಳಿಗೆ ಆದ್ಯತೆ

Published 8 ಜನವರಿ 2024, 12:28 IST
Last Updated 8 ಜನವರಿ 2024, 12:28 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಫೆಬ್ರುವರಿ 2ರಿಂದ ಮೂರು ದಿನಗಳ ಕಾಲ ನಡೆಯಲಿರುವ ಐತಿಹಾಸಿಕ ಹಂಪಿ ಉತ್ಸವವನ್ನು ಜನಮಾನಸದ ನಿರೀಕ್ಷೆಯಂತೆ ನಡೆಸಲು ಅಗತ್ಯ ಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಿದ್ದೇವೆ. ಸ್ಥಳೀಯ ಕಲಾವಿದರಿಗೆ ಆದ್ಯತೆ ನಿಡುವುದರ ಜತೆಗೆ ಶಾಸ್ತ್ರೀಯ ನೃತ್ಯ, ಸಂಗೀತಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಶಾಸಕ ಎಚ್‌.ಆರ್.ಗವಿಯಪ್ಪ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಬರಗಾಲ ತೀವ್ರವಾಗಿದ್ದರೂ, ಹಂಪಿ ಉತ್ಸವದ ವೈಭವಕ್ಕೆ ಒಂದಿಷ್ಟು ಚ್ಯುತಿ ಬರಬಾರದು ಎಂದು ಸ್ವತಃ ಮುಖ್ಯಮಂತ್ರಿ ಅವರೇ ತಿಳಿಸಿದ್ದಾರೆ. ಸ್ಥಳೀಯ ಕಲಾವಿದರಿಗೆ ಸಿಗುವಂತಹ ಒಂದು ಅವಕಾಶವನ್ನು ಕಸಿದುಕೊಳ್ಳಬಾರದು ಎಂಬ ಕಾರಣಕ್ಕೆ ಕಳೆದ ವರ್ಷ ನಡೆದ ರೀತಿಯಲ್ಲೇ ವೈಭವಯುತವಾಗಿ ಹಂಪಿ ಉತ್ಸವ ಆಯೋಜಿಸಲಾಗುವುದು ಎಂದರು.

ಮುಖ್ಯವಾಗಿ ಹಂಪಿ ವಿರುಪಾಕ್ಷೇಶ್ವರನ ಸನ್ನಿಧಿಯಲ್ಲಿ ನಡೆಯುವ ಕಾರ್ಯಕ್ರಮ ಇದಾಗಿದ್ದು, ಭರತ ನಾಟ್ಯ, ಶಾಸ್ತ್ರೀಯ ಸಂಗೀತ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ಕೊಟ್ಟು ಜನರಲ್ಲಿ ಭಕ್ತಿ, ಶಾಂತಿ ಭಾವವನ್ನು ಪ್ರೇರೇಪಿಸುವ ಹಾಗೆ ವ್ಯವಸ್ಥೆ ಮಾಡಲಾಗುವುದು. ಮೂರು ಬೃಹತ್ ವೇದಿಕೆಗಳು, ಧ್ವನಿ ಬೆಳಕು ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪ್ರತಿ ವರ್ಷ ನಡೆಸುವ ಅಡುಗೆ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಕುಸ್ತಿ, ಕಲ್ಲು ಎತ್ತುವ ಸ್ಪರ್ಧೆ ಸೇರಿದಂತೆ ಎಲ್ಲಾ ಬಗೆಯ ಸ್ಪರ್ಧೆಗಳಿಗೆ ಉತ್ಸವದಲ್ಲಿ ಅವಕಾಶವಿರಲಿದೆ ಎಂದರು.

ಜನಾಕರ್ಷಣೆಗಾಗಿ ವಿಶೇಷ ಕಾರ್ಯಕ್ರಮ: ಐತಿಹಾಸಿಕ ಉತ್ಸವಕ್ಕೆ ಸ್ವಯಂ ಪ್ರೇರಣೆಯಿಂದ ಆಗಮಿಸಲು ಇಚ್ಚಿಸುವ ಖ್ಯಾತ ಗಾಯಕರನ್ನು ಕರೆತರುವ ಯೋಜನೆ ಇದೆ. ರೈತರಿಗಾಗಿ ಕೃಷಿ ಪ್ರದರ್ಶನ, ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ, ಮಹಿಳೆಯರಿಗಾಗಿ ಶಾಸ್ತ್ರೀಯ ಸಂಗೀತ ಸೇರಿದಂತೆ ನಾನಾ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ನವೆಂಬರ್‌ನಲ್ಲೇ ಮೊದಲ ವಾರ ಹಂಪಿ ಉತ್ಸವ ನಡೆಸುವ ಸಂಪ್ರದಾಯವನ್ನು ದಿವಂಗತ ಎಂ.ಪಿ.ಪ್ರಕಾಶ್‌ ಅವರು ಆರಂಭಿಸಿದ್ದರು. ಮತ್ತೆ ಅದೇ ಸಮಯದಲ್ಲೇ ಉತ್ಸವ ಆಚರಿಸಬೇಕೆಂಬ ಒತ್ತಾಯ ಇದೆ. ಈ ಬಾರಿ ಭೀಕರ ಬರಗಾಲದ ಕಾರಣ ಉತ್ಸವವನ್ನು ಕಳೆದ ವರ್ಷದಂತೆ ಫೆಬ್ರುವರಿ ಮೊದಲ ವಾರ ನಡೆಸಲು ತೀರ್ಮಾನಿಸಲಾಯಿತು. ನವೆಂಬರ್ 2ರಂದು ಇಲ್ಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಅವರು ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸೂಚಿಸಿದ್ದರಿಂದಲೇ ಇಂದು ತುಂಗಭದ್ರಾ ಸಹಿತ ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ಕುಡಿಯುವ ನೀರು ಲಭ್ಯ ಇರುವಂತಾಗಿದೆ. ಕುಡಿಯುವ ನೀರಿನ ಲಭ್ಯತೆ ಇರುವ ಕಾರಣಕ್ಕೇ ಹಂಪಿ ಉತ್ಸವವನ್ನು ಅದ್ಧೂರಿಯಾಗಿ ನಡೆಸಲು ಇದೀಗ ನಿರ್ಧರಿಸಲಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ ಮಾತನಾಡಿ, ಹಂಪಿ ಉತ್ಸವದಲ್ಲಿ ಕನ್ನಡ ವಿಶ್ವವಿದ್ಯಾಲಯವನ್ನೂ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಲಾಗುವುದು. ಪುಸ್ತಕ ಮಳಿಗೆಗಳು ಜನರ ಜ್ಞಾನದಾಹವನ್ನು ನೀಗಿಸಲಿವೆ. ಹಂಪಿಯಲ್ಲಿ ಈಗಾಗಲೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯವರು (ಎಎಸ್‌ಐ) ಕುಡಿಯುವ ನೀರು, ಶೌಚಾಲಯದಂತಹ ವ್ಯವಸ್ಥೆಗಳನ್ನು ಕಲ್ಪಿಸಿದ್ದು, ಉತ್ಸವದ ಸಮಯದಲ್ಲಿ ಇನ್ನಷ್ಟು ವ್ಯವಸ್ಥೆ ಮಾಡಲಾಗುವುದು ಎಂದರು.

ಕಳೆದ ಎರಡು ವರ್ಷಗಳಿಂದ ಉತ್ಸವಕ್ಕೆ ಬರುವ ಜನರ ಸಂಖ್ಯೆ ಕಡಿಮೆಯಾಗಿತ್ತು. ಮುಖ್ಯವಾಗಿ ವಾಹನ ವ್ಯವಸ್ಥೆಯಲ್ಲಿ ತೊಂದರೆ ಇದ್ದುದು ಇದಕ್ಕೆ ಕಾರಣವಾಗಿತ್ತು. ಈ ಬಾರಿ 80 ರಿಂದ 100 ಬಸ್ ಗಳನ್ನು ಸ್ಥಳೀಯರಿಗೆಂದೇ ಮೀಸಲಿಟ್ಟು ಜನರನ್ನು ಸೇರಿಸಲಾಗುವುದು. ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳ ಪ್ರಮುಖರ ಸಹಯೋಗದೊಂದಿಗೆ ಶಾಲಾ ವಾಹನಗಳ ಮೂಲಕ ವಿದ್ಯಾರ್ಥಿಗಳನ್ನು ಸೇರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

‌ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಸದಾಶಿವ ಪ್ರಭು ಬಿ,  ಉಪವಿಭಾಗಾಧಿಕಾರಿ ಮಹಮ್ಮದ್‌ ಅಲಿ ಅಕ್ರಂ ಷಾ ಇದ್ದರು.

ಹಂಪಿ ವಿಶ್ವವಿದ್ಯಾಲಯಕ್ಕೆ ಬಜೆಟ್‌ನಲ್ಲಿ ಅನುದಾನ ನಿಶ್ಚಿತ

ಹಂಪಿಯ ಕನ್ನಡ ವಿಶ್ವವಿದ್ಯಾಲಯ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಸಂಪೂರ್ಣ ಮಾಹಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆ. ಈ ಸಲದ ಬಜೆಟ್‌ನಲ್ಲಿ ಈ ವಿಶ್ವವಿದ್ಯಾಲಯ ಸಹಿತ ಇತರ ಎಲ್ಲ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಅನುದಾನ ನೀಡುವ ಬಗ್ಗೆ ಈಗಾಗಲೇ ಭರವಸೆ ನೀಡಿದ್ದಾರೆ. ಇದನ್ನು ಈಡೇರಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಶಾಸಕ ಎಚ್‌.ಆರ್. ಗವಿಯಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT