ಮಂಗಳವಾರ, ಮೇ 18, 2021
22 °C
ಪರಿಸರ ಹಾಳು ಮಾಡುತ್ತಿರುವ ಸರ್ವಾಧಿಕಾರಿ ಕ್ರಮಕ್ಕೆ ಟೀಕೆ

ಹೊಸಪೇಟೆ: ಮರ ಕಡಿದಿರುವುದನ್ನು ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ನಗರದ ಮುನ್ಸಿಪಲ್‌ ಮೈದಾನದಲ್ಲಿನ ಮರಗಳನ್ನು ಕಡಿದು ಹಾಕಿರುವುದನ್ನು ವಿರೋಧಿಸಿ ಡಾ.ಬಿ.ಆರ್‌. ಅಂಬೇಡ್ಕರ್‌ ಸಂಘ, ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌ಎಫ್ಐ) ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಮರಗಳನ್ನು ಕಡಿದು ಹಾಕಿದ ಸ್ಥಳದಲ್ಲಿ ಸೇರಿದ ಕಾರ್ಯಕರ್ತರು ಮರಗಳ ಕೊಂಬೆಗಳ ಮೇಲೆ ಕುಳಿತು ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು. ಮರ ಕಡಿದಿರುವವರಿಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು.

ಅಂಬೇಡ್ಕರ್‌ ಸಂಘದ ಮುಖಂಡ ಸೋಮಶೇಖರ್‌ ಬಣ್ಣದಮನೆ ಮಾತನಾಡಿ, ‘ಬೃಹತ್‌ ಬೇವಿನ ಮರ, ಅರಳಿ ಮರ ಮುನ್ಸಿಪಲ್‌ ಮೈದಾನಕ್ಕೆ ನೆರಳಾಗಿದ್ದವು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮರಗಳು ಶುದ್ಧ ಗಾಳಿ ಕೊಡುತ್ತಿದ್ದವು. ಅವುಗಳನ್ನು ಕಡಿದಿರುವುದು ಅಕ್ಷಮ್ಯ. ಕ್ರೀಡಾಂಗಣ ಅಭಿವೃದ್ಧಿಗೆ ಸಚಿವರು ಮುಂದಾಗಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಮರಗಳನ್ನು ಉಳಿಸಿಕೊಳ್ಳಬೇಕಿತ್ತು’ ಎಂದರು.

‘ಇನ್ನಷ್ಟೇ ನಗರಸಭೆ ಮರಗಳ ಹರಾಜು ನಡೆಸಬೇಕಿತ್ತು. ಅದಕ್ಕೂ ಮೊದಲೇ ಅವುಗಳಿಗೆ ಕೊಡಲಿ ಏಟು ಕೊಟ್ಟಿದ್ದು ಎಷ್ಟು ಸರಿ. ಮುನ್ಸಿಪಲ್‌ ಮೈದಾನಕ್ಕೆ ಹೊಂದಿಕೊಂಡಂತೆ ಅನೇಕ ಶಾಲಾ, ಕಾಲೇಜುಗಳಿವೆ. ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಮರಗಳ ನೆರಳಿನಲ್ಲಿ ಕುಳಿತು ವಿದ್ಯಾಭ್ಯಾಸ ಮಾಡುತ್ತಿದ್ದರು. ಆಟವಾಡಿ ದಣಿದವರು ಅದರ ಕೆಳಗೆ ಬಂದು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ಈಗ ಅದೆಲ್ಲ ಇಲ್ಲವಾಗಿದೆ. ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಮರಗಳನ್ನು ಕಡಿದಿರುವುದು ಸರಿಯಲ್ಲ. ಕನಿಷ್ಠ ಸಾರ್ವಜನಿಕರ ಅಭಿಪ್ರಾಯ ಪಡೆದು ಮುಂದುವರೆಯಬಹುದಿತ್ತು’ ಎಂದು ಹೇಳಿದರು.

‘ಯಾರು ಕೂಡ ಸರ್ವಾಧಿಕಾರಿಯಂತೆ ವರ್ತಿಸಬಾರದು. ತಮ್ಮ ಮನೆ ಸರಿಯಾಗಿ ಇಟ್ಟುಕೊಂಡು ಪರಿಸರ ಹಾಳು ಮಾಡುತ್ತಿರುವುದು ಸರಿಯಲ್ಲ. ಮರ ಕಡಿಯುವ ಅಧಿಕಾರ ಕೊಟ್ಟಿದ್ದು ಯಾರು. ಸಾರ್ವಜನಿಕರೊಂದಿಗೆ ಚರ್ಚಿಸದೆ ಸಾರ್ವಜನಿಕ ಸ್ಥಳದಲ್ಲಿ ಮರಗಳನ್ನು ಕಡಿದಿದ್ದು ಅಕ್ಷಮ್ಯ’ ಎಂದು ಸಂಘದ ಅಧ್ಯಕ್ಷ ವಾಸುದೇವ್‌ ಟೀಕಿಸಿದರು.

ಎಸ್‌ಎಫ್ಐ ತಾಲ್ಲೂಕು ಅಧ್ಯಕ್ಷ ಜೆ. ಶಿವುಕುಮಾರ್, ‘ಮರಗಳು ಬೀಳುವ ಹಂತಕ್ಕೆ ಬಂದಿದ್ದವು ಎಂದು ನಗರಸಭೆ ಪೌರಾಯುಕ್ತರು ಪತ್ರಿಕೆಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಅದು ಶುದ್ಧ ಸುಳ್ಳು. ಒಂದುವೇಳೆ ಅವುಗಳು ಬೀಳುವ ಹಂತಕ್ಕೆ ಬಂದಿದ್ದರೆ, ಕೊಡಲಿಯಿಂದ ಕಡಿದು, ಬಳಿಕ ಜೆಸಿಬಿ ಸಹಾಯದಿಂದ ಅವುಗಳನ್ನು ನೆಲಕ್ಕುರುಳಿಸಿದ್ದು ಏಕೆ? ಜನ ಆಮ್ಲಜನಕಕ್ಕಾಗಿ ಪರದಾಡುತ್ತಿದ್ದಾರೆ. ಇಂತಹ ವೇಳೆ ಮರ ಕಡಿದಿರುವುದು ಎಷ್ಟು ಸೂಕ್ತ’ ಎಂದು ಕೇಳಿದ್ದಾರೆ. ಮಾಲತೇಶ್, ಚರಣ್‌ ಇತರರಿದ್ದರು.

‘ಹರಾಜಿಗೂ ಮೊದಲೇ ಮರಗಳಿಗೆ ಕೊಡಲಿ’ ಶೀರ್ಷಿಕೆ ಅಡಿ ಮಂಗಳವಾರ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು