ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive: ಕಾಲುವೆಗೆ ನೀರು; ರೈತರಿಗಿಲ್ಲ ಸಮಾಧಾನ

ಗಣನೀಯವಾಗಿ ಕಮ್ಮಿಯಾಗುತ್ತಿರುವ ತುಂಗಭದ್ರಾ ಜಲಾಶಯದ ನೀರು
Last Updated 31 ಮಾರ್ಚ್ 2021, 7:25 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಏ. 1ರಿಂದ 10ರ ವರೆಗೆ ತುಂಗಭದ್ರಾ ಜಲಾಶಯದ ಬಲದಂಡೆ ಹಾಗೂ ಎಡದಂಡೆ ಕೆಳಮಟ್ಟದ ಕಾಲುವೆಗೆ ನೀರು ಹರಿಸಲು ಕರ್ನಾಟಕ ನೀರಾವರಿ ನಿಗಮದ ತುಂಗಭದ್ರಾ ಯೋಜನಾ ವೃತ್ತ ಮಂಗಳವಾರ ತೀರ್ಮಾನಿಸಿದೆ. ಆದರೆ, ಇದು ರೈತರಿಗೆ ಅಷ್ಟೇನೂ ಸಮಾಧಾನ ತಂದಿಲ್ಲ.

ಏ. 1ರಿಂದ 31ರ ವರೆಗೆ ಸತತವಾಗಿ ನೀರು ಹರಿಸಬೇಕು ಎನ್ನುವುದು ರೈತರ ಬೇಡಿಕೆಯಾಗಿತ್ತು. ಆದರೆ, ಅದಕ್ಕೆ ಮನ್ನಣೆ ಸಿಕ್ಕಿಲ್ಲ. ಈ ನಿರ್ಧಾರ ಸಹಜವಾಗಿಯೇ ರೈತರನ್ನು ಚಿಂತೆಗೀಡು ಮಾಡಿದೆ.

ಹೊಸಪೇಟೆ, ಬಳ್ಳಾರಿ, ಕಂಪ್ಲಿ, ಸಿರುಗುಪ್ಪ ಹಾಗೂ ಕುರುಗೋಡು ತಾಲ್ಲೂಕಿನಲ್ಲಿ ಹಿಂಗಾರಿನಲ್ಲಿ ರೈತರು ಎರಡನೇ ಬೆಳೆಯಾಗಿ ಭತ್ತ ಬೆಳೆಯುತ್ತಾರೆ. ಏಪ್ರಿಲ್‌ ಕೊನೆಯ ವರೆಗೆ ನೀರು ಹರಿಸಿದರೂ ಶೇ 90ರಷ್ಟು ಬೆಳೆ ಕೈಸೇರುತ್ತದೆ. ಪರಿಸ್ಥಿತಿ ಹೀಗಿರುವಾಗ ಹತ್ತು ದಿನಗಳಷ್ಟೇ ನೀರು ಹರಿಸಲು ತೀರ್ಮಾನ ತೆಗೆದುಕೊಂಡಿದ್ದರಿಂದ ಶೇ 50ರಿಂದ 60ರಷ್ಟು ಬೆಳೆ ಕೈಸೇರುವ ಸಾಧ್ಯತೆ ಇಲ್ಲ ಎನ್ನುವುದು ರೈತರ ಚಿಂತೆಗೆ ಮುಖ್ಯ ಕಾರಣ.

‘ಏಪ್ರಿಲ್‌ ಕೊನೆಯ ವರೆಗೆ ನೀರು ಹರಿಸಬೇಕು ಎಂದು ಮೊದಲಿನಿಂದಲೂ ಬೇಡಿಕೆ ಸಲ್ಲಿಸುತ್ತ ಬರಲಾಗಿದೆ. ಆದರೆ, ಹತ್ತು ದಿನ ನೀರು ಹರಿಸಲು ತೀರ್ಮಾನಿಸಿದ್ದಾರೆ. ಕನಿಷ್ಠ 20 ದಿನಗಳಾದರೂ ನೀರು ಹರಿಸಬೇಕು. 20 ದಿನ ನೀರು ಹರಿಸಿದರೂ ಶೇ 80ರಷ್ಟು ಬೆಳೆ ಕೈಗೆ ಬರುತ್ತದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ, ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲಾಗುವುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಪ್ರತಿಕ್ರಿಯಿಸಿದರು.

‘ಸದ್ಯ ಜಲಾಶಯದಲ್ಲಿ 11 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಬಲದಂಡೆಗೆ ಎರಡು, ಎಡದಂಡೆ ಕೆಳಮಟ್ಟದ ಕಾಲುವೆಗೆ ಮೂರು ಟಿಎಂಸಿ ಅಡಿ ನೀರು ಹರಿಸಿದರೆ, ಐದು ಟಿಎಂಸಿ ಖರ್ಚಾಗುತ್ತದೆ. ಕುಡಿಯುವುದಕ್ಕೆ ಆರು ಟಿಎಂಸಿ ಅಡಿ ನೀರು ಬಹಳ ಹೆಚ್ಚಾಯ್ತು’ ಎಂದರು.

ನಿಗಮದ ಲೆಕ್ಕಾಚಾರವೇನು?:

ಸದ್ಯ ಅಣೆಕಟ್ಟೆಯಲ್ಲಿ 11 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಭದ್ರಾ ಜಲಾಶಯದಿಂದ ಒಂದುವರೆ ಟಿಎಂಸಿ ಅಡಿ ನೀರು ಬಂದು ಸಂಗ್ರಹವಾಗುತ್ತದೆ. ಬಲದಂಡೆ, ಎಡದಂಡೆ ಕಾಲುವೆಗೆ ಸುಮಾರು ಐದರಿಂದ ಆರು ಟಿಎಂಸಿ ಅಡಿ ನೀರು ಹರಿಸಬೇಕಾಗುತ್ತದೆ. ಇನ್ನುಳಿದ ಆರುವರೆ ಟಿಎಂಸಿ ನೀರಿನಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗೆ ಕುಡಿಯುವ ನೀರು ಪೂರೈಸಬೇಕಾಗುತ್ತದೆ.

ವಿಜಯನಗರ ಜಿಲ್ಲೆಯಲ್ಲಿ ಸದ್ಯ 40 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇದೆ. ನಿತ್ಯ ಕನಿಷ್ಠ ಎರಡುವರೆಯಿಂದ ಮೂರು ಸಾವಿರ ಕ್ಯುಸೆಕ್‌ ನೀರು ಆವಿಯಾಗಿ ಹೋಗುತ್ತಿದೆ. ಬರುವ ದಿನಗಳಲ್ಲಿ ತಾಪಮಾನ 45ರಿಂದ 50ರ ಆಸುಪಾಸಿನ ವರೆಗೆ ಹೋಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಆವಿಯಾಗಿ ಖಾಲಿಯಾಗುತ್ತದೆ. ಜಲಾಶಯ ಸಂಪೂರ್ಣ ಬರಿದಾಗಿ ಹೋದರೆ ಕುಡಿಯುವ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗುತ್ತದೆ. ಈ ಪರಿಸ್ಥಿತಿ ಯಾವುದೇ ಕಾರಣಕ್ಕೂ ಉದ್ಭವಿಸಬಾರದು ಎನ್ನುವ ಲೆಕ್ಕಾಚಾರದೊಂದಿಗೆ ಬಹಳ ಯೋಚಿಸಿ, ಹತ್ತು ದಿನಗಳ ವರೆಗೆ ನೀರು ಹರಿಸಲು ಮುಂದಾಗಿದೆ.

‘ಈಗ ರೈತರಿಗೆ ಹೆಚ್ಚಾಗಿ ನೀರು ಬೇಕಿಲ್ಲ. ಅಲ್ಪ ನೀರಿನಲ್ಲಿ ಬೆಳೆ ತೆಗೆಯಬಹುದು. ಹತ್ತು ದಿನಗಳಲ್ಲಿ ಎಲ್ಲ ರೈತರ ಜಮೀನಿಗೆ ನೀರು ಹರಿಯುತ್ತದೆ. ತಡವಾಗಿ ಭತ್ತ ನಾಟಿ ಮಾಡಿದವರಿಗಷ್ಟೇ ಸಮಸ್ಯೆಯಾಗುತ್ತದೆ. ಆದರೆ, ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದು ಸರ್ಕಾರದ ಸ್ಪಷ್ಟ ನಿರ್ದೇಶನವಿದೆ. ಅದರ ಪ್ರಕಾರವೇ ನೀರು ಹರಿಸಲು ತೀರ್ಮಾನಿಸಲಾಗಿದೆ’ ಎನ್ನುತ್ತಾರೆ ನಿಗಮದ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT