ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

9 ತಿಂಗಳಲ್ಲಿ ಸಾಲುಮಂಟಪ ಪುನಶ್ಚೇತನ ಪೂರ್ಣ

ಸಾಲುಮಂಟಪ ಕುಸಿದ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ– ಹಣಕಾಸಿನ ಕೊರತೆಯಲ್ಲೂ ಎಎಸ್‌ಐ ಕೆಲಸಕ್ಕೆ ತೃಪ್ತಿ
Published 22 ಮೇ 2024, 13:17 IST
Last Updated 22 ಮೇ 2024, 13:17 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿಯ ವಿರೂಪಾಕ್ಷ ದೇವಸ್ಥಾನದ ರಥಬೀದಿಯ ಎರಡೂ ಕಡೆ ವಾಲಿಕೊಂಡಿರುವ ಸಾಲುಮಂಟಪಗಳನ್ನು ಒಂಭತ್ತು ತಿಂಗಳಲ್ಲಿ ಪುನಶ್ಚೇತನಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಎಸ್‌.ದಿವಾಕರ್ ಹೇಳಿದರು.

ಮೂರು ಸಾಲುಮಂಟಪಗಳು ಕುಸಿದಿರುವ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಹಣಕಾಸಿನ ತೊಂದರೆ ಇದ್ದರೂ ಸಾಧ್ಯವಾದ ಮಟ್ಟಿಗೆ ಉತ್ತಮ ರೀತಿಯಲ್ಲೇ ಪುನಶ್ಚೇತನ ಕಾರ್ಯ ನಡೆಸುತ್ತಿದೆ. ಈಗಾಗಲೇ ವಿರೂಪಾಕ್ಷ ದೇವಸ್ಥಾನದ ಬಳಿ ಎರಡೂ ಬದಿಗಳಲ್ಲಿ ಸಾಲು ಮಂಟಪಗಳ ಪುನಶ್ಚೇತನ ಕಾರ್ಯ ಕೊನೆಗೊಂಡಿದೆ. ಒಟ್ಟು ₹8 ಕೋಟಿಯ ಯೋಜನೆಯಲ್ಲಿ ₹4 ಕೋಟಿಯ ಯೋಜನೆ ಪೂರ್ಣಗೊಳ್ಳುವುದು ಬಾಕಿ ಇದೆ ಎಂದರು.

‘250 ಮೀಟರ್‌ನಷ್ಟು ಉದ್ದದ ಸಾಲುಮಂಟಪಗಳನ್ನು ತಕ್ಷಣ ಪುನಶ್ಚೇತನಗೊಳಿಸಬೇಕಿದೆ. ಇವುಗಳು ಯಾವುದೇ ಸಂದರ್ಭದಲ್ಲಿ ಕುಸಿಯುವ ಸ್ಥಿತಿಯಲ್ಲಿವೆ. ಈಗಾಗಲೇ ಪುನಶ್ಚೇತನ ಕಾರ್ಯಕ್ಕಾಗಿ ₹90 ಲಕ್ಷದ ಕ್ರಿಯಾ ಯೋಜನೆ ಸಿದ್ಧವಾಗಿದೆ. ಒಟ್ಟಾರೆ ₹ 4 ಕೋಟಿ ಇದ್ದರೆ ಇಡೀ ಪುನಶ್ಚೇತನ ಕಾರ್ಯ ಕೊನೆಗೊಳ್ಳಲಿದೆ. ಹಣ ಶೀಘ್ರ ಬಿಡುಗಡೆ ಮಾಡಲು ಕೋರಿ ನನ್ನ ಕಚೇರಿಯಿಂದಲೂ ಕೇಂದ್ರಕ್ಕೆ ಪತ್ರ ಬರೆಯಲಾಗುವುದು’ ಎಂದು ಅವರು ಹೇಳಿದರು.

22 ತಜ್ಞರಿಂದ ಕೆಲಸ: ‘ಸ್ಮಾರಕಗಳ ಪುನಶ್ಚೇತನ ಕೆಲಸ ಬಹಳ ಸೂಕ್ಷ್ಮವಾದುದು. ಪ್ರಾಚೀನ ಕಾಲದಲ್ಲಿ ಹೇಗೆ ನಿರ್ಮಿಸಿದರೋ, ಯಾವ ಕಲ್ಲನ್ನು ಬಳಸಿದ್ದರೋ ಅದನ್ನೇ ಉಳಿಸಿಕೊಳ್ಳಬೇಕು ಮತ್ತು ಈ ಮೊದಲು ಇದ್ದಂತೆಯೇ ಜೋಡಿಸಬೇಕು. ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಬೃಹತ್ ಕಲ್ಲಿನ ಕಂಬ, ಕಲ್ಲಿನ ಚಪ್ಪಡಿಗಳನ್ನು ಎತ್ತಿ ಇಡಲು ಕ್ರೇನ್‌ ಬಳಸಬೇಕಾಗುತ್ತದೆ. ಹೀಗಿದ್ದರೂ ತ್ವರಿತವಾಗಿ ಕೆಲಸ ಮುಗಿಸಲು ಎಎಸ್‌ಐಗೆ ತಿಳಿಸಲಾಗುವುದು’ ಎಂದು ಜಿಲ್ಲಾಧಿಕಾರಿ ದಿವಾಕರ್ ಹೇಳಿದರು.

’ಭಾರಿ ಮಳೆ ಸುರಿದ ಕಾರಣ ಸಾಲು ಮಂಟಪ ಕುಸಿದಿದೆ. ಇದು 500 ವರ್ಷಗಳಿಗಿಂತ ಹಿಂದೆ ನಿರ್ಮಿಸಿದಂತಹ ಸ್ಮಾರಕ. ಕಬ್ಬಿಣ, ಸಿಮೆಂಟ್‌ ಬಳಸದೆ ಅಂದಿನ ತಾಂತ್ರಿಕ ಕೌಶಲ್ಯದೊಂದಿಗೆ ನಿರ್ಮಿಸಿದ ಸ್ಮಾರಕಗಳು ಇಷ್ಟು ಸಮಯ ಸ್ಥಿರವಾಗಿ ನಿಂತಿದ್ದೇ ವಿಶೇಷ ಎನ್ನಬೇಕು. ಈಗ ನಡೆಯುತ್ತಿರುವ ಪುಶ್ಚೇತನ ಕೆಲಸದ ಬಳಿಕ ಇನ್ನೂ ನೂರಾರು ವರ್ಷ ಇವುಗಳಿಗೆ ಯಾವುದೇ ಧಕ್ಕೆ ಆಗುವುದಿಲ್ಲ. ಅಂತಹ ತಾಂತ್ರಿಕ ನೈಪುಣ್ಯಯಲ್ಲಿ ಇದೀಗ ಕಾಮಗಾರಿ ನಡೆಯುತ್ತಿದೆ’ ಎಂದು ಅವರು ವಿವರಿಸಿದರು.

ತಹಶೀಲ್ದಾರ್ ಶೃತಿ ಎಂ.ಎಂ., ಎಎಸ್‌ಐ ಅಧಿಕಾರಿಗಳಾದ ಧರಣೀಧರನ್‌, ಎಚ್‌.ರವೀಂದ್ರ, ಪ್ರವಾಸಿ ಮಾರ್ಗದರ್ಶಿ ವಿರೂಪಾಕ್ಷಿ ವಿ.ಹಂಪಿ ಇತರರು ಇದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT