ಗುರುವಾರ , ಆಗಸ್ಟ್ 18, 2022
24 °C
ಅಗತ್ಯ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರಿಗೆ ಕಿರುಕುಳ

ಬಿಜೆಪಿಯಿಂದ ಟ್ಯಾಕ್ಸ್‌ ಟೆರರಿಸಂ: ಯು.ಟಿ. ಖಾದರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಹೊಸಪೇಟೆ (ವಿಜಯನಗರ): ‘ದೇಶದಲ್ಲಿ ಬಿಜೆಪಿಯಿಂದ ಟ್ಯಾಕ್ಸ್‌ ಟೆರರಿಸಂ ನಡೆಯುತ್ತಿದೆ. ದೇಶದ ಎಲ್ಲ ಪೆಟ್ರೋಲ್‌ ಬಂಕ್‌ಗಳು ಟ್ಯಾಕ್ಸ್‌ ಬೂತ್‌ಗಳಾಗಿವೆ’ ಎಂದು ಶಾಸಕ ಯು.ಟಿ. ಖಾದರ್‌ ಆರೋಪಿಸಿದರು.

‘ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲೆ ಶೇ 9ರಷ್ಟು ತೆರಿಗೆ ವಿಧಿಸಲಾಗಿತ್ತು. ಆದರೆ, ಈಗಿನ ಕೇಂದ್ರದ ಬಿಜೆಪಿ ಸರ್ಕಾರ ಶೇ 35ಕ್ಕಿಂತ ಹೆಚ್ಚು ತೆರಿಗೆ ವಿಧಿಸಿದೆ. ಹೀಗಾಗಿಯೇ ಪೆಟ್ರೋಲ್‌, ಡೀಸೆಲ್‌ ಬೆಲೆ ನೆರೆ ರಾಷ್ಟ್ರಗಳಿಗಿಂತಲೂ ನಮ್ಮಲ್ಲಿ ಅಧಿಕವಾಗಿದೆ’ ಎಂದು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಲಾಕ್‌ಡೌನ್‌ನಿಂದ ಜನ ಬಹಳ ಕಷ್ಟದಲ್ಲಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿ ಸಾವು ನೋವುಗಳಾಗಿವೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್‌, ಡೀಸೆಲ್‌, ಸಿಲಿಂಡರ್‌ ದರ ಹೆಚ್ಚಿಸಿರುವುದು ಎಷ್ಟರಮಟ್ಟಿಗೆ ಸರಿ? ಈ ಸರ್ಕಾರಕ್ಕೆ ನಿಜವಾಗಲೂ ಮಾನವೀಯತೆ, ಕರುಣೆ ಇದೆಯೇ? ಸರ್ಕಾರಕ್ಕೆ ಬೇರೆ ಬೇರೆ ಮೂಲಗಳಿಂದ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ. ಹೀಗಿರುವಾಗ ಜನಸಾಮಾನ್ಯರ ಮೇಲೆ ಹೊರೆ ಹಾಕುವುದು ಎಷ್ಟು ಸರಿ? ಕಷ್ಟಕಾಲದಲ್ಲಿ ಸರ್ಕಾರ ಜನರ ನೆರವಿಗೆ ಬರಬೇಕು. ಅದು ಬಿಟ್ಟು ಅವರನ್ನು ಮತ್ತಷ್ಟು ಕಷ್ಟಕ್ಕೆ ದೂಡುವುದು ಸರಿಯೇ?’ ಎಂದು ಪ್ರಶ್ನಿಸಿದರು.

‘ವಿಮಾನ ನಿಲ್ದಾಣ, ಬಂದರು, ರೈಲ್ವೆ ಈಗಾಗಲೇ ಖಾಸಗೀಕರಣ ಮಾಡಿದ್ದಾರೆ. ಬ್ಯಾಂಕುಗಳನ್ನು ವಿಲೀನಗೊಳಿಸುವ ಮೂಲಕ ಅವುಗಳನ್ನು ಹಾಳುಗೆಡವಿದ್ದಾರೆ. ಎಲ್ಲವೂ ಖಾಸಗೀಕರಣಗೊಂಡರೆ ಯುವಕರಿಗೆ ಉದ್ಯೋಗ ಸಿಗುವುದು ಹೇಗೆ? ದೇಶ ಭಕ್ತಿ ಬಗ್ಗೆ ಮಾತನಾಡುವ ಬಿಜೆಪಿ ಬಂಡವಾಳಷಾಹಿಗಳು, ವ್ಯಾಪಾರಿಗಳ ಪಕ್ಷವಾಗಿ ಬದಲಾಗಿದೆ. ಅದರಿಂದ ಜನಪರ ಆಡಳಿತ ನಿರೀಕ್ಷಿಸಲು ಹೇಗೆ ಸಾಧ್ಯ?’ ಎಂದು ಕೇಳಿದರು.

‘ಕೋವಿಡ್‌ ನಿಭಾಯಿಸುವಲ್ಲಿ ರಾಜ್ಯ, ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿವೆ. ದೇಶದ ಜನರಿಗೆ ಲಸಿಕೆ ಕೊಡುವ ವಿಚಾರದಲ್ಲೂ ಯಾವುದೇ ಸ್ಪಷ್ಟವಾದ ನೀತಿಯಿಲ್ಲ. ಜಗತ್ತಿನಲ್ಲಿ 22 ಲಸಿಕೆ ಪೂರೈಸುವ ಕಂಪನಿಗಳಿವೆ. ಹೀಗಿದ್ದರೂ ಮೂರು ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿರುವುದೇಕೇ? ದೇಶದಲ್ಲಿ ಕೋವಿಡ್‌ನಿಂದ ಅಪಾರ ಸಾವು–ನೋವು ಉಂಟಾಗಿದೆ. ಮೃತರ ನಿಖರ ಸಂಖ್ಯೆ ಮುಚ್ಚಿಡುತ್ತಿರುವುದೇಕೇ?’ ಎಂದು ಪ್ರಶ್ನೆ ಮಾಡಿದರು.

‘ಕಾಂಗ್ರೆಸ್‌ ಪಕ್ಷವು ರಾಜ್ಯದ ಪ್ರತಿ ಪಂಚಾಯಿತಿಯ ಬೂತ್‌ ಮಟ್ಟದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದೆ. ಮಾಹಿತಿ ಕಲೆ ಹಾಕಿದ ನಂತರ ಅದನ್ನು ಒಟ್ಟುಗೂಡಿಸಿ, ಆ ಕುಟುಂಬಗಳಿಗೆ ಪರಿಹಾರ ಕೊಡಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಪರಿಹಾರ ಕೊಡಿಸುವವರೆಗೆ ಕಾಂಗ್ರೆಸ್‌ ನಿರಂತರವಾಗಿ ಹೋರಾಟ ನಡೆಸಲಿದೆ’ ಎಂದು ತಿಳಿಸಿದರು.

‘ಬಿಜೆಪಿಯವರು ಅಧಿಕಾರಕ್ಕಾಗಿ ರಸ್ತೆಯಲ್ಲಿ ಕಿತ್ತಾಟ ನಡೆಸುತ್ತಿರುವುದು ಸರಿಯಲ್ಲ. ಅವರ ಪಕ್ಷದವರೇ ಮುಖ್ಯಮಂತ್ರಿ ವಿರುದ್ಧ ಗಂಭೀರ ಸ್ವರೂಪದ ಆರೋಪ ಮಾಡುತ್ತಿದ್ದಾರೆ. ಮಧ್ಯಂತರ ಚುನಾವಣೆಯ ಬಗ್ಗೆ ಆ ಪಕ್ಷದವರೇ ತಿಳಿಸಬೇಕು. ಒಂದುವೇಳೆ ಮಧ್ಯಂತರ ಚುನಾವಣೆ ಎದುರಾದರೆ ಅದನ್ನು ಎದುರಿಸಲು ಪಕ್ಷ ಎಲ್ಲ ರೀತಿಯಲ್ಲೂ ಸಿದ್ದವಾಗಿದೆ. ಕಾಂಗ್ರೆಸ್‌ ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಪಕ್ಷಕ್ಕೆ ಅದರ ಅಗತ್ಯವೂ ಇಲ್ಲ. ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಿದೆ. ಬಳಿಕ ಹೈಕಮಾಂಡ್‌ ಮುಖ್ಯಮಂತ್ರಿ ಆಯ್ಕೆ ಮಾಡಲಿದೆ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಶಾಸಕರಾದ ಭೀಮಾ ನಾಯ್ಕ, ಪಿ.ಟಿ. ಪರಮೇಶ್ವರ ನಾಯ್ಕ, ಈ. ತುಕಾರಾಂ, ಕಾಂಗ್ರೆಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್‌. ಮಂಜುನಾಥ, ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ವಿ. ಸೋಮಪ್ಪ, ಮುಖಂಡರಾದ ವೆಂಕಟರಾವ ಘೋರ್ಪಡೆ, ದೀಪಕ್‌ ಸಿಂಗ್‌ ಗುಜ್ಜಲ್‌ ರಘು, ಗುಜ್ಜಲ್‌ ನಾಗರಾಜ್‌, ಹಾಲಪ್ಪ, ಭರತ್‌, ಅಕ್ಕಿ ತೋಟೇಶ್‌, ವೀಣಾ ಮಹಾಂತೇಶ, ಆಶಾಲತಾ, ಮುನ್ನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು