ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ | ಬೋಧಕರ ಕೊರತೆ: ‘ವಿದ್ಯಾರಣ್ಯ’ರೋದನ

ಪರಿಸ್ಥಿತಿ ಈಗಾಗಲೇ ಗಂಭೀರ, ಮುಂದಿನ ಜುಲೈ ವೇಳೆಗೆ ಇನ್ನಷ್ಟು ತೀವ್ರ
Published 12 ಡಿಸೆಂಬರ್ 2023, 6:22 IST
Last Updated 12 ಡಿಸೆಂಬರ್ 2023, 6:22 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕನ್ನಡ ನಾಡು ನುಡಿ, ಭಾಷೆ, ಸಂಸ್ಕೃತಿ, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳ ಸಂಶೋಧನೆ ಹಾಗೂ ಪ್ರಸರಣದಲ್ಲಿ ನಿರತವಾಗಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬೋಧಕರ ಕೊರತೆ ಇಂದು, ನಿನ್ನೆಯ ವಿದ್ಯಮಾನವಲ್ಲ. ಆದರೆ ಯಾವ ಸರ್ಕಾರಗಳೂ ಈ ಕೊರತೆ ತುಂಬಿಸುವ ಮನಸ್ಸು ಮಾಡಿಲ್ಲ.

ಸಾಹಿತ್ಯ, ಸಂಗೀತ, ಯೋಗ ಮತ್ತು ಅಭಿವೃದ್ಧಿ ಅಧ್ಯಯನ ವಿಭಾಗಗಳನ್ನು ಬಿಟ್ಟರೆ ವಿಶ್ವವಿದ್ಯಾಲಯದಲ್ಲಿರುವ ಇತರ ವಿಭಾಗಗಳಲ್ಲಿ ಬೋಧನೆ ನಡೆಯುವುದಿಲ್ಲ ನಿಜ. ಆವುಗಳನ್ನು ತೆರೆದಿರುವುದೇ ಸಂಶೋಧನೆ ಮತ್ತು ಯೋಜನೆ ರೂಪಿಸುವುದಕ್ಕಾಗಿ. ಒಬ್ಬ ಪ್ರಾಧ್ಯಾಪಕ ನಿವೃತ್ತನಾದ ಎಂದರೆ ಅಥವಾ ಒಂದು ವಿಭಾಗದಲ್ಲಿ ಒಬ್ಬ ಪ್ರಾಧ್ಯಾಪಕ ಇಲ್ಲ ಎಂದಾದರೆ ಎಂಟು ಸಂಶೋಧನಾರ್ಥಿ ವಿದ್ಯಾರ್ಥಿಗಳ ಭವಿಷ್ಯ ಮಂಕಾದಂತೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದರೆ ಇಷ್ಟು ಗಂಭೀರ ಸ್ಥಿತಿ ತಲುಪುತ್ತಿರಲಿಲ್ಲ. ಬೋಧಕರ ಕೊರತೆ ಬಗ್ಗೆ ಮೇಲಿಂದ ಮೇಲೆ ಒತ್ತಾಯಿಸುತ್ತ ಇದ್ದರೂ ನೇಮಕಾತಿ ಮಾತ್ರ ಆಗುತ್ತಿಲ್ಲ.

ಬೋಧಕರ ಗಂಭೀರ ಕೊರತೆಯ ನಡುವೆಯೂ ಕನ್ನಡದ ಹೆಮ್ಮೆಯ ವಿಶ್ವವಿದ್ಯಾಲಯ ಸಂಶೋಧನೆ ಮತ್ತು ಯೋಜನೆಗಳಲ್ಲಿ ಕೆಲವೊಂದಿಷ್ಟು ಸಾಧನೆಗಳನ್ನು ಮಾಡಿದೆ. ಸಾಂಸ್ಕೃತಿಕ ಮುಖಾಮುಖಿ, ಜಾನಪದ ಸಂಶೋಧನೆ, ಬುಡಕಟ್ಟು, ಜನಪದ ಮಹಾಕಾವ್ಯಗಳು, ಶಾಸನ ಸಂಪುಟಗಳು, ದೇವಾಲಯ ಸಂಪುಟಗಳು, ವಿಶ್ವಕೋಶಗಳನ್ನು ಇದರಲ್ಲಿ ಪ್ರಮುಖವಾಗಿ ಗುರುತಿಸಬಹುದು. ಆದರೆ ಬೋಧಕರ ಹುದ್ದೆಗಳನ್ನೆಲ್ಲ ತುಂಬಿದ್ದರೆ ಇಂತಹ ಅಮೂಲ್ಯ ಕೃತಿಗಳ ಸಂಖ್ಯೆ ಇನ್ನಷ್ಟು ಹೆಚ್ಚುತ್ತಿತ್ತು ಹಾಗೂ ಅದೆಷ್ಟೋ ಆಸಕ್ತ ಯುವಜನರಿಗೆ ಮೌಲಿಕ ಮಾರ್ಗದರ್ಶನದ ಅವಕಾಶ ಆಗುತ್ತಿತ್ತು ಎಂಬುದೂ ಅಷ್ಟೇ ಸತ್ಯ.

ಸಂಗೀತ ಮತ್ತು ನೃತ್ಯ ವಿಭಾಗ ಹಾಗೂ ವಾಸ್ತುಶಿಲ್ಪ ಮತ್ತು ಪ್ರತಿಮಾಶಾಸ್ತ್ರ ವಿಭಾಗಗಳಲ್ಲಿ ಬೋಧಕರ ಹುದ್ದೆ  ಸಂಪೂರ್ಣ ಖಾಲಿ ಇದೆ. ಭಾಷಾಂತರ ವಿಭಾಗ, ಶಾಸನಶಾಸ್ತ್ರ ವಿಭಾಗ ಹಾಗೂ ದೃಶ್ಯಕಲಾ ವಿಭಾಗದಲ್ಲಿ 6ರಲ್ಲಿ 5 ಹುದ್ದೆಗಳು ಖಾಲಿ ಇವೆ. ಮುಂದಿನ ಜುಲೈ ವೇಳೆಗೆ ಐವರು ಪ್ರಾಧ್ಯಾಪಕರು ನಿವೃತ್ತರಾಗಲಿದ್ದಾರೆ. ಅತಿಥಿ ಉಪನ್ಯಾಸಕರು ಎಷ್ಟೇ ವಿದ್ವತ್‌ ಹೊಂದಿದ್ದರೂ ಅವರು ಸಂಶೋಧನಾನಿರತರಿಗೆ ಮಾರ್ಗದರ್ಶನ ನೀಡುವಂತಿಲ್ಲ. ಇದರಿಂದಾಗಿ ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ ನ್ಯಾಕ್‌ ಗ್ರಾಫ್‌ನಲ್ಲಿ ‘ಎ’ ಗೆರೆ ದಾಟಿ ಹೋಗುತ್ತಿಲ್ಲವೇ ಎಂಬ ಶಂಕೆ ಶಿಕ್ಷಣ ಪ್ರಿಯರನ್ನು ಕಾಡುತ್ತಿದೆ.

‘ಬೋಧಕರ ಕೊರತೆಯನ್ನು ಸದ್ಯ 13 ಮಂದಿ ಅತಿಥಿ ಉಪನ್ಯಾಸಕರಿಂದ ತುಂಬಿಸುವ ಕೆಲಸ ನಡೆದಿದೆ. ಮೇಲಿಂದ ಮೇಲೆ ಬೋಧಕರ ಹುದ್ದೆ ಭರ್ತಿಗಾಗಿ ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದೇವೆ’ ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT