ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಿಬೊಮ್ಮನಹಳ್ಳಿ: ಬಗೆಹರಿಯದ ಕ್ರಸ್ಟ್ ಗೇಟ್ ಸಮಸ್ಯೆ

ಮಾಲವಿ ಜಲಾಶಯದ ಮೂಲ ಉದ್ಧೇಶಕ್ಕೆ ಪೆಟ್ಟು
Published 25 ಮೇ 2024, 7:44 IST
Last Updated 25 ಮೇ 2024, 7:44 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಮಾಲವಿ ಜಲಾಶಯದ ಕ್ರಸ್ಟ್ ಗೇಟ್‌ಗಳಲ್ಲಿರುವ ತಾಂತ್ರಿಕ ಸಮಸ್ಯೆಯಿಂದಾಗಿ ಈ ಬಾರಿಯೂ ನೀರು ಸಂಗ್ರಹಗೊಳ್ಳುವುದು ಅನುಮಾನವಾಗಿದ್ದು, ರೈತರಲ್ಲಿ ಆತಂಕ ತಂದೊಡ್ಡಿದೆ.

₹150ಕೋಟಿ ಮೊತ್ತದ ಅನುದಾನದಿಂದ ಜಲಾಶಯಕ್ಕೆ ನೀರು ಹರಿಸಿದ ಯೋಜನೆಯ ಮೂಲ ಉದ್ದೇಶಕ್ಕೂ ಪೆಟ್ಟು ಬಿದ್ದಂತಾಗಿದೆ. ಉತ್ತಮ ಮಳೆಯಾದರೂ ಪ್ರಯೋಜನ ಇಲ್ಲದಾಗಿದೆ.

2022ರಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಿ ಒಳ ಹರಿವು ಹೆಚ್ಚಾಗಿತ್ತು, ಆಗ ನೀರು ಹೊರ ಬಿಡುವುದಕ್ಕೆ ಗೇಟ್‍ಗಳನ್ನು ತೆಗೆಯಲು ಮತ್ತು ಮುಚ್ಚಲು ಜಲಾಶಯದ ಸಿಬ್ಬಂದಿ ಹರಸಾಹಸ ಪಟ್ಟಿದ್ದರು. ಜೆಸಿಬಿ ಯಂತ್ರದ ಸಹಾಯದಿಂದ ಜಲಾಶಯದ ರಕ್ಷಣೆ ಗೋಡೆಯನ್ನು ಕೆಡವಿ ಗೇಟ್‍ಗಳನ್ನು ತೆರೆದು ಬಳಿಕ ಮುಚ್ಚಲಾಗಿತ್ತು. ನಂತರ 10 ಗೇಟ್‍ಗಳಿಂದಲೂ ನೀರು ಪೋಲಾಗಿತ್ತು. ಅಂದಾಜು 2 ಟಿಎಂಸಿ ಅಡಿಗೂ ಅಧಿಕ ನೀರು ಹಗರಿ ಹಳ್ಳದ ಮೂಲಕ ತುಂಗಭದ್ರಾ ಜಲಾಶಯದ ಪಾಲಾಗಿ, ಜಲಾಶಯ ಸಂಪೂರ್ಣ ಖಾಲಿ ಆಗಿತ್ತು.

ಎರಡು ವರ್ಷಗಳ ಹಿಂದೆ ಜಲಾಶಯಕ್ಕೆ ತುಂಗಭದ್ರಾ ಹಿನ್ನೀರು ಹರಿಸಿದ್ದರಿಂದ ಮತ್ತು ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಪರಿಣಾಮ ಜಲಾಶಯ ಭರ್ತಿಯಾಗಿತ್ತು. ಬಳಿಕ ಕ್ರಸ್ಟ್‌ಗೇಟ್‍ಗಳಲ್ಲಿನ ದೋಷದಿಂದ ನೀರು ಪೋಲಾಗಿತ್ತು. ಇದರಿಂದ ರೈತರು ಆಕ್ರೋಶಗೊಂಡಿದ್ದರು, ಸಮಸ್ಯೆ ಅರಿತೂ ಕೈಚೆಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

ಜಲಾಶಯದಿಂದ ನೀರೊದಗಿದರೆ ತಾಲ್ಲೂಕಿನ 13 ಗ್ರಾಮಗಳ ಅಚ್ಚುಕಟ್ಟು ಪ್ರದೇಶದ 10 ಸಾವಿರ ಎಕರೆಗೂ ಹೆಚ್ಚು ಪ್ರದೇಶಕ್ಕೆ ನೀರುಣಿಸಬಹುದು. ಜತೆಗೆ ಸಾವಿರಾರು ಕೊಳವೆಬಾವಿಗಳು ಮರುಪೂರಣಗೊಳ್ಳುತ್ತವೆ.

ಜಲಾಶಯ ಬರಿದಾಗಿ ಎರಡು ವರ್ಷಗಳಾದರೂ ಸಮಸ್ಯೆ ಬಗೆಹರಿದಿಲ್ಲ. ಇದು ರೈತ ಸಂಘದ ಮುಖಂಡರನ್ನು ಮತ್ತು ಅಚ್ಚುಕಟ್ಟು ಪ್ರದೇಶದ ರೈತರನ್ನು ಕೆರಳಿಸಿದೆ. ಮಳೆಗಾಲ ಆರಂಭವಾಗಿದೆ, ತುಂಗಭದ್ರಾ ನದಿಗೆ ನೀರು ಹರಿಯಲಾರಂಭಿಸಿದೆ, ರಾಜವಾಳದಲ್ಲಿನ ಜಾಕ್‍ವೆಲ್‍ನಿಂದ ಜಲಾಶಯಕ್ಕೆ ನೀರು ಹರಿವ ಯೋಜನೆಯೂ ಸುಸ್ಥಿತಿಯಲ್ಲಿದೆ, ಆದರೆ ಕ್ರಸ್ಟ್ ಗೇಟ್ ಸಮಸ್ಯೆಯಿಂದಾಗಿ ನೀರು ಸಂಗ್ರಹಗೊಂಡರೂ ಪೋಲಾಗುವ ಆತಂಕ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರದ್ದಾಗಿದೆ.

ಜಲಾಶಯ ನಿರ್ಮಾಣ ಮಾಡಿದಾಗಿನಿಂದಲೂ ಕ್ರಸ್ಟ್ ಗೇಟ್‌ಗಳಲ್ಲಿ ತಾಂತ್ರಿಕ ದೋಷ ಇದೆ. ಗೇಟ್‍ಗಳಿಗೆ ರೋಲರ್ ಅಳವಡಿಸಿದ್ದರೆ ಅವುಗಳನ್ನು ಸುಲಭವಾಗಿ ಬದಲಾಯಿಸಲು ಸಾಧ್ಯವಾಗುತ್ತಿತ್ತು. ಗೇಟ್‍ಗಳ ನವೀಕರಣಕ್ಕೆ ₹4ಕೋಟಿ ಟೆಂಡರ್ ಕರೆಯಲಾಗಿತ್ತು. ಗುತ್ತಿಗೆದಾರರು ಭಾಗವಹಿಸದ ಕಾರಣ ಮರು ಟೆಂಡರ್‌ಗೆ ಪ್ರಕ್ರಿಯೆ ಆರಂಭವಾದ ಸಂದರ್ಭದಲ್ಲೇ ಚುನಾವಣೆ ಘೋಷಣೆ ಆಗಿದೆ, ಹೀಗಾಗಿ ಟೆಂಡರ್ ಕರೆಯಲು ವಿಳಂಬವಾಗಿದೆ’ ಎಂದು ನೀರಾವರಿ ಇಲಾಖೆ (ಮಾಲವಿ ಜಲಾಶಯ) ಎಇಇ ಧರ್ಮರಾಜ್ ತಿಳಿಸಿದರು.

ಮಾಲವಿ ಜಲಾಶಯದ ಕ್ರಸ್ಟ್ ಗೇಟ್‍ಗಳನ್ನು ಜೆಸಿಬಿ ಯಂತ್ರದ ಸಹಾಯದಿಂದ ಸಿಬ್ಬಂದಿ ಮುಚ್ಚಿಸಿದರು (ಸಂಗ್ರಹ ಚಿತ್ರ)
ಮಾಲವಿ ಜಲಾಶಯದ ಕ್ರಸ್ಟ್ ಗೇಟ್‍ಗಳನ್ನು ಜೆಸಿಬಿ ಯಂತ್ರದ ಸಹಾಯದಿಂದ ಸಿಬ್ಬಂದಿ ಮುಚ್ಚಿಸಿದರು (ಸಂಗ್ರಹ ಚಿತ್ರ)
ನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಕ್ರಸ್ಟ್ ಗೇಟ್ ದುರಸ್ತಿಗೊಳಿಸಲಾಗಿಲ್ಲ. ಇದರ ನೆಪದಲ್ಲಿ ಕೇವಲ ಹಣ ಪೋಲಾಗಿದೆ. ಅಗತ್ಯವಿದ್ದರೆ ಅನ್ಯ ರಾಜ್ಯದ ತಂತ್ರಜ್ಞರ ಸಹಾಯ ಪಡೆಯಬೇಕು.
–ಬಿ.ಗೋಣಿಬಸಪ್ಪ, ರಾಜ್ಯ ರೈತ ಸಂಘದ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT