ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಂಪಿ ಹರಿಗೋಲು ಸವಾರಿ: ಪ್ರವಾಸಿಗರ ಸುಲಿಗೆ!

Published 25 ಡಿಸೆಂಬರ್ 2023, 23:30 IST
Last Updated 25 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿಯ ಚಕ್ರತೀರ್ಥ ತುಂಗಭದ್ರಾ ನದಿಯಲ್ಲಿ ಹರಿಗೋಲು (ತೆಪ್ಪ) ಸವಾರಿ ಮಾಡುವ ಪ್ರವಾಸಿಗರಿಗೆ ಸಿಕ್ಕಾಪಟ್ಟೆ ಶುಲ್ಕ ವಿಧಿಸಿ, ಸುಲಿಗೆ ಮಾಡುತ್ತಿರುವ ಕುರಿತು ಹಲವಾರು ಪ್ರವಾಸಿಗರು ದೂರಿದ್ದಾರೆ.

ಕೆಲವು ತಿಂಗಳಿನಿಂದಲೂ ಈ ದಂಧೆ ಮುಂದುವರಿದಿದ್ದು, ಅತಿಯಾದ ಶುಲ್ಕದ ಬಗ್ಗೆ ಕೇಳಿ ಅದೆಷ್ಟೋ ಪ್ರವಾಸಿಗರು ಹರಿಗೋಲು ಸವಾರಿ ಆಸೆಯನ್ನು ಬದಿಗೊತ್ತಿ ವಾಪಸಾಗಿದ್ದಾರೆ. ಪ್ರವಾಸಕ್ಕೆ ಬಂದರೆ ಹೀಗೆಲ್ಲ ದುಬಾರಿ ವೆಚ್ಚ ಅನಿವಾರ್ಯ ಎಂದು ಯೋಚಿಸುವ ಮಂದಿಯೇ ಅಧಿಕ ಸಂಖ್ಯೆಯಲ್ಲಿ ಇರುವುದನ್ನು ಮನಗಂಡಿರುವ ಹರಿಗೋಲು ನಿರ್ವಾಹಕರು ಪ್ರವಾಸಿಗರ ಆಕ್ಷೇಪಗಳಿಗೆ ಕಿವಿಗೊಡದೆ ತಮ್ಮ ಸುಲಿಗೆ ಮುಂದುವರಿಸಿದ್ದಾರೆ.

ಅರ್ಧ ಗಂಟೆ ಹರಿಗೋಲು ಸವಾರಿ ಮಾಡಿದರೆ ಒಬ್ಬರಿಗೆ ₹500, ಒಂದು ಗಂಟೆಗೆ ₹800 ಕೊಡಲೇಬೇಕು. ಐದು ವರ್ಷ ಮೇಲ್ಪಟ್ಟ ಮಕ್ಕಳಿಗೂ ಪೂರ್ತಿ ದುಡ್ಡು ಪಾವತಿ ಕಡ್ಡಾಯ. ಒಂದು ಹರಿಗೋಲಿನಲ್ಲಿ ಕನಿಷ್ಠ 5 ಮಂದಿ (ಹುಟ್ಟು ಹಾಕುವವರು ಸೇರಿದರೆ 6 ಮಂದಿ) ಕುಳಿತುಕೊಳ್ಳಬಹುದಾಗಿದ್ದು, ಇಬ್ಬರೇ ಸವಾರಿ ಮಾಡುವ ಮನಸ್ಸು ಮಾಡಿದರೆ ಐದು ಮಂದಿಯ ದುಡ್ಡನ್ನೂ (₹2,500) ಕೊಡಬೇಕಾಗುತ್ತದೆ.

ದರ ಪಟ್ಟಿಯನ್ನೂ ಹಾಕದೆ ಸುಲಿಗೆ ಮಾಡುತ್ತಿರುವ ಬಗ್ಗೆ ಹಲವಾರು ದೂರುಗಳು ‘ಪ್ರಜಾವಾಣಿ’ಗೆ ತಿಂಗಳಿಂದೀಚೆಗೆ ಬರುತ್ತಲೇ ಇದ್ದವು. ಈ ಬಗ್ಗೆ ಖಚಿತಪಡಿಸಿಕೊಳ್ಳಲು ಬೆಂಗಳೂರಿನಿಂದ ಬಂದಿದ್ದ ಪ್ರವಾಸಿ ಸ್ನೇಹಿತರೊಬ್ಬರ ಜತೆಗೆ ಹರಿಗೋಲು ಸವಾರಿ ಕುರಿತು ವಿಚಾರಿಸಿದಾಗ ಪ್ರವಾಸಿಗರು ದೂರಿದ್ದು ನಿಜ ಎಂಬುದು ಗೊತ್ತಾಯಿತು. ದರ ಕೇಳಿದ ಪ್ರವಾಸಿ ಸ್ನೇಹಿತ ಹರಿಗೋಲು ಸವಾರಿಯ ಆಸೆ ಕೈಬಿಟ್ಟರು.

‘ಪ್ರವಾಸಿ ತಾಣಗಳಲ್ಲಿ ದರಪಟ್ಟಿ ಹಾಕುವುದು ಕಡ್ಡಾಯ. ಇಲ್ಲಿ ದರಪಟ್ಟಿಯನ್ನು ಪ್ರವಾಸಿಗರಿಗೆ ಕಾಣುವ ರೀತಿಯಲ್ಲಿ ಅಳವಡಿಸಿಲ್ಲ. ಬೇಕಾಬಿಟ್ಟಿ ದರ ನಿಗದಿಪಡಿಸಿ ಪ್ರವಾಸಿಗರನ್ನು ಹೀಗೆ ಸುಲಿಗೆ ಮಾಡುವುದು ಸರಿಯಲ್ಲ. ಟಿಕೆಟ್ ಇಲ್ಲ, ಶುಲ್ಕ ಪಡೆದುದಕ್ಕೆ ರಸೀತಿ ಸಹ ಇಲ್ಲ. ಇದು ಹಗಲುದರೋಡೆಗೆ ಮತ್ತೊಂದು ಹೆಸರು ಅಲ್ಲವೇ?’ ಎಂದು  ಪ್ರವಾಸಿಗ ಸಂಪತ್‌ ದೂರಿದರು.

‘ಇಲ್ಲಿ ಒಂದು ರೀತಿಯ ದಬ್ಬಾಳಿಕೆಯ ವಾತಾವರಣ ಇದೆ. ಪ್ರಶ್ನಿಸಿದರೆ ರೇಗಿ ಮೇಲೆರಗಿ ಬರುವಂತಹ ಗೂಂಡಾ ಪ್ರವೃತ್ತಿಯೂ ಇದೆ. ಹಂಪಿಯಲ್ಲಿ ಇಂತಹದಕ್ಕೆಲ್ಲ ಅವಕಾಶ ನೀಡಿದ್ದು ಏಕಾಗಿ? ಹವಾಮಾ ಮತ್ತು ಜಿಲ್ಲಾಡಳಿತಕ್ಕೆ ಇದೆಲ್ಲ ಗೊತ್ತಿಲ್ಲವೇ’ ಎಂದು ಅವರು ಪ್ರಶ್ನಿಸಿದರು.

ಗೈಡ್‌ಗಳಿಗೂ ಪಾಲು?

ತೆಪ್ಪ ನಿಲ್ಲಿಸಿದ ಸ್ಥಳದಲ್ಲಿ ದೊಡ್ಡ ವ್ಯವಹಾರದ ಜಾಲವೇ ಬಿಚ್ಚಿಕೊಳ್ಳುತ್ತದೆ. ಪ್ರವಾಸಿ ಮಾರ್ಗದರ್ಶಕರು ಪ್ರವಾಸಿಗರನ್ನು ಕರೆದೊಯ್ದರೆ ಅವರಿಗೆ ಈ ಶುಲ್ಕದಲ್ಲಿ ಒಂದಿಷ್ಟು ಪಾಲು ಸಿಗುತ್ತದೆ ಎಂಬ ಆರೋಪವೂ ಕೇಳಿಬಂದಿದೆ.

₹3.5 ಲಕ್ಷ ಸಂಪಾದನೆ?

ಕ್ರಿಸ್‌ಮಸ್‌ ಸರಣಿ ರಜೆ ಹಿನ್ನೆಲೆಯಲ್ಲಿ ಹಂಪಿಗೆ ಶನಿವಾರ ಮತ್ತು ಭಾನುವಾರ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದರು. ಹರಿಗೋಲು ನಿರ್ವಾಹಕಕರಿಗೆ ಶನಿವಾರ ₹2.5 ಲಕ್ಷ ಮತ್ತು ಭಾನುವಾರ ₹3.5 ಲಕ್ಷ ಶುಲ್ಕ ರೂಪದಲ್ಲಿ ದೊರೆತಿದೆ ಎಂದು ಗುತ್ತಿಗೆ ಪಡೆದವರ ನಿಕಟ ಮೂಲಗಳು ತಿಳಿಸಿವೆ. 

ಸಿಕ್ಕಾಪಟ್ಟೆ ಹಣ ಸುಲಿಯುತ್ತಿರುವ ಬಗ್ಗೆ ಈಗಷ್ಟೇ ದೂರು ಕಿವಿಗೆ ಬಿದ್ದಿದೆ. ತಕ್ಷಣ ಗುತ್ತಿಗೆ ಪಡೆದವರಿಗೆ ನೋಟಿಸ್ ನೀಡಿ ವಿವರಣೆ ಕೇಳಲಾಗುವುದು.
ರಾಜೇಶ್ವರಿ, ಪಿಡಿಒ, ಬುಕ್ಕಸಾಗರ ಗ್ರಾಮ ಪಂಚಾಯಿತಿ
ಪ್ರವಾಸಿಗರ ಸುಲಿಗೆ ಸರಿಯಲ್ಲ: ಹರಿಗೋಲು ಸವಾರಿಗೆ ಪಾವತಿಸಬೇಕಾದ ದರಪಟ್ಟಿಯನ್ನು ತಕ್ಷಣ ಸ್ಥಳದಲ್ಲಿ ಅಳವಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು
ಎಂ.ಎಸ್‌.ದಿವಾಕರ್, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT