ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತಿ, ಸಂಭ್ರಮದಿಂದ ನೆರವೇರಿದ ತುಂಗಾ ಆರತಿ

Last Updated 25 ಜನವರಿ 2023, 16:37 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ಹಂಪಿ ಉತ್ಸವ’ದ ಅಂಗವಾಗಿ ಜಿಲ್ಲಾಡಳಿತದಿಂದ ಬುಧವಾರ ರಾತ್ರಿ ಹಂಪಿ ತುಂಗಭದ್ರಾ ನದಿ ತಟದಲ್ಲಿ ಹಮ್ಮಿಕೊಂಡಿದ್ದ ತುಂಗಾ ಆರತಿ ಕಾರ್ಯಕ್ರಮ ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮದಿಂದ ನೆರವೇರಿತು.

ನದಿ ತಟದ ಎಲ್ಲ ಸ್ಮಾರಕಗಳಿಗೆ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಬಂಡೆಗಲ್ಲುಗಳಿಗೆ ಸುಣ್ಣ ಬಳಿಯಲಾಗಿತ್ತು. ನದಿಯುದ್ದಕ್ಕೂ ದೀಪಗಳನ್ನು ಬೆಳಗಿಸಲಾಗಿತ್ತು. ಪ್ರಶಾಂತವಾಗಿ ಹರಿಯುತ್ತಿದ್ದ ತುಂಗಭದ್ರಾ ನದಿ ತಟದಲ್ಲಿ ನಿರ್ಮಿಸಿದ್ದ ಸುಂದರ ಮಂಟಪದಲ್ಲಿ ತಾಯಿ ಭುವನೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅನಂತರ ಮುಜರಾಯಿ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಸಂಸದ ವೈ. ದೇವೇಂದ್ರಪ್ಪ ಅವರು ಬಾಗಿನ ಸಮರ್ಪಿಸಿ, ಹಾಲು ಹಾಕಿದರು. ಬಳಿಕ ತುಂಗಭದ್ರೆಗೆ ಆರತಿ ಬೆಳಗಿದರು.

ಇದರೊಂದಿಗೆ ಹಂಪಿ ಉತ್ಸವದ ಕಾರ್ಯಕ್ರಮಗಳಿಗೆ ಚಾಲನೆ ಸಿಕ್ಕಂತಾಯಿತು. ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಮಾತನಾಡಿ, ಹಿಂದೂ ಧರ್ಮದಲ್ಲಿ ದೇವಸ್ಥಾನಗಳಲ್ಲಿ ಪಾವಿತ್ರ‍್ಯತೆ ಕಾಣುತ್ತೇವೆ. ದೇವರ ಮೇಲೆ ಇಟ್ಟಿರುವಷ್ಟೇ ಭಕ್ತಿ ನದಿಗೂ ನೀಡಿದ ಕಾರಣ ನದಿಗಳಿಗೆ ದೇವತೆ ಸ್ಥಾನ ನೀಡಿದ್ದೇವೆ. 12 ಜ್ಯೋರ್ತಿಲಿಂಗಗಳಲ್ಲಿ ಒಂದಾದ ಕಾಶಿಯಲ್ಲಿ ಆಯೋಜಿಸಲಾಗುವ ಗಂಗಾ ಆರತಿ ಮಾದರಿಯಲ್ಲಿ ತುಂಗಾಭದ್ರಾ ಆರತಿ ಹಮ್ಮಿಕೊಳ್ಳಲಾಗಿದೆ ಎಂದರು.

ಮೂಲಸೌಕರ್ಯಕ್ಕೆ ಮಾಸ್ಟರ್‌ ಪ್ಲ್ಯಾನ್ :
ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ಹಂಪಿಯಲ್ಲಿ ಪ್ರವಾಸಿಗರು, ಭಕ್ತರಿಗೆ ಮೂಲ ಸೌಕರ್ಯ ಒದಗಿಸಲು ಪ್ರವಾಸೋದ್ಯಮ ಇಲಾಖೆಯೊಂದಿಗೆ ಚರ್ಚಿಸಿ ಮಾಸ್ಟರ್ ಪ್ಲ್ಯಾನ್‌ ರೂಪಿಸಲಾಗುತ್ತದೆ ಎಂದು ಹೇಳಿದರು.

ಸಚಿವ ಆನಂದ್ ಸಿಂಗ್ ಮಾತನಾಡಿ, ಹಿಂದೂ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ ಪುಣ್ಯಕ್ಷೇತ್ರವಾಗಿ ಪ್ರಸಿದ್ಧವಾಗಿದೆ. ಹಂಪಿ ಉತ್ಸವದ ಮುಖ್ಯ ರೂವಾರಿ ಮಾಜಿಸಚಿವ ದಿವಂಗತ ಎಂ.ಪಿ.ಪ್ರಕಾಶ್ ಅವರನ್ನು ನೆನೆಯಬೇಕು. ಹಂಪಿ ಉತ್ಸವದ ಗತವೈಭವದ ಸಾಕ್ಷಿಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್‌., ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ ಕೆ, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಎಂ.ಪ್ರಕಾಶ್ ರಾವ್ ಇದ್ದರು.

₹17 ಕೋಟಿಯಲ್ಲಿ ಸ್ನಾನಘಟ್ಟ ಅಭಿವೃದ್ಧಿ
‘ಕಾಶಿಯಂತೆ ಹಂಪಿ ಸ್ನಾನಘಟ್ಟವನ್ನು ₹17 ಕೋಟಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಒಂದು ತಿಂಗಳಲ್ಲಿ ಕೆಲಸ ಆರಂಭವಾಗಲಿದೆ. ಇದರೊಂದಿಗೆ ಅಗತ್ಯ ಮೂಲಸೌಕರ್ಯ ಕೂಡ ಕಲ್ಪಿಸಲಾಗುವುದು. ಹಂಪಿ ಇತಿಹಾಸ, ಸ್ಮಾರಕಗಳನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT