ನದಿ ಜೋಡಣೆ ಯೋಜನೆಗೆ ರಾಜ್ಯಗಳು ಮುಂದೆ ಬರಲಿ: ಎಂ.ವೆಂಕಯ್ಯ ನಾಯ್ಡು

ಹೊಸಪೇಟೆ (ವಿಜಯನಗರ): ‘ನದಿ ಜೋಡಣೆ ಯೋಜನೆ ದೇಶದ ಜನರ ಕನಸಾಗಿದೆ. ಆ ಕನಸು ಈಡೇರಬೇಕು. ಈ ನಿಟ್ಟಿನಲ್ಲಿ ರಾಜ್ಯಗಳು ಮುಂದೆ ಬರಬೇಕು. ಎಲ್ಲ ನದಿಗಳ ನೀರು ಸೂಕ್ತ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡರೆ ರೈತರ ಬಾಳು ಹಸನಾಗುತ್ತದೆ. ದೇಶದ ಅಭಿವೃದ್ಧಿಯೂ ಆಗುತ್ತದೆ’ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದರು.
ಶುಕ್ರವಾರ ಸಂಜೆ ಇಲ್ಲಿನ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವೆಂಕಯ್ಯ ನಾಯ್ಡು, ‘ನಾನು ಕೂಡ ಒಬ್ಬ ರೈತನ ಮಗ. ದೇಶದ ಯಾವುದೇ ಜಲಾಶಯಕ್ಕೆ ಭೇಟಿ ಕೊಟ್ಟರೆ ನನಗೆ ಬಹಳ ಸಂತೋಷವಾಗುತ್ತದೆ. ಈ ವರ್ಷ ಜಲಾಶಯ ಸಂಪೂರ್ಣ ತುಂಬಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬೆಳೆಯಬಹುದು’ ಎಂದರು.
‘ಜಲಾಶಯಗಳು ಅಕ್ಷಯ ಪಾತ್ರವಿದ್ದಂತೆ. ಜನರ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಜಲಾಶಯ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ತುಂಬುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಸಂತಸದ ವಿಷಯ. ಭವಿಷ್ಯದ ವರ್ಷಗಳಲ್ಲಿಯೂ ಇದೇ ರೀತಿ ಜಲಾಶಯ ತುಂಬಲೆಂದು ಹಾರೈಸುತ್ತೇನೆ. ಜಲಾಶಯ ತುಂಬಿ ಹಿಂದುಳಿದ ಕರ್ನಾಟಕ, ತೆಲಂಗಾಣದ ಪ್ರದೇಶಗಳಿಗೆ ಒಳ್ಳೆಯದಾಗಲಿ. ಸಾಧ್ಯವಿರುವ ಎಲ್ಲ ಕಡೆಗಳಲ್ಲಿ ನೀರಿನ ಸಂಗ್ರಹಕ್ಕೆ ಒತ್ತು ಕೊಡಬೇಕು. ಇದರಿಂದ ಅಂತರ್ಜಲ ಹೆಚ್ಚಾಗುತ್ತದೆ’ ಎಂದು ಹೇಳಿದರು.
ಬಿಗಿ ಭದ್ರತೆಯಲ್ಲಿ ಹೊಸಪೇಟೆಗೆ ಉಪರಾಷ್ಟ್ರಪತಿ ನಾಯ್ಡು ಆಗಮನ
ಜಲಾಶಯದ ಮುಂದೆ ಕುಟುಂಬ ಸದಸ್ಯರ ಜೊತೆ ಸೆಲ್ಫಿ: ಪತ್ನಿ ಎಂ. ಉಷಾ ಹಾಗೂ ಕುಟುಂಬದ ಇತರೆ ಸದಸ್ಯರೊಂದಿಗೆ ತುಂಗಭದ್ರಾ ಜಲಾಶಯಕ್ಕೆ ಆಗಮಿಸಿದ ವೆಂಕಯ್ಯ ನಾಯ್ಡು, ಅಣೆಕಟ್ಟೆ ಮೇಲೆ ಕಾರಿನಲ್ಲಿ ತೆರಳಿದರು. ಬಳಿಕ ಕೆಲ ದೂರದ ವರೆಗೆ ಕಾಲ್ನಡಿಗೆಯಲ್ಲಿ ತೆರಳಿ, ಕ್ರಸ್ಟ್ಗೇಟ್ಗಳಿಂದ ನೀರು ಹರಿದು ಹೋಗುತ್ತಿರುವುದನ್ನು, ಜಲಾಶಯ ಹಿಂಭಾಗದಲ್ಲಿ ಸಂಗ್ರಹಗೊಂಡಿರುವ ನೀರನ್ನು ಹಾಗೂ ಸೂರ್ಯಾಸ್ತವನ್ನು ಕಣ್ತುಂಬಿಕೊಂಡರು. ಜಲಾಶಯದ ಅಂಚಿನಲ್ಲಿ ನಿಂತುಕೊಂಡು ಕುಟುಂಬ ಸದಸ್ಯರೊಡನೆ ಛಾಯಾಚಿತ್ರ, ಸೆಲ್ಫಿ ತೆಗೆದುಕೊಂಡರು. ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ಕಾರ್ಯದರ್ಶಿ ಜಿ. ನಾಗಮೋಹನ್ ಅವರು ವೆಂಕಯ್ಯ ನಾಯ್ಡು ಅವರನ್ನು ಸನ್ಮಾನಿಸಿ, ವಾರ್ಷಿಕ ವರದಿ ಒಪ್ಪಿಸಿದರು.
ಉಪರಾಷ್ಟ್ರಪತಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸ್ವಾಗತ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.